ಎಸ್ ಐಪಿಯಲ್ಲಿ 10 ಸಾವಿರದಿಂದ 10 ಕೋಟಿ ರೂ. ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ
ನಿವೃತ್ತಿ ಅನಂತರದ ಆರ್ಥಿಕ ಭದ್ರತೆಗಾಗಿ ನಾವು ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಯೋಜನೆ ಮಾಡುವುದು ಉತ್ತಮ. ಇದಕ್ಕಾಗಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಒಂದು ಆಯ್ಕೆಯಾಗಿದೆ. ಇದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ 10 ಕೋಟಿ ರೂ. ವರೆಗೆ ಲಾಭ ಪಡೆಯಬಹುದು ಎನ್ನುತ್ತಾರೆ ಹಣಕಾಸು ತಜ್ಞರಾದ ಅಶೋಕ್ ದೇವಾನಾಂಪ್ರಿಯ.
ಅಶೋಕ್ ದೇವಾನಾಂಪ್ರಿಯ -
ಬೆಂಗಳೂರು: ಉದ್ಯೋಗಕ್ಕೆ ಸೇರಿದಾಗಿನಿಂದ ಅಂದರೆ ಸರಿಸುಮಾರು 25 ವರ್ಷದಿಂದಲೇ ನಿವೃತ್ತಿ ಯೋಜನೆ (retirement plans investment) ಮಾಡಿಕೊಳ್ಳುವುದರಿಂದ ಒಂದು ಕುಟುಂಬಕ್ಕೆ ಸಂಪೂರ್ಣ ಆರ್ಥಿಕ ಭದ್ರತೆಯನ್ನು ನೀಡಬಹುದಾಗಿದೆ. ಇದಕ್ಕಾಗಿ ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ನಿವೃತ್ತಿ ಯೋಜನೆ ಮಾಡುವುದು ಉತ್ತಮ. ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan) ಇದಕ್ಕಾಗಿ ಇರುವ ಒಂದು ಆಯ್ಕೆಯಾಗಿದೆ. ಇದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ 10 ಕೋಟಿ ರೂ. ವರೆಗೆ ಲಾಭ ಪಡೆಯಬಹುದು ಎನ್ನುತ್ತಾರೆ ಹಣಕಾಸು ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya).
'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಮಾರು 25 ವರ್ಷದಿಂದ ನಿರಂತರವಾಗಿ 10,000 ರೂ. ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ವಯಸ್ಸಿಗೆ ಬರುವಾಗ ಅಂದರೆ ಹೂಡಿಕೆದಾರನ 60ನೇ ವರ್ಷದಲ್ಲಿ ಸರಿಸುಮಾರು 10 ಕೋಟಿ ರೂ. ಆಗಿರುತ್ತದೆ. ಬಳಿಕ ತಿಂಗಳಿಗೆ ಹತ್ತು ಲಕ್ಷ ರೂ. ವರೆಗೆ ಆದಾಯ ಪಡೆಯಬಹುದಾಗಿದೆ.
ಷೇರು ವ್ಯಾಪಾರ ಮಾರುಕಟ್ಟೆಯಲ್ಲೂ ಮಾಡಬೇಕು ಗೆರಿಲ್ಲಾ ವಾರ್
ಇನ್ನು ಹೂಡಿಕೆ ಪ್ರಾರಂಭಿಸುವಾಗ 30 ವರ್ಷವಾದರೆ ನಿವೃತ್ತಿ ವಯಸ್ಸಿಗೆ 5 ಕೋಟಿ ರೂ. ಉಳಿತಾಯವಾಗಿರುತ್ತದೆ. ಇದರಿಂದ ತಿಂಗಳಿಗೆ 5 ಲಕ್ಷ ರೂ. ಆದಾಯ ಪಡೆಯಬಹುದು. 35 ವರ್ಷದಿಂದ ಹೂಡಿಕೆ ನಿವೃತ್ತಿ ವಯಸ್ಸಿಗೆ 3 ಕೋಟಿ ರೂ. ಉಳಿತಾಯವಾಗಲಿದ್ದು, ತಿಂಗಳಿಗೆ 2 ಲಕ್ಷ ರೂ. 40 ವರ್ಷದಲ್ಲಿ ಉಳಿತಾಯ ಪ್ರಾರಂಭಿಸಿದರೆ ನಿವೃತ್ತಿ ವಯಸ್ಸಿಗೆ 1 ಕೋಟಿ ರೂ. ಅಗಲಿದ್ದು, 1 ಲಕ್ಷ ರೂ. ನಿವೃತ್ತಿ ಆದಾಯ ತಿಂಗಳಿಗೆ ಪಡೆಯಬಹುದಾಗಿದೆ ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.
ಸಮಯವೆಂದರೆ ಹಣ ಮತ್ತು ಶಕ್ತಿ ಎಂಬುದನ್ನು ವ್ಯವಸ್ಥಿತ ಹೂಡಿಕೆ ಯೋಜನೆ ತೋರಿಸಿಕೊಡುತ್ತದೆ. ಇಲ್ಲಿ ಎಷ್ಟು ಸಣ್ಣ ವಯಸ್ಸಿನಲ್ಲಿ ಉಳಿತಾಯ ಮಾಡಲು ಪ್ರಾರಂಭಿಸುತ್ತೇವೆಯೋ ಅಷ್ಟು ಒಳ್ಳೆಯದು. ಸಾಮಾನ್ಯವಾಗಿ ಸಂಬಳ ಬಂದಾಗ ನಾವು ಹೂಡಿಕೆ ಮೇಲೆ ಆಸಕ್ತಿ ತೋರುವುದಿಲ್ಲ. ಬದಲಾಗಿ ಕಾರು, ಮೊಬೈಲ್, ಬೈಕ್.. ಹೀಗೆ ಬೇರೆಬೇರೆ ಖರ್ಚುಗಳತ್ತ ಮನಸ್ಸು ಮಾಡುತ್ತೇವೆ. ಹೂಡಿಕೆ ಯೋಜನೆ ಮಾಡುವಾಗ ಮೊದಲು ಉಳಿತಾಯಕ್ಕೆ ಹಣ ಎತ್ತಿಟ್ಟು ಬಳಿಕ ಉಳಿದಿರುವುದರಲ್ಲಿ ಖರ್ಚು ಮಾಡುವುದು ಒಳ್ಳೆಯದು. ಆದರೆ ನಾವೆಲ್ಲ ಮೊದಲು ಖರ್ಚಿಗೆ ಎತ್ತಿಟ್ಟು ಉಳಿದಿರುವುದನ್ನು ಉಳಿತಾಯ ಮಾಡುವ ಯೋಜನೆ ಮಾಡುತ್ತೇವೆ. ಇದು ತಪ್ಪು ಎನ್ನುತ್ತಾರೆ ಅಶೋಕ್.
ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ತಂದೆ ಬಳಿಕ ಮಗ, ಮಗನ ಬಳಿಕ ಮೊಮ್ಮಗ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಆಗ ಸಂಪೂರ್ಣ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಬಹುದಾಗಿದೆ. ಇವತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳು ನೌಕರಿ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ನಾವು ಆದಷ್ಟು ಸಣ್ಣ ವಯಸ್ಸಿನಲ್ಲೇ ನಿವೃತ್ತಿ ಉಳಿತಾಯವನ್ನು ಪ್ರಾರಂಭಿಸುವುದು ಒಳ್ಳೆಯದು. ಇದರಿಂದ ಮುಂದೆ ಸಾಕಷ್ಟು ಸುರಕ್ಷಿತವಾಗಿ ಜೀವನ ನಡೆಸಬಹುದು ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.
ಸಾಮಾನ್ಯವಾಗಿ ನಾವು ನಿವೃತ್ತಿ ಯೋಜನೆ ಮಾಡುವುದು 40ರ ವಯಸ್ಸಿನ ಬಳಿಕ. ಆದರೆ ಸಣ್ಣ ವಯಸ್ಸಿನಲ್ಲಿಹೂಡಿಕೆ ಪ್ರಾರಂಭಿಸುವುದರಿಂದ 10 ಸಾವಿರ ರೂಪಾಯಿಯನ್ನು 10 ಸಾವಿರ ಪಟ್ಟು ಬೆಳೆಸಬಹುದು. ಆದರೆ ಅದಕ್ಕೆ ನಿಯಮಿತ ಶಿಸ್ತು ಪಾಲಿಸುವುದು ಮುಖ್ಯವಾಗಿರುತ್ತದೆ. ಎಸ್ ಐಪಿಯಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಆದರೆ ಹಣ ಕೂಡ ಹೆಚ್ಚಳವಾದರೆ, ಇಳಿಕೆಯಾದಾಗ ಖರೀದಿಯನ್ನು ಕಡಿಮೆ ದರದಲ್ಲಿ ಮಾಡಬಹುದು. ಹೀಗಾಗಿ ಮಾರುಕಟ್ಟೆ ಬಿದ್ದಾಗ ನಾವು ಇದನ್ನು ನಿಲ್ಲಿಸುವುದು ಸರಿಯಲ್ಲ. ಏನೂ ಸಮಸ್ಯೆ ಇಲ್ಲದೇ ಇದ್ದರೆ ಇದನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ ಎನ್ನುತ್ತಾರೆ ಅಶೋಕ್.