Stock Market: ಉತ್ತಮ ಸ್ಟಾಕ್ ಖರೀದಿಗೆ ಈಗ ಸಕಾಲ? ತಜ್ಞರ ಅಭಿಮತ
Stock Market: ಜಾಗತಿಕ ಮಾರುಕಟ್ಟೆಯ ತಲ್ಲಣಗಳು, ಟ್ರೇಡ್ ವಾರ್‌ಗಳ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲಿಯೂ ಸೂಚ್ಯಂಕಗಳು ಕುಸಿದಿವೆ. ಹೀಗಿದ್ದರೂ, ಈಗಲೂ ಇಂಡಿಯನ್ ಸ್ಟಾಕ್ಸ್ ಬಹಳ ಆಕರ್ಷಕವಾಗಿವೆ. ಷೇರು ಮಾರುಕಟ್ಟೆ ಈಗ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುತ್ತಿರುವವರ ತಾಣವಾಗಿದೆ ಎಂದು ರಿಧಾಮ್ ದೇಸಾಯ್ ಅವರು ವಿವರಿಸಿದ್ದಾರೆ


- ಕೇಶವ ಪ್ರಸಾದ್.ಬಿ
ಮುಂಬೈ: ನೀವೆಲ್ಲ ಸುಮಾರು ಐದು ತಿಂಗಳಿನಿಂದ ನಿರಂತರವಾಗಿ ಸ್ಟಾಕ್ ಮಾರ್ಕೆಟ್(Stock Market)ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯ ಕುಸಿತವನ್ನು ಕಂಡು ಕಂಗಾಲಾಗಿರಬಹುದು. ಅನೇಕ ಮಂದಿ ಹೂಡಿಕೆಯನ್ನು ನಿಲ್ಲಿಸಿದ್ದಾರೆ. ಮ್ಯೂಚುವಲ್ ಫಂಡ್ ಸಿಪ್‌ಗಳನ್ನೂ ಕಟ್ಟುತ್ತಿಲ್ಲ. ಆದರೆ ಅಷ್ಟೊಂದು ನಿರಾಶೆಗೀಡಾಗಬೇಕಾದ ಅಗತ್ಯ ಇಲ್ಲ. ಇದನ್ನು ನಾವು ಹೇಳೋದಕ್ಕಿಂತಲೂ, ದೇಶ-ವಿದೇಶಗಳ ಹಣಕಾಸು ಸಂಸ್ಥೆಗಳ ವರದಿಗಳು ಮತ್ತು ಅವುಗಳ ಮುಖ್ಯಸ್ಥರು ಹೇಳಿದ್ರೆ ಇನ್ನೂ ಚೆನ್ನಾಗಿರುತ್ತದೆ. ಅಂಥ ಒಂದು ಕುತೂಹಲಕರ ಹೇಳಿಕೆಯನ್ನು ಅಮೆರಿಕ ಮೂಲದ ಬಹುರಾಷ್ಟ್ರೀಯ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನ ಭಾರತೀಯ ಘಟಕದ ಮುಖ್ಯಸ್ಥರಾದ ರಿಧಾಮ್ ದೇಸಾಯ್ ಅವರು ಕೊಟ್ಟಿದ್ದಾರೆ. ಅವರ ಮಾತುಗಳನ್ನು ಕೇಳಿದ್ರೆ ನಿಮ್ಮಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚದೆ ಇರಲಿಕ್ಕೆ ಸಾಧ್ಯವೇ ಇಲ್ಲ. ಹಾಗಾದ್ರೆ ಮೋರ್ಗಾನ್ ಸ್ಟಾನ್ಲಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ರಿಧಾಮ್ ದೇಸಾಯ್ ಅವರು ಭಾರತೀಯ ಸ್ಟಾಕ್ ಮಾರ್ಕೆಟ್‌ನ ಈಗಿನ ಸ್ಥಿತಿಗತಿ ಮತ್ತು ಭವಿಷ್ಯದ ಬಗ್ಗೆ ಏನು ಹೇಳುತ್ತಾರೆ? ತಿಳಿಯೋಣ.
ಜಾಗತಿಕ ಮಾರುಕಟ್ಟೆಯ ತಲ್ಲಣಗಳು, ಟ್ರೇಡ್ ವಾರ್‌ಗಳ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲಿಯೂ ಸೂಚ್ಯಂಕಗಳು ಕುಸಿದಿವೆ. ಹೀಗಿದ್ದರೂ, ಈಗಲೂ ಇಂಡಿಯನ್ ಸ್ಟಾಕ್ಸ್ ಬಹಳ ಆಕರ್ಷಕವಾಗಿವೆ. ಷೇರು ಮಾರುಕಟ್ಟೆ ಈಗ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುತ್ತಿರುವವರ ತಾಣವಾಗಿದೆ. Indian stocks are now looking atractive, with a stock pickers market unfolding ಎಂದು ರಿಧಾಮ್ ದೇಸಾಯ್ ಅವರು ವಿವರಿಸಿದ್ದಾರೆ.
ಈ ವರ್ಷದ ಮುಂಬರುವ ತಿಂಗಳುಗಳಲ್ಲಿ ಭಾರತೀಯ ಸ್ಟಾಕ್ ಮಾರ್ಕೆಟ್, ಕಳೆದು ಹೋಗಿರುವ ತನ್ನ ಲಯವನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಷೇರುಗಳ ವಾಲ್ಯುಯೇಶನ್ ದೃಷ್ಟಿಯಿಂದ ಈಗ ಆಕರ್ಷಿಸುತ್ತಿದೆ. ಕೋವಿಡ್ 19 ಪ್ಯಾಂಡಮಿಕ್ ಬಳಿಕ ಅಗ್ಗದ ದರದಲ್ಲಿ ಉತ್ತಮ ಷೇರುಗಳು ಈಗ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಅವುಗಳನ್ನು ಪರಿಶೀಲಿಸಿ ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ಆದಾಯ ಪಡೆಯಬಹುದು ಎಂದು ದೇಸಾಯ್ ಅವರು ವಿಶ್ವಾಸ ವ್ಯಕ್ತಪಡಿಸಿರುವುದು ಗಮನಾರ್ಹ.
ಮುಖ್ಯವಾಗಿ ಈಗ ಭಾರತದ ಸ್ಟಾಕ್ ಮಾರ್ಕೆಟ್, ಸ್ಟಾಕ್ ಪಿಕರ್ಸ್ ಮಾರ್ಕೆಟ್ ಆಗಿ ಬದಲಾಗುತ್ತಿದೆ ಎಂದು ರಿಧಾಮ್ ದೇಸಾಯ್ ಹೇಳಿದ್ದಾರೆ. ಅಂದ್ರೆ ಹೂಡಿಕೆದಾರರು ಭವಿಷ್ಯದಲ್ಲಿ ಲಾಭ ಗಳಿಸಬಹುದಾದ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಲು ಆರಂಭಿಸಿದ್ದಾರೆ ಎಂದರ್ಥ. ಜತೆಗೆ ಇತ್ತೀಚಿನ ತಿಂಗಳುಗಳಲ್ಲಿ ಕಾರ್ಪೊರೇಟ್ ವಲಯದ ಗಳಿಕೆ ಕೂಡ ಸುಧಾರಿಸುತ್ತಿದೆ. ಇದು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಒಳನೋಟವನ್ನು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಪ್ರಬಲ ಬಜೆಟ್, ಆರ್‌ಬಿಐನ ಪೂರಕ ನೀತಿಗಳ ಪರಿಣಾಮ ಫೆಬ್ರವರಿಯ ಬಳಿಕ ಪಾಸಿಟಿವ್ ಡೆವಲಪ್‌ಮೆಂಟ್‌ಗಳು ನಡೆದಿವೆ. ಇಕಾನಮಿಯ ಫಂಡಮೆಂಟಲ್‌ಗಳು ಸುಧಾರಣೆಯ ಹಾದಿಯಲ್ಲಿವೆ. ಹೀಗಾಗಿ 2025ರ ಉಳಿದ ಭಾಗ ಸ್ಟಾಕ್ ಮಾರ್ಕೆಟ್ ದೃಷ್ಟಿಯಿಂದ ಟರ್ನಿಂಗ್ ಪಾಯಿಂಟ್ ಆಗಬಹುದು ಎನ್ನುತ್ತಾರೆ ದೇಸಾಯ್. ಭಾರತವು ಸೇವಾ ಕ್ಷೇತ್ರದ ರಫ್ತಿನಲ್ಲಿ ಪ್ರಬಲವಾಗಿದ್ದು, ಇದಕ್ಕೆ ಪಾಲಿಸಿ ಸಪೋರ್ಟ್ ಕೂಡ ಸಿಗುತ್ತಿದೆ. ದೇಶದಿಂದ ಸರಕುಗಳ ರಫ್ತು ಕಡಿಮೆಯಾಗಿರುವುದರಿಂದ ಜಿಡಿಪಿಯಲ್ಲಿ ಅದರ ಪಾಲು ಅತ್ಯಲ್ಪ. ಆದ್ದರಿಂದ ಟ್ರೇಡ್ ವಾರ್‌ನ ನೆಗೆಟಿವ್ ಎಫೆಕ್ಟ್ ಕೂಡ ಭಾರತಕ್ಕೆ ಕಡಿಮೆ. ಹೀಗಾಗಿ ದೇಶದ ಭವಿಷ್ಯದ ಬೆಳವಣಿಗೆ ಬಗ್ಗೆ ಆತಂಕ ಬೇಡ ಎಂದು ರಿಧಾಮ್ ದೇಸಾಯ್ ಅವರು ಹೇಳುತ್ತಾರೆ.
ಸರಕಾರವು ಮೂಲ ಸೌಕರ್ಯ ಮತ್ತು ಸಾರ್ವಜನಿಕ ಯೋಜನೆಗಳಿಗೆ ಮಾಡುತ್ತಿರುವ ಖರ್ಚುಗಳು, ಬಡ್ಡಿ ದರಗಳ ಇಳಿಕೆಯ ನೀತಿ ಮತ್ತು ಸೇವಾ ಕ್ಷೇತ್ರದ ರಫ್ತು ಹೆಚ್ಚಳದಿಂದ ಆರ್ಥಿಕ ಬೆಳವಣಿಗೆ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿನ ವರದಿಗಳ ಪ್ರಕಾರ ಭಾರತದ ಸ್ಟಾಕ್ ಮಾರ್ಕೆಟ್‌ಗೆ ಪಾಸಿಟಿವ್ ಆಗಿರುವ ಬೆಳವಣಿಗೆಗಳು ಕಾಣಿಸುತ್ತಿವೆ. ಅವುಗಳನ್ನು ಒಂದೊಂದಾಗಿ ನೋಡೋಣ.
ಮೊದಲನೆಯದಾಗಿ, ಮುಂಬರುವ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಕಾರ್ಪೊರೇಟ್ ವಲಯದ ಕಂಪನಿಗಳು ತಮ್ಮ ಬಿಸಿನೆಸ್ ಚಟುವಟಿಕೆಗಳನ್ನು ವ್ಯಾಪಕವಾಗಿ ವಿಸ್ತರಿಸಲು, ಹೊಸ ಬಂಡವಾಳ ಹೂಡಿಕೆ ಮಾಡಲು ಮತ್ತು ನೇಮಕಾತಿಗಳನ್ನು ಹೆಚ್ಚಿಸಲು ಉದ್ದೇಶಿಸಿವೆ. ಹೀಗಾಗಿ ಮುಂದಿನ ಏಪ್ರಿಲ್-ಜೂನ್ ಅವಧಿಯಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಮುಖ್ಯವಾಗಿ ಐಟಿ, ಇಂಡಸ್ಟ್ರಿಯಲ್, ಫೈನಾನ್ಷಿಯಲ್ ಸೆಕ್ಟರ್‌ನಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಇಕನಾಮಿಕ್ ಟೈಮ್ಸ್ ವರದಿಯು, ಮ್ಯಾನ್ ಪವರ್ ಗ್ರೂಪ್ ಎಂಪ್ಲಾಯಿಮೆಂಟ್ ಔಟ್‌ಲುಕ್ ಸರ್ವೇಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಸಮೀಕ್ಷೆಯಲ್ಲಿ 3,150 ಕಂಪನಿಗಳನ್ನು ಸಮೀಕ್ಷೆ ಮಾಡಲಾಗಿದ್ದು, 55% ಕಂಪನಿಗಳು ಏಪ್ರಿಲ್-ಜೂನ್‌ನಲ್ಲಿ ನೇಮಕಾತಿಗಳನ್ನು ಮಾಡುವುದಾಗಿ ತಿಳಿಸಿವೆ.
ಹಾಗಾದ್ರೆ ಯಾವೆಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ ಎಂದು ನೋಡೋದಿದ್ರೆ, ಇನ್‌ಫಾರ್ಮೇಶನ್ ಟೆಕ್ನಾಲಜಿ ಅಥವಾ ಐಟಿ ಸೆಕ್ಟರ್‌ನಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಸಿಗಲಿವೆ. ಎರಡನೆಯದಾಗಿ ಇಂಡಸ್ಟ್ರಿಯಲ್ & ಮೆಟೀರಿಯಲ್ಸ್, ಫೈನಾನ್ಷಿಯಲ್ & ರಿಯಲ್ ಎಸ್ಟೇಟ್, ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸ್, ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಆಟೊಮೇಟಿವ್ ಕ್ಷೇತ್ರಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ನಿರೀಕ್ಷಿಸಲಾಗಿದೆ.
ಹಾಗೆ, ನೋಡಿದ್ರೆ ಅಮೆರಿಕದ ವಾಲ್ ಸ್ಟ್ರೀಟ್ ಅಥವಾ ಸ್ಟಾಕ್ ಮಾರ್ಕೆಟ್‌ಗೆ ಸಂಭವಿಸಿರುವ ಕ್ರ್ಯಾಶ್‌ನ ತೀವ್ರತೆ ಅತ್ಯಂತ ಅಪಾರವಾಗಿದೆ. ಇಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಅಮೆರಿಕದ ಸ್ಟಾಕ್ ಮಾರ್ಕೆಟ್‌ನಲ್ಲಿ ಲಿಸ್ಟ್ ಆಗಿರುವ S&P 500 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 4 ಲಕ್ಷ ಕೋಟಿ ಡಾಲರ್ ನಷ್ಟ ಸಂಭವಿಸಿದೆ. ಅಂದರೆ ಬಹುತೇಕ ಭಾರತದ ಇಡೀ ಸ್ಟಾಕ್ ಮಾರ್ಕೆಟ್‌ನ ಮಾರುಕಟ್ಟೆ ಬಂಡವಾಳ ಮೌಲ್ಯದಷ್ಟು ಮೊತ್ತ ಅಲ್ಲಿ ಕರಗಿದೆ.
ಇನ್ನು, ಗೋಲ್ಡ್‌ಮನ್ ಸ್ಯಾಕ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥರಾದ ಜೇಮ್ಸ್ ರೆನಾಲ್ಡ್ಸ್ ಆಸಕ್ತಿಕರ ಅಂಶಗಳನ್ನು ತಿಳಿಸಿದ್ದಾರೆ. ಸ್ಟಾಕ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡುವವರು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಜೇಮ್ಸ್ ರೆನಾಲ್ಡ್ಸ್ ಹೀಗೆನ್ನುತ್ತಾರೆ- Even as tariffs and other shocks are expected to rattle the global economy in 2025, India will likely remain insulated. Thanks to a strong push in manufacturing and infrastructure, the Indian economy is “buzzing with energy and optimism
2025ರಲ್ಲಿ ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಸಂಘರ್ಷ, ತೆರಿಗೆ ಸಮರ ಮುಂತಾದ ಆಘಾತಗಳು ಎದುರಾದರೂ, ಭಾರತಕ್ಕೆ ಅಂಥ ಪ್ರತಿಕೂಲ ಪರಿಣಾಮ ಉಂಟಾಗದು. ಏಕೆಂದರೆ ಇಲ್ಲಿ ಉತ್ಪಾದನೆ ಮತ್ತು ಮೂಲಸೌಕರ್ಯ ವಲಯದಲ್ಲಿ ಪ್ರಬಲ ಬೆಳವಣಿಗೆ ನಡೆಯುತ್ತಿದೆ. ಹೀಗಾಗಿಯೇ ಇಂಡಿಯನ್ ಇಕಾನಮಿಯಲ್ಲಿ ಉತ್ಸಾಹ ಕಂಡು ಬರುತ್ತಿದೆ ಎಂದು ವಿವರಿಸುತ್ತಾರೆ ಜೇಮ್ಸ್ ರೆನಾಲ್ಡ್ಸ್.
ಈ ಸುದ್ದಿಯನ್ನೂ ಓದಿ: Donald Trump: ಏಕಾಏಕಿ ಕುಸಿದ ಟೆಸ್ಲಾ ಷೇರು; ಮಸ್ಕ್‌ಗೆ ಬೆಂಬಲವಾಗಿ ಹೊಸ ಕಾರು ಖರೀದಿಸಿದ ಟ್ರಂಪ್
ಭಾರತದ ಜಿಡಿಪಿಯಲ್ಲಿ Domestic consumtion ಸುಮಾರು 70% ಇದೆ. ಏನಿದು ಡೊಮೆಸ್ಟಿಕ್ ಕನ್ಸಂಪ್ಷನ್ ಅಂತ ನೀವು ಕೇಳಬಹುದು. ಇದು ತುಂಬ ಸಿಂಪಲ್. ಡೊಮೆಸ್ಟಿಕ್ ಕನ್ಸಂಪ್ಷನ್ ಅಂದ್ರೆ ದೇಶದ ಒಳಗೆಯೇ ನಡೆಯುವ ಸರಕು ಮತ್ತು ಸೇವೆಗಳ ಖರೀದಿ ಮತ್ತು ಬಳಕೆ. ಹೀಗಾಗಿ ಭಾರತದಲ್ಲಿ ಸಾಮಾನ್ಯವಾಗಿ ಬೆಲೆ ಏರಿಕೆ ಅಥವಾ ಇನ್‌ಫ್ಲೆಶನ್ ಮಟ್ಟ ಯಾವಾಗಲೂ ಸ್ವಲ್ಪ ಜಾಸ್ತಿಯೇ ಇರುತ್ತದೆ. ಹೀಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಭಾರತವು ಇತರ ಎಮರ್ಜಿಂಗ್ ಇಕನಾಮಿಕ್ಸ್ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಚೆನ್ನಾಗಿ ಹಣದುಬ್ಬರವನ್ನು ನಿಯಂತ್ರಿಸಿದೆ ಎಂದು ವಿವರಿಸುತ್ತಾರೆ ಜೇಮ್ಸ್ ರೆನಾಲ್ಡ್ಸ್.
ಇದಕ್ಕೆ ಕಾರಣ ಕೇಂದ್ರದಲ್ಲಿರುವ ಸ್ಥಿರ ಮತ್ತು ಪ್ರಬಲ ಸರಕಾರ, ಆರ್‌ಬಿಐನ ನೀತಿಗಳು ಮತ್ತು ಹಣಕಾಸು ವ್ಯವಸ್ಥೆಯ ಸುಧಾರಣೆ ಎನ್ನುತ್ತಾರೆ ಅವರು. ಕೊನೆಯದಾಗಿ ಅಮೆರಿಕದ ಅಧ್ಯಕ್ಷ ನಡೆಸುತ್ತಿರುವ ಟಾರಿಫ್ ವಾರ್ ಭಾರತದ ಮೇಲೆ ಪರಿಣಾಮ ಬೀರಲಿದೆಯೇ? ಅದರ ಸಾಧ್ಯತೆ ಕಡಿಮೆ. ಏಕೆಂದರೆ ಭಾರತವು ಅಮೆರಿಕಕ್ಕೆ ಮಾಡುತ್ತಿರುವ ರಫ್ತು ಜಿಡಿಪಿಯ ಕೇವಲ 2% ಮಾತ್ರ. ಹೀಗಾಗಿ ಅದರ ಬಗ್ಗೆ ಆತಂಕ ಬೇಡ ಎನ್ನುತ್ತಾರೆ ತಜ್ಞರು. ಹೀಗಾಗಿ ಕೋವಿಡ್ ಬಿಕ್ಕಟ್ಟಿನ ಬಳಿಕ ಅಗ್ಗವಾಗಿರುವ ಸ್ಟಾಕ್ ಮಾರ್ಕೆಟ್‌ನಲ್ಲಿ ಉತ್ತಮ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಬಹುದು ಎನ್ನುತ್ತಾರೆ ತಜ್ಞರು.