Pravasi Prapancha: ಬಂಗಾರ ಅಡವಿಟ್ಟು 30 ಕೋಟಿ ರುಪಾಯಿ ಸಾಮ್ರಾಜ್ಯ ಕಟ್ಟಿದ ಕಥೆ
Malgudi Amrutha Chaha: 2020ರಲ್ಲಿ ಇಡೀ ಜಗತ್ತನ್ನೇ ಕೋವಿಡ್ ಆವರಿಸಿದಾಗ ಶಿವರಾಜಕುಮಾರ್ ಅವರ ಬದುಕು ತಲ್ಲಣಿಸಿತು. ಕಂಪೆನಿಯಲ್ಲಿ ಉಂಟಾದ ಸ್ಟ್ರೈಕ್ ಹಾಗೂ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಲು ಮತ್ತು ಮನೆಗೆ ರೇಷನ್ ತರಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಕಣ್ಣೆದುರೇ ಕತ್ತಲು ಆವರಿಸಿದಾಗ ಅವರು ತಮ್ಮ ಬದುಕಿನ ಅತ್ಯಂತ ದೊಡ್ಡ ನಿರ್ಧಾರ ಕೈಗೊಂಡರು. ಮನೆಯಲ್ಲಿದ್ದ ಚಿನ್ನದ ಒಡವೆಯನ್ನು ಅಡವಿಟ್ಟರು. ಆ ಹಣವನ್ನು ಬಂಡವಾಳವಾಗಿಸಿ, ಚಹಾ ಉದ್ಯಮಕ್ಕೆ ಕೈಹಾಕಿದರು.
ಶಿವರಾಜಕುಮಾರ್ -
ಬೆಂಗಳೂರಿನ ಸಾಂಸ್ಕೃತಿಕ ಬೇರುಗಳಾದ ಮಲ್ಲೇಶ್ವರಂ ಮತ್ತು ಬಸವನಗುಡಿಯ ಸಮ್ಮಿಲನವೇ 'ಮಾಲ್ಗುಡಿ'. ಆರ್.ಕೆ. ನಾರಾಯಣ್ ಅವರ ಕಾದಂಬರಿ ಹಾಗೂ ಶಂಕರ್ ನಾಗ್ ಅವರ ದೃಶ್ಯಕಾವ್ಯದ ಮೂಲಕ ಇಡೀ ಭಾರತದ ಮನಸು ಗೆದ್ದ ಈ ಹೆಸರನ್ನು ಇಂದು ಕರ್ನಾಟಕದ ಮನೆಮನೆಗೆ ತಲುಪಿಸಿರುವ ಮತ್ತೊಂದು ಹೆಮ್ಮೆಯ ಬ್ರ್ಯಾಂಡ್ ಎಂದರೆ ‘ಮಾಲ್ಗುಡಿ ಅಮೃತ ಚಹಾ’ (Malgudi Amrutha Chaha). ಕೇವಲ 5 ವರ್ಷಗಳ ಹಿಂದೆ ಒಂದು ಸಣ್ಣ ಮಳಿಗೆಯಿಂದ ಆರಂಭವಾದ ಈ ಸಂಸ್ಥೆ, ಇಂದು ರಾಜ್ಯಾದ್ಯಂತ 80ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದ್ದು, ವರ್ಷಕ್ಕೆ ಸರಾಸರಿ 30 ಕೋಟಿ ರುಪಾಯಿ ಟರ್ನ್‌ಓವರ್ ಮಾಡುವ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಆದರೆ, ಈ ಯಶಸ್ಸಿನ ಹಿಂದೆ ಇರುವುದು ಹುಲ್ಲುಗಾವಲಿನ ಮೇಲೆ ನಡೆದಷ್ಟು ಸುಲಭದ ಪಯಣವಲ್ಲ, ಬೆವರು ಮತ್ತು ಕಣ್ಣೀರಿನ ಕಠಿಣ ಪಯಣ.
ಹಳ್ಳಿಯ ಹಿನ್ನೆಲೆ ಮತ್ತು ಕಠಿಣ ದಿನಗಳು
ಈ ಯಶಸ್ಸಿನ ರೂವಾರಿ ಶಿವರಾಜಕುಮಾರ್ ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ. ಮಧ್ಯಮ ವರ್ಗದ ತೊಳಲಾಟದ ಜೀವನ ಅವರದಾಗಿತ್ತು. ಮನೆಯ ಪರಿಸ್ಥಿತಿಯಿಂದಾಗಿ ಪಿಯುಸಿ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂತು. ಆದರೆ ಅವರು ಧೃತಿಗೆಡಲಿಲ್ಲ. ಜೀವನ ನಡೆಸುವುದು ಅನಿವಾರ್ಯವಾಗಿದ್ದರಿಂದ ಕೊರಿಯರ್ ಬಾಯ್ ಆಗಿ, ಪೇಪರ್ ಹಾಕುವವರಾಗಿ, ಹೊಟೇಲ್ ಕಾರ್ಮಿಕರಾಗಿ ಸಿಕ್ಕ ಸಿಕ್ಕ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದರು. ತದನಂತರ ಐಟಿಐ ಮುಗಿಸಿದ ಅವರಿಗೆ ಜಪಾನ್ ಮೂಲದ ಪ್ರಸಿದ್ಧ ವಾಹನ ತಯಾರಿಕಾ ಸಂಸ್ಥೆಯಾದ 'ಟೊಯೊಟಾ' ಕಂಪೆನಿಯಲ್ಲಿ ಅಸೆಂಬ್ಲಿ ಲೈನ್‌ನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿದರು.

ಬಂಗಾರ ಅಡವಿಟ್ಟ ಕ್ಷಣ
2020ರಲ್ಲಿ ಇಡೀ ಜಗತ್ತನ್ನೇ ಕೋವಿಡ್ ಆವರಿಸಿದಾಗ ಶಿವರಾಜಕುಮಾರ್ ಅವರ ಬದುಕು ತಲ್ಲಣಿಸಿತು. ಕಂಪೆನಿಯಲ್ಲಿ ಉಂಟಾದ ಸ್ಟ್ರೈಕ್ ಹಾಗೂ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಲು ಮತ್ತು ಮನೆಗೆ ರೇಷನ್ ತರಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಕಣ್ಣೆದುರೇ ಕತ್ತಲು ಆವರಿಸಿದಾಗ ಅವರು ತಮ್ಮ ಬದುಕಿನ ಅತ್ಯಂತ ದೊಡ್ಡ ನಿರ್ಧಾರ ಕೈಗೊಂಡರು. ಮನೆಯಲ್ಲಿದ್ದ ಚಿನ್ನದ ಒಡವೆಯನ್ನು ಅಡವಿಟ್ಟರು. ಆ ಹಣವನ್ನು ಬಂಡವಾಳವಾಗಿಸಿ, ಚಹಾ ಉದ್ಯಮಕ್ಕೆ ಕೈಹಾಕಿದರು.
ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ
ಗುಣಮಟ್ಟದ ಗುಟ್ಟು (SOP)
ಮಾಲ್ಗುಡಿ ಚಹಾದಲ್ಲಿ ಹಾಲು ಕುದಿಸುವ ಸಮಯ, ಹಾಲಿನ ಪ್ರಮಾಣ, ಚಹಾ ಪುಡಿ ಮತ್ತು ಮಸಾಲೆಯ ತೂಕವನ್ನು ಗ್ರಾಂ ಲೆಕ್ಕದಲ್ಲಿ ನಿಗದಿಪಡಿಸಲಾಗಿದೆ (Standard Operating Procedure). ಇದಕ್ಕಾಗಿ ಕೆಲಸಗಾರರಿಗೆ 15 ದಿನಗಳ ತರಬೇತಿ ನೀಡಲಾಗುತ್ತದೆ. ಹಾಗಾಗಿಯೇ ನೀವು ಬೆಂಗಳೂರು, ಹಾಸನ ಅಥವಾ ಗದಗ ಯಾವುದೇ ಊರಿನ ಮಾಲ್ಗುಡಿ ಔಟ್‌ಲೆಟ್‌ಗೆ ಹೋದರೂ ಒಂದೇ ರೀತಿಯ ಅದ್ಭುತ ರುಚಿ ಸಿಗುತ್ತದೆ.
ಮಾಲ್ಗುಡಿ ಹೇಗೆ ಭಿನ್ನ?
ಕೆಮಿಕಲ್ ಮುಕ್ತ ಚಹಾ: ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಣ್ಣ ಅಥವಾ ಪ್ರಿಸರ್ವೇಟಿವ್ಸ್ ಬಳಸದೆ, ಅಸ್ಸಾಂನ ಗಾರ್ಡನ್‌ಗಳಿಂದ ನೇರವಾಗಿ ತಂದ ಅತ್ಯುನ್ನತ ಗುಣಮಟ್ಟದ ಚಹಾ ಪುಡಿ ಮತ್ತು ನೈಸರ್ಗಿಕ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಶಿವರಾಜಕುಮಾರ್ ಅವರು ಸ್ವತಃ ಅಸ್ಸಾಂ ಮತ್ತು ಕೋಲ್ಕತ್ತಾಗೆ ಹೋಗಿ ಟೀ ಟೇಸ್ಟಿಂಗ್ ತರಬೇತಿ ಪಡೆದು ಬಂದಿದ್ದಾರೆ.
ಸ್ಮೋಕಿಂಗ್ ಮುಕ್ತ ವಾತಾವರಣ: ಟೀ ಅಂಗಡಿಗಳಲ್ಲಿ ಧೂಮಪಾನ ಸಾಮಾನ್ಯ. ಆದರೆ ಮಾಲ್ಗುಡಿ ಔಟ್‌ಲೆಟ್‌ಗಳಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಮತ್ತು ಇಡೀ ಕುಟುಂಬವೇ ಬಂದು ಆನಂದಿಸಬಹುದಾದ ಆರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.
ಗ್ರಾಹಕರೇ ದೇವರು: ಒಮ್ಮೆ ಕಸ್ಟಮರ್ ಫೀಡ್‌ಬ್ಯಾಕ್ ತಿಳಿಯಲು ಯಾವುದೇ ಮುನ್ಸೂಚನೆ ಇಲ್ಲದೆ ತಮ್ಮ ಮಳಿಗೆಯನ್ನು 15 ದಿನಗಳ ಕಾಲ ಮುಚ್ಚಿದ್ದರು. ಮರಳಿ ತೆರೆದಾಗ ಗ್ರಾಹಕರು 'ಇದು ನಿಮ್ಮ ಅಂಗಡಿಯಲ್ಲ ಸರ್, ನಮ್ಮ ಅಂಗಡಿ' ಎಂದು ಹೇಳಿದಾಗ ಅವರಿಗೆ ಗ್ರಾಹಕರೊಂದಿಗಿನ ಅಂಗಡಿಯ ಎಮೋಷನಲ್ ಕನೆಕ್ಷನ್ ಅರ್ಥವಾಯಿತು.

ಚಹಾ ಬಂಡಿ ವಿಶೇಷ
ಮಾಲ್ಗುಡಿ ಅಮೃತ ಚಹಾ ಬಂಡಿ ಎನ್ನುವುದು ವಿಶೇಷ ಪರಿಕಲ್ಪನೆ. ಕೆಲವರಿಗೆ ಹೆಚ್ಚಿನ ಬಂಡವಾಳನ್ನು ಹಾಕಲು ಸಾಧ್ಯವಾಗುವುದಿಲ್ಲ. ಅವರಿಗಾಗಿ ರು. 3 ಲಕ್ಷದ ಹೂಡಿಕೆಯಲ್ಲಿ ಕಾರ್ಟ್ ಮಾಡೆಲ್ ಅನ್ನು ಪರಿಚಯಿಸಲಾಗಿದೆ. ಹಾಗೆಯೇ ಇತ್ತೀಚೆಗೆ ದೊಡ್ಡ ಮಟ್ಟದ 'ಮಾಲ್ಗುಡಿ ಪರಂಪರೆ ಕೆಫೆ' ಕೂಡ ಪರಿಚಯಿಸಿದ್ದಾರೆ. ದಿನಕ್ಕೆ ರು. 15,000 ವ್ಯಾಪಾರವಾದರೆ ಫ್ರಾಂಚೈಸಿ ಮಾಲೀಕರು 30% ವರೆಗೆ ಆರಾಮವಾಗಿ ಲಾಭ ಗಳಿಸಬಹುದು ಎನ್ನುತ್ತಾರೆ ಅವರು.
ಕರಾರುವಾಕ್ ಉಸ್ತುವಾರಿ
ಸಾಂಪ್ರದಾಯಿಕ ಚಹಾ ಉದ್ಯಮಕ್ಕೆ ಡಿಜಿಟಲ್ ಸ್ಪರ್ಶ ನೀಡಿರುವುದು ಮಾಲ್ಗುಡಿಯ ಮತ್ತೊಂದು ವಿಶೇಷ. ಪ್ರತಿಯೊಂದು ಮಳಿಗೆಯಲ್ಲೂ ಕರಾರುವಾಕ್ ಬಿಲ್ಲಿಂಗ್ ವ್ಯವಸ್ಥೆ ಇದ್ದು, ಯಾವ ಸಮಯದಲ್ಲಿ ಯಾವ ಉತ್ಪನ್ನ ಹೆಚ್ಚು ಮಾರಾಟವಾಗುತ್ತಿದೆ ಎಂಬ ಲೈವ್ ಡೇಟಾ ಲಭ್ಯವಿರುತ್ತದೆ. ಗ್ರಾಹಕರ ದೂರು ಮತ್ತು ದುಮ್ಮಾನಗಳನ್ನು ಆಲಿಸಲು ಪ್ರತಿ ಟೇಬಲ್ ಮೇಲೂ ಫೀಡ್‌ಬ್ಯಾಕ್ ಕ್ಯುಆರ್ ಕೋಡ್ ನೀಡಲಾಗಿದ್ದು, ಅದು ನೇರವಾಗಿ ವಾಟ್ಸಾಪ್ ಮತ್ತು ಗೂಗಲ್ ಶೀಟ್‌ಗೆ ಕನೆಕ್ಟ್ ಆಗಿರುತ್ತದೆ. ಮಾಲೀಕರು ಸ್ಥಳದಲ್ಲಿ ಇಲ್ಲದಿದ್ದರೂ ಗುಣಮಟ್ಟದಲ್ಲಿ ಯಾವುದೇ ರಾಜಿ ನಡೆಯದಂತೆ ಈ ತಂತ್ರಜ್ಞಾನ ಕಾವಲು ಕಾಯುತ್ತದೆ.
ರಾಣೇಬೆನ್ನೂರು ಪ್ರವಾಸೋದ್ಯಮ; ಸಫಾರಿಯಿಂದ ಪರಂಪರೆಯವರೆಗೆ ಪಯಣ
ಫ್ರಾಂಚೈಸಿ ಲೆಕ್ಕಾಚಾರ
ಶಿವರಾಜಕುಮಾರ್ ಅವರು ಯಾವುದೇ ಬ್ಯುಸಿನೆಸ್ ಯಶಸ್ಸಿಗೆ 3P (Product, Place, Passion) ಸೂತ್ರವನ್ನು ನೀಡುತ್ತಾರೆ. ಉತ್ಪನ್ನ ಉತ್ತಮವಾಗಿರಬೇಕು, ಜಾಗ ಸೂಕ್ತವಾಗಿರಬೇಕು ಮತ್ತು ಮಾಡುವವರಲ್ಲಿ ಪ್ಯಾಶನ್ ಇರಬೇಕು. ಇಂದು ಮಾಲ್ಗುಡಿ ಸಂಸ್ಥೆಗೆ 15,000ಕ್ಕೂ ಹೆಚ್ಚು ಫ್ರಾಂಚೈಸಿ ವಿಚಾರಣೆಗಳು ಬಂದಿದ್ದರೂ, ಅವರು ಕೇವಲ 80 ಜನರಿಗೆ ಮಾತ್ರ ಔಟ್‌ಲೆಟ್ ನೀಡಿದ್ದಾರೆ. ಬರೀ ಬಂಡವಾಳ ತಂದವರಿಗೆ ಅವರು ಫ್ರಾಂಚೈಸಿ ಕೊಡುವುದಿಲ್ಲ, ಯಾರಿಗೆ ಸ್ವತಃ ನಿಂತು ಬ್ಯುಸಿನೆಸ್ ಮಾಡುವ ಹಸಿವಿದೆಯೋ ಅವರಿಗೆ ಮಾತ್ರ ಅವಕಾಶ ನೀಡುತ್ತಾರೆ.
ವಿನ್-ವಿನ್ ಸಪ್ಲೈ ಚೈನ್
'ಯಾವುದೇ ವ್ಯವಹಾರ ದೀರ್ಘಕಾಲ ಬಾಳಬೇಕಾದರೆ ಅಲ್ಲಿ ವಿನ್-ವಿನ್ ಪರಿಸ್ಥಿತಿ ಇರಬೇಕು' ಎನ್ನುತ್ತಾರೆ ಶಿವರಾಜಕುಮಾರ್. ಅವರ ಪ್ರಕಾರ ಯಶಸ್ಸು ಎನ್ನುವುದು ಕೇವಲ ಗ್ರಾಹಕರನ್ನು ತೃಪ್ತಿಪಡಿಸುವುದು ಮಾತ್ರವಲ್ಲ. ತಮ್ಮ ಉದ್ಯಮಕ್ಕೆ ರಾ ಮೆಟೀರಿಯಲ್ಸ್ ನೀಡುವ ವೆಂಡರ್ಸ್ ಮತ್ತು ರೈತರನ್ನು ಜತೆಯಲ್ಲಿ ಬೆಳೆಸುವುದು ಕೂಡ ಅವರ ಜವಾಬ್ದಾರಿ ಎಂದು ನಂಬುತ್ತಾರೆ. ಇದೇ ಕಾರಣಕ್ಕೆ ಹಾಲಿನ ಡೈರಿಗಳಿಂದ ಹಿಡಿದು ಬಿಸ್ಕೆಟ್ ತಯಾರಕರವರೆಗೆ ಪ್ರತಿಯೊಬ್ಬರಿಗೂ ಗೌರವಯುತ ಲಾಭ ಸಿಗುವಂತೆ ವ್ಯವಸ್ಥೆ ರೂಪಿಸಿದ್ದಾರೆ. ಟೊಯೊಟಾ ಕಂಪೆನಿಯಲ್ಲಿ ಕಲಿತ '4M ಅನಾಲಿಸಿಸ್' (Man, Machine, Method, Material) ಸೂತ್ರವನ್ನು ಇಲ್ಲಿ ಅಚ್ಚುಕಟ್ಟಾಗಿ ಬಳಸುವ ಅವರು, ಸಪ್ಲೈ ಚೈನ್‌ನಲ್ಲಿ ಎಲ್ಲೇ ಸಣ್ಣ ವ್ಯತ್ಯಾಸವಾದರೂ ತಂತ್ರಜ್ಞಾನದ ಸಹಾಯದಿಂದ ತಕ್ಷಣವೇ ಮೂಲ ಕಾರಣವನ್ನು ಪತ್ತೆಹಚ್ಚಿ ಸರಿಪಡಿಸುತ್ತಾರೆ.
ಅಪ್ಪಟ ಕನ್ನಡದ ಅಸ್ಮಿತೆ
ಮಾಲ್ಗುಡಿ ಅಮೃತ ಚಹಾದ ಮತ್ತೊಂದು ದೊಡ್ಡ ಶಕ್ತಿ ಎಂದರೆ ಅದರ ಭಾಷಾಭಿಮಾನ. ಸರಕಾರದ ಯಾವುದೇ ಕಡ್ಡಾಯ ನಿಯಮಗಳು ಬರುವ ಮುನ್ನವೇ ಇವರು ತಮ್ಮ ಬೋರ್ಡ್‌ಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದ್ದರು. ಪ್ರತಿಯೊಂದು ಮಳಿಗೆಯಲ್ಲೂ ಕನ್ನಡ ಧ್ವಜ, ಕನ್ನಡ ಕವಿಗಳಾದ ದ.ರಾ. ಬೇಂದ್ರೆ, ಕುವೆಂಪು ಅವರ ವಾಣಿ ಹಾಗೂ ಕನ್ನಡಿಗರ ಹೆಮ್ಮೆಯ ಶಂಕರ್ ನಾಗ್ ಅವರ ಭಾವಚಿತ್ರ ಕಡ್ಡಾಯವಾಗಿ ಇರುತ್ತದೆ. ಚಾಮರಾಜನಗರ ಹಾಗೂ ಗುಂಡ್ಲುಪೇಟೆಯ ಗಡಿ ಭಾಗದ ಕನ್ನಡ ಶಾಲೆಗಳ ಉಳಿವಿಗಾಗಿ ಇವರು ಮಾಡುತ್ತಿರುವ ಸದ್ದಿಲ್ಲದ ಸಮಾಜಸೇವೆ ನಿಜಕ್ಕೂ ಪ್ರಶಂಸನೀಯ.
'ಒಂದೇ ಸಲ ಐದನೆಯ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ. ಮೊದಲ ಮೆಟ್ಟಿಲು ಹತ್ತಿದ ಮೇಲೆ ಎರಡನೆಯ ಮೆಟ್ಟಿಲಿನ ಬಗ್ಗೆ ಯೋಚಿಸಬೇಕು' ಎನ್ನುವುದು ಶಿವರಾಜಕುಮಾರ್ ಅವರ ಜೀವನದ ಸಿದ್ಧಾಂತ. ಸದ್ಯ ದುಬೈ ಮತ್ತು ಕತಾರ್‌ನಂಥ ವಿದೇಶಿ ಮಾರುಕಟ್ಟೆಗಳಿಗೂ ಕಾಲಿಡಲು ಸಿದ್ಧತೆ ನಡೆಸಿರುವ ಮಾಲ್ಗುಡಿ ಅಮೃತ ಚಹಾ, ಬರೀ ನಂಬರ್‌ಗಳ ಹಿಂದೆ ಬಿದ್ದು 500 ಔಟ್‌ಲೆಟ್ ಮಾಡುವುದಕ್ಕಿಂತ, ಇರುವ 100 ಔಟ್‌ಲೆಟ್‌ಗಳು ಗುಣಮಟ್ಟದಿಂದ ರನ್ ಆಗಬೇಕು ಎಂಬ ಸುಸ್ಥಿರ ಬೆಳವಣಿಗೆಯನ್ನು ನಂಬಿದೆ.
- ಮುಂದಿನ ದಿನಗಳಲ್ಲಿ ಮಹಿಳಾ ಸಬಲೀಕರಣ ಗುಂಪುಗಳಿಗೂ ಈ ಬ್ಯುಸಿನೆಸ್ ವಿಸ್ತಾರವಾಗಲಿದೆ.
- ಮ್ಯಾನುಫ್ಯಾಕ್ಚರಿಂಗ್ ಯುನಿಟ್‌ನಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.
- ಇಲ್ಲಿ ಮಷಿನ್‌ಗಳ ಜತೆಗೆ ಮನುಷ್ಯರಿಗೂ ಹೆಚ್ಚಿನ ಕೆಲಸಗಳಿವೆ.
- 3,000ಕ್ಕೂ ಅಧಿಕ ಜನರಿಗೆ 'ಮಾಲ್ಗುಡಿ' ಮನೆಯಾಗಿದೆ.

ಯುವಕರಿಗೆ ಪ್ರೇರಣೆ
ಕೇವಲ ಒಂದು ಚಹಾದ ಕಪ್ ಮೂಲಕ ಕೋಟ್ಯಂತರ ರುಪಾಯಿ ಉದ್ಯಮ ಕಟ್ಟಿದ ಶಿವರಾಜಕುಮಾರ್ ಅವರ ಕಥೆ, ಬದುಕಿನಲ್ಲಿ ಎಲ್ಲವೂ ಮುಗಿದುಹೋಯಿತು ಅಂದುಕೊಂಡವರಿಗೆ ಹಾಗೂ ಉದ್ಯೋಗದ ಹುಡುಕಾಟದಲ್ಲಿರುವ ಇಂದಿನ ಭಾರತದ ಕೋಟ್ಯಂತರ ಯುವಕರಿಗೆ ಪ್ರೇರಣೆ.
ಹಿತವಾದ ಮನಸಿಗೆ ಹದವಾದ ಕಾಫಿ; ನೆನಪಲ್ಲುಳಿಯುವ ಮಾತಾಸ್ ಘಮ
ಶಂಕ್ರಣ್ಣನ ಮಾತೇ ನನಗೆ ಸ್ಫೂರ್ತಿ
'ಸತ್ತಾಗ ಮಲಗೋದು ಇದ್ದೇ ಇದೆ. ಬದುಕಿದ್ದಾಗ ಏನಾದರೂ ಸಾಧಿಸು' ಈ ಮಾತನ್ನು ಎಲ್ಲಾ ಫ್ರಾಂಚೈಸಿಯಲ್ಲೂ ಹಾಕಿಸಿದ್ದೇನೆ ಎಂದು ಶಿವರಾಜಕುಮಾರ್ ತಿಳಿಸಿದ್ದಾರೆ.
![]()
ವ್ಯಾಪಾರದಲ್ಲಿ ಯಾವತ್ತೂ ನಾನು ಎಂಬ ಭಾವನೆಗಿಂತ ನಾವು ಎಂಬ ಭಾವ ಮುಖ್ಯವಾಗುತ್ತದೆ. ಸಮಾಜದ ಬಗ್ಗೆಯೂ ಕಳಕಳಿ ಇಟ್ಟುಕೊಂಡು ಕೆಲಸ ಮಾಡಿದಾಗ ಸಮಾಧಾನ ಸಿಗುತ್ತದೆ. ಯಾವುದೇ ವ್ಯಾಪಾರ ಯಶಸ್ವಿಯಾಗಲು ಶ್ರದ್ಧೆ, ಕಠಿಣ ಪರಿಶ್ರಮ ಹಾಗೂ ಸ್ವಲ್ಪ ಒಳ್ಳೆಯ ಹುಚ್ಚುತನ ಇರಬೇಕು. ನಿರಂತರವಾಗಿ ಕೆಲಸ ಮಾಡುವ ಮನೋಭಾವ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಮಾಲ್ಗುಡಿ ಒಂದು ಉತ್ತಮ ಬ್ರ್ಯಾಂಡ್ ಆಗಿ ಎಲ್ಲರನ್ನೂ ತಲುಪಿರುವುದು ಖುಷಿಯಿದೆ. ಮುಂದೆ ಇನ್ನೂ ಹೆಚ್ಚಿನ ಕೆಲಸ ಮಾಡುವ ಯೋಚನೆಗಳಿವೆ.
- ಶಿವರಾಜಕುಮಾರ್, ಮಾಲ್ಗುಡಿ ಅಮೃತ ಚಹಾ ಸ್ಥಾಪಕ