ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

USA Recession: ಅಮೆರಿಕದಲ್ಲಿ ರಿಸೆಶನ್‌ ಭೀತಿ-ಸ್ಟಾಕ್‌ ಮಾರ್ಕೆಟ್‌ ತತ್ತರ

USA Recession: ವಾಲ್‌ ಸ್ಟ್ರೀಟ್‌ನಲ್ಲಿ ಸೂಚ್ಯಂಕಗಳು ಇದೇ ಭೀತಿಯಿಂದ ತತ್ತರಿಸಿರುವುದೇಕೆ? ಇಕನಾಮಿಕ್‌ ಮೂಡ್‌ ಡಲ್‌ ಆಗಿರುವುದು ಏಕೆ? ಇದಕ್ಕೆ ಕಾರಣವಿದೆ. ಮೊದಲನೆಯದಾಗಿ, ಕಳೆದೊಂದು ತಿಂಗಳಲ್ಲಿ ನಾಸ್‌ ಡಾಕ್‌ ಸೂಚ್ಯಂಕ 7% ಇಳಿದಿದೆ. ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಡವ್‌ ಜಾನ್ಸ್‌ ಸೂಚ್ಯಂಕ 3.75% ಇಳಿದಿದೆ. ಎಸ್‌ &ಪಿ ಸೂಚ್ಯಂಕ 4.88% ತಗ್ಗಿದೆ.

ಅಮೆರಿಕದಲ್ಲಿ ರಿಸೆಶನ್‌ ಭೀತಿ-ಸ್ಟಾಕ್‌ ಮಾರ್ಕೆಟ್‌ ತತ್ತರ

Profile Rakshita Karkera Mar 15, 2025 6:30 AM

ವಾಷಿಂಗ್ಟನ್‌: ಅಮೆರಿಕದಲ್ಲಿ ಈ ವರ್ಷ ಆರ್ಥಿಕ ಹಿಂಜರಿತ ಅಥವಾ ರಿಸೆಶನ್‌(USA Recession) ಸಂಭವಿಸಲಿದೆಯೇ? "ಇಂಥ ಊಹಾಪೋಹಗಳನ್ನು ನಾನು ದ್ವೇಷಿಸುತ್ತೇನೆʼ ಎಂದು ಹೇಳುತ್ತಾರೆ ಸ್ವತಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್(Donald Trump).‌ " ದೇರ್‌ ಈಸ್‌ ಎ ಪಿರಿಡ್‌ ಆಫ್‌ ಟ್ರಾನ್ಸಿಶನ್‌, ಬಿಕಾಸ್‌ ವಾಟ್‌ ವಿ ಆರ್‌ ಡೂಯಿಂಗ್‌ ಈಸ್‌ ವೆರಿ ಬಿಗ್.‌ ವಿ ಆರ್‌ ಬ್ರಿಂಗಿಂಗ್‌ ವೆಲ್ತ್‌ ಬ್ಯಾಕ್‌ ಟು ಅಮೆರಿಕ. ಇಟ್‌ ಟೇಕ್ಸ್‌ ಲಿಟ್ಲ್‌ ಟೈಮ್‌ʼ ಎನ್ನುತ್ತಾರೆ ಟ್ರಂಪ್‌, ಸ್ವಲ್ಪ ತಡೀರಪ್ಪಾ, ನಾನು ಅಮೆರಿಕಕ್ಕೆ ಕಳೆದು ಹೋಗಿರುವ ಸಂಪತ್ತನ್ನು ಮತ್ತೆ ತರುತ್ತೇನೆ ಎಂದು ತಮ್ಮ ತೆರಿಗೆ ಸಮರವನ್ನು ಸಮರ್ಥಿಸಿಕೊಂಡಿದ್ದಾರೆ ಟ್ರಂಪ್.

ಹಾಗಿದ್ದರೆ ವಾಲ್‌ ಸ್ಟ್ರೀಟ್‌ನಲ್ಲಿ ಸೂಚ್ಯಂಕಗಳು ಇದೇ ಭೀತಿಯಿಂದ ತತ್ತರಿಸಿರುವುದೇಕೆ? ಇಕನಾಮಿಕ್‌ ಮೂಡ್‌ ಡಲ್‌ ಆಗಿರುವುದು ಏಕೆ? ಇದಕ್ಕೆ ಕಾರಣವಿದೆ. ಮೊದಲನೆಯದಾಗಿ, ಕಳೆದೊಂದು ತಿಂಗಳಲ್ಲಿ ನಾಸ್‌ ಡಾಕ್‌ ಸೂಚ್ಯಂಕ 7% ಇಳಿದಿದೆ. ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಡವ್‌ ಜಾನ್ಸ್‌ ಸೂಚ್ಯಂಕ 3.75% ಇಳಿದಿದೆ. ಎಸ್‌ &ಪಿ ಸೂಚ್ಯಂಕ 4.88% ತಗ್ಗಿದೆ.

ಆರ್ಥಿಕ ವ್ಯವಸ್ಥೆಯಲ್ಲಿ ಅನಿಶ್ಚಿತತೆ ಇದ್ದಾಗ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಕುಸಿಯುತ್ತವೆ. ಆಗ ಹೂಡಿಕೆದಾರರಿಗೆ ನೋಶನಲ್‌ ವೆಲ್ತ್‌ ನಷ್ಟವಾಗುತ್ತದೆ. ಏನಿದು ನೋಶನಲ್‌ ವೆಲ್ತ್‌ ಅಂತ ನೀವು ಕೇಳಬಹುದು. ಷೇರಿನ ನೋಶನಲ್‌ ವೆಲ್ತ್‌ ಎಂದರೆ ದಾಖಲೆಗಳಲ್ಲಿ ಇರುವ ಥಿಯರಿಟಿಕಲ್‌ ಮೌಲ್ಯ. ನೀವು ಷೇರನ್ನು ಮಾರಾಟ ಮಾಡಿದರೆ ನಿಮಗೆ ಮೌಲ್ಯ ನಷ್ಟವಾಗುತ್ತದೆ. ಇಲ್ಲದಿದ್ದರೆ ದಾಖಲೆಯಲ್ಲಿ ಮಾತ್ರ ಇರುವಂಥ ನಷ್ಟವದು. ಷೇರನ್ನು ಮಾರಾಟ ಮಾಡದಿದ್ದರೆ, ಮಾರುಕಟ್ಟೆ ಸೂಚ್ಯಂಕ ಏರಿದಾಗ ಮತ್ತೆ ಲಾಭ ಗಳಿಸಬಹುದು. ಅದು ಬೇರೆ ವಿಚಾರ. ಆದರೆ ಈಗ ಉಂಟಾಗಿರುವ ನೋಶನಲ್‌ ನಷ್ಟ ಅಪಾರ ಪ್ರಮಾಣದ್ದು. ಉದಾಹರಣೆಗೆ ಇಕನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ ಇನ್ಫೋಸಿಸ್‌ನಲ್ಲಿ ಷೇರುಗಳನ್ನು ಹೊಂದಿರುವ ನಾರಾಯಣ ಮೂರ್ತಿಯವರ ಕುಟುಂಬಕ್ಕೇ ಬುಧವಾರ 6,800 ಕೋಟಿ ರುಪಾಯಿ ನೋಶನಲ್‌ ನಷ್ಟ ಉಂಟಾಗಿದೆ. ಅತ್ತ ಅಮೆರಿಕದಲ್ಲಿ ಟೆಸ್ಲಾ ಷೇರುಗಳ ದರ ಕುಸಿತದಿಂದ ಎಲಾನ್‌ ಮಸ್ಕ್‌ ಅವರಿಗೆ ಈ ವರ್ಷ ಇದುವರೆಗೆ 102 ಶತಕೋಟಿ ಡಾಲರ್‌ ನಷ್ಟವಾಗಿದೆಯಂತೆ. ಹೀಗಾಗಿ ಇದೊಂದು ರೀತಿಯ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.

ಎರಡನೆಯದಾಗಿ ಯುಎಸ್‌ ಕನ್‌ಸ್ಯೂಮರ್‌ ಸ್ಪೆಂಡಿಂಗ್‌ ಜನವರಿಯಲ್ಲಿ ಇಳಿಕೆಯಾಗಿದೆ. ಅಮೆರಿಕದ ಆರ್ಥಿಕತೆಯ ಬೆನ್ನೆಲುಬೇ ಗ್ರಾಹಕರ ಖರ್ಚು ವೆಚ್ಚಗಳ ಚಟುವಟಿಕೆಗಳು. ಮೂರನೆಯದಾಗಿ ಟ್ರಂಪ್‌ ಅವರ ತೆರಿಗೆ ಸಂಘರ್ಷ. ಈ ಟಾರಿಫ್‌ ವಾರ್‌ ಅನ್ನು ಅಮೆರಿಕದ ಅಭಿವೃದ್ಧಿಗೆ, ಗತ ವೈಭವ ಮರಳಿ ತರಲು ಮಾಡುತ್ತಿದ್ದೇನೆ ಎಂದು ಟ್ರಂಪ್‌ ಹೇಳುತ್ತಿದ್ದಾರೆ. ಆದರೆ ಅದ್ಯಕ್ಕೆ ಅನಿಶ್ಚಿತತೆಯ ಪರಿಸ್ಥಿತಿ ಉಂಟಾಗಿದೆ. 2023ರಲ್ಲಿ ರಿಸೆಶನ್‌ ಭೀತಿ ಇದ್ದಿದ್ದರೂ, ಅಮೆರಿಕ ಇದರಿಂದ ತಪ್ಪಿಸಿಕೊಂಡಿತ್ತು. ಆದರೆ ಈ ಭೀತಿಯ ವಾತಾವರಣ ಮತ್ತೆ ಮರುಕಳಿಸಿದೆ. ಹಾಗಾದರೆ ಪ್ರಮುಖ ಹಣಕಾಸು ಸಂಸ್ಥೆಗಳ ವರದಿಗಳು ಏನೆನ್ನುತ್ತಿವೆ? ಮುಖ್ಯವಾಗಿ ಜೆ.ಪಿ. ಮೋರ್ಗಾನ್‌ ಮತ್ತು ಗೋಲ್ಡ್‌ ಮನ್‌ ಸ್ಯಾಕ್ಸ್‌ ಸಂಸ್ಥೆಯ ವರದಿಗಳು ಆತಂಕ ಹುಟ್ಟಿಸಿವೆ.

J.P. Morgan ವರದಿಯ ಪ್ರಕಾರ 2024ರ ಅಂತ್ಯಕ್ಕೆ ರಿಸೆಶನ್‌ ಸಾಧ್ಯತೆ 35% ಇತ್ತು. 2025ರಲ್ಲಿ ಸಾಧ್ಯತೆಯ ಪ್ರಮಾಣ 45% ಕ್ಕೆ ಏರಿಕೆಯಾಗಿದೆ. ಗೋಲ್ಡ್‌ಮನ್‌ ಸ್ಯಾಕ್ಸ್‌ ವರದಿಯ ಪ್ರಕಾರ, ಮುಂದಿನ 12 ತಿಂಗಳಿನೊಳಗೆ ಅಮೆರಿಕದಲ್ಲಿ ರಿಸೆಶನ್‌ ಸಾಧ್ಯತೆ 15%ರಿಂದ 20% ರಷ್ಟಿದೆ. ಟ್ರಂಪ್‌ ಅವರ ಟ್ರೇಡ್‌ ವಾರ್‌ ಮುಂದುವರಿದರೆ ರಿಸೆಶನ್‌ ಸಾಧ್ಯತೆಯ ಅಪಾಯ ಮತ್ತಷ್ಟು ಹೆಚ್ಚಲಿದೆ ಎಂದು ಬ್ಯಾಂಕಿನ ವರದಿ ಎಚ್ಚರಿಸಿದೆ.

ಅಮೆರಿಕದ ಅಟ್ಲಾಂಟದ ಫೆಡರಲ್‌ ರಿಸರ್ವ್‌ ತನ್ನ ಇತ್ತೀಚಿನ ವರದಿಯಲ್ಲಿ, ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯಲ್ಲಿ 2.4% ಇಳಿಕೆ ಆಗಬಹುದು ಎಂದು ಎಚ್ಚರಿಸಿದೆ. ಅಂದ್ರೆ 2022ರಿಂದೀಚೆಗಿನ ಮೊದಲ ತ್ರೈಮಾಸಿಕ ಕುಸಿತ ಆಗಲಿದೆ. ಅಮೆರಿಕದಲ್ಲಿ ಮೊದಲ ತ್ರೈಮಾಸಿಕ ಎಂದರೆ 2025ರ ಜನವರಿ-ಮಾರ್ಚ್‌ ಅವಧಿಯಾಗಿದೆ. ಹೀಗಿದ್ದರೂ, ನ್ಯೂಯಾರ್ಕ್‌ ಫೆಡರಲ್‌ ರಿಸರ್ವ್‌ ಹೆಚ್ಚು ಆಶಾವಾದದಿಂದ, ಮೊದಲ ತ್ರೈಮಾಸಿಕದಲ್ಲಿ 2.7% ಬೆಳವಣಿಗೆಯ ಮುನ್ನೋಟವನ್ನು ಕೊಟ್ಟಿದೆ. 2023ರಲ್ಲಿ ಗೋಲ್ಡ್‌ ಮ್ಯಾನ್‌ ಸ್ಯಾಕ್ಸ್‌, ಅಮೆರಿಕದಲ್ಲಿ ರಿಸೆಶನ್‌ ಆಗುವ ಸಾಧ್ಯತೆ 35% ಇದೆ ಎಂದು ತಿಳಿಸಿತ್ತು. ಆದರೆ ಆಗಿರಲಿಲ್ಲ.

ಈ ಎಲ್ಲ ವರದಿಗಳಿಂದ ಗೊತ್ತಾಗುವುದು ಏನೆಂದರೆ- ರಿಸೆಶನ್‌ ಬಗ್ಗೆ ನಿಖರವಾಗಿ ಭವಿಷ್ಯ ಹೇಳೋದು ಕಷ್ಟ. ಹೀಗಿದ್ದರೂ ಕೂಡ, ಟ್ರಂಪ್‌ ಅವರ ಟಾರಿಫ್‌ ವಾರ್‌ ಸ್ವತಃ ಅಮೆರಿಕಕ್ಕೇ ತಿರುಗುಬಾಣವಾದರೂ ಆಶ್ಚರ್ಯ ಇಲ್ಲ. ಆದ್ದರಿಂದಲೇ ಅಮೆರಿಕದಲ್ಲಿ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಕುಸಿಯುತ್ತಿವೆ. 2025ಕ್ಕೆ ಜಿಡಿಪಿಯ ಗ್ರೋತ್‌ ರೇಟ್‌ ಅನ್ನು ಮೋರ್ಗಾನ್‌ ಸ್ಟ್ಯಾನ್ಲಿ 1.9%ರಿಂದ 1.5%ಕ್ಕೆ ಇಳಿಸಿದೆ. 2026ರಲ್ಲೂ ಬೆಳವಣಿಗೆಯ ಮುನ್ನೋಟವನ್ನು 1.3% ರಿಂದ 1.2% ಕ್ಕೆ ಇಳಿಸಿದೆ. ಇದಕ್ಕೆ ಕಾರಣ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ನೀತಿ. ತಾಂತ್ರಿಕವಾಗಿ ರಿಸೆಶನ್‌ ಎಂದರೆ ನಿರಂತರ ಆರು ತಿಂಗಳುಗಳ ಆರ್ಥಿಕ ಹಿಂಜರಿತವಾಗಿದೆ.

ಈಗ ಅಮೆರಿಕದಲ್ಲಿ ಏನಾಗಿದೆ ಎಂಬುದನ್ನು ನೋಡೋಣ.

ಈ ವರ್ಷ ಫೆಬ್ರವರಿಯಲ್ಲಿ ಉದ್ಯೋಗ ಸೃಷ್ಟಿಯ ಬೆಳವಣಿಗೆ ಆರೋಗ್ಯಕರವಾಗಿದ್ದರೂ, ಡೌನ್‌ಸೈಡ್‌ ರಿಸ್ಕ್‌ ಕಂಡು ಬಂದಿದೆ. ಕಾರ್ಪೊರೇಟ್‌ ವಲಯದಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಹೂಡಿಕೆಯನ್ನು ಕಡಿಮೆ ಮಾಡುತ್ತಿದ್ದಾರೆ. ಗ್ರಾಹಕರಲ್ಲಿ ವಿಶ್ವಾಸ ಇಳಿಯುತ್ತಿರುವುದನ್ನು ಕನ್‌ಸ್ಯೂಮರ್‌ ಕಾನ್ಫಿಡೆನ್ಸ್‌ ಇಂಡೆಕ್ಸ್‌ ಬಿಂಬಿಸಿದೆ. ಮುಖ್ಯವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟಾರಿಫ್‌ ವಾರ್‌ ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿದೆ. ಇದು ಆರ್ಥಿಕ ಮಂದಗತಿಯ ಭೀತಿಯನ್ನು ಹೆಚ್ಚಿಸಿದೆ. ಕಳೆದೊಂದು ತಿಂಗಳಿನಲ್ಲಿ ಅಮೆರಿಕದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆದಾರರಿಗೆ 4 ಟ್ರಿಲಿಯನ್‌ ಡಾಲರ್‌ ನಷ್ಟ ಸಂಭವಿಸಿದೆ. ಆಪಲ್‌, ಟೆಸ್ಲಾ, ಎನ್‌ವಿಡಿಯಾ ಮೊದಲಾದ ಕಂಪನಿಗಳಿಗೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಭಾರಿ ನಷ್ಟ ಸಂಭವಿಸಿದೆ.

ಅಮೆರಿಕನ್ನರು ಕ್ರೆಡಿಟ್‌ ಕಾರ್ಡ್‌ ಮೂಲಕ ಖರ್ಚು ಮಾಡುವುದು ಹೆಚ್ಚು. ಒಟ್ಟಾರೆಯಾಗಿ 1 ಲಕ್ಷದ 21 ಸಾವಿರ ಟ್ರಿಲಿಯನ್‌ ಡಾಲರ್‌ ಕ್ರೆಡಿಟ್ ಕಾರ್ಡ್‌ ಸಾಲವನ್ನು ಹೊಂದಿದ್ದಾರೆ. ಈಗ ಲೇಟ್‌ ಪೇಮೆಂಟ್‌ ಪ್ರಕರಣಗಳು ಹೆಚ್ಚುತ್ತಿವೆ ಎನ್ನುತ್ತಿವೆ ವರದಿಗಳು.

ಹೀಗಿದ್ದರೂ, ಟ್ರಂಪ್ ಸರಕಾರ ರಿಸೆಶನ್‌ ಭೀತಿಯನ್ನು ನಿರಾಕರಿಸಿದೆ. ತಾತ್ಕಾಲಿಕವಾಗಿ ಹಿನ್ನಡೆಯಾಗಬಹುದು. ಆದರೆ ಇದು ಸಂಕ್ರಮಣದ ಕಾಲ. ಅಮೆರಿಕದ ಸುವರ್ಣ ಯುಗ ಮತ್ತೆ ಆರಂಭವಾಗಲಿದೆ. ಅಮೆರಿಕಕ್ಕೆ ಸಂಪತ್ತಿನ ಹೊಳೆ ಹರಿಯಲಿದೆ ಎಂದು ಟ್ರಂಪ್‌ ಭರವಸೆ ನೀಡುತ್ತಿದ್ದಾರೆ. ಆದರೆ ಸ್ಟಾಕ್‌ ಮಾರ್ಕೆಟ್‌ ಈಗ ಇವರ ಮಾತನ್ನು ಕೇಳುತ್ತಿಲ್ಲ.

ಟ್ರಂಪ್‌ ಅವರ ಹೊಸ ವಾಣಿಜ್ಯ ನೀತಿಗಳು ಬಿಸಿನೆಸ್‌, ಗ್ರಾಹಕರು ಮತ್ತು ಹೂಡಿಕೆದಾರರ ವಲಯದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಪ್ರಮುಖ ಟ್ರೇಡಿಂಗ್‌ ಪಾರ್ಟ್‌ನರ್‌ಗಳಾದ ಕೆನಡಾ, ಮೆಕ್ಸಿಕೊ ಮತ್ತು ಚೀನಾ, ಯುರೋಪ್ ವಿರುದ್ಧ ಟಾರಿಫ್‌ ವಾರ್‌ ನಡೆಸುತ್ತಿರುವುದು ಇದಕ್ಕೆ ಕಾರಣವಾಗಿದೆ.‌ ಮುಂದಿನ ಒಂದೆರಡು ತಿಂಗಳೊಳಗೆ ಈ ಸಂಘರ್ಷಗಳು ಇತ್ಯರ್ಥವಾಗದಿದ್ದರೆ, ಅಮೆರಿಕದ ಆರ್ಥಿಕತೆಯ ಮೇಲೆಯೇ ಪ್ರತಿಕೂಲ ಪರಿಣಾಮ ಬೀರಲಿದೆ.

ಹೀಗಾಗಿ ಅಮೆರಿಕದಲ್ಲಿ ರಿಸೆಶನ್‌ ಭೀತಿ ಹೆಚ್ಚಲು ಪ್ರಮುಖ ಕಾರಣ ಟ್ರಂಪ್‌ ಅವರ ಟ್ರೇಡ್‌ ಪಾಲಿಸಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ಅಮೆರಿಕದ ವಾಲ್‌ ಸ್ಟ್ರೀಟ್‌ ತತ್ತರಿಸಿದೆ. ಡವ್‌ ಜಾನ್ಸ್‌ ಇಂಡಸ್ಟ್ರಿಯಲ್‌ ಅವರೇಜ್‌ ಸೂಚ್ಯಂಕ ಮತ್ತು ಎಸ್‌ ‍&ಪಿ 500 ಸೂಚ್ಯಂಕ ಕುಸಿದಿದೆ. ಬಹು ನಿರೀಕ್ಷಿತ ಎಸ್‌ &ಪಿ 500 ಸೂಚ್ಯಂಕವು ಫೆಬ್ರವರಿ 19ರ ಆಲ್‌ ಟೈಮ್‌ ಹೈಗೆ ಹೋಲಿಸಿದರೆ ಈಗ 9% ಕುಸಿತಕ್ಕೀಡಾಗಿದೆ.

ಟ್ರಂಪ್‌ ಸರಕಾರವು ಮೆಕ್ಸಿಕೊ ಮತ್ತು ಕೆನಡಾದಿಂದ ಅಮೆರಿಕಕ್ಕೆ ಬರುವ ಆಮದಿಗೆ 25% ತೆರಿಗೆ ವಿಧಿಸಿದೆ. ಚೀನಾದಿಂದ ಆಮದಿಗೆ ಹೆಚ್ಚುವರಿ 10% ಟ್ಯಾಕ್ಸ್‌ ವಿಧಿಸಿದೆ. ಈ ರೀತಿ ಆಮದು ತೆರಿಗೆಯನ್ನು ಹೆಚ್ಚಿಸುವುದರದಿಂದ ಹೆಚ್ಚಿನ ಸಂಪತ್ತನ್ನು ಅಮೆರಿಕ ಪಡೆಯಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳುತ್ತಿದ್ದರೂ, ಅಮೆರಿಕನ್ನರೇ ನಂಬುತ್ತಿಲ್ಲ. ಹೂಡಿಕೆದಾರರಿಗೆ ಸಮಾಧಾನ ತಂದಿಲ್ಲ.

ಒಂದು ವೇಳೆ ಅಮೆರಿಕದಲ್ಲಿ ರಿಸೆಶನ್‌ ಉಂಟಾದರೆ ಏನಾಗಲಿದೆ? ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಬಿಸಿನೆಸ್‌ ವಲಯಕ್ಕೆ ಸಂಕಷ್ಟವಾಗಲಿದೆ. ದೇಶದ ಸಾಲ ಮತ್ತಷ್ಟು ಹೆಚ್ಚಲಿದೆ. ಅಮೆರಿಕದ ಇಕಾನಮಿಯ 70% ಪಾಲು ಕನ್‌ಸ್ಯೂಮರ್‌ ಸ್ಪೆಂಡಿಂಗ್‌ ಆಗಿದೆ. ರಿಸೆಶನ್‌ ಆದ್ರೆ ಗ್ರಾಹಕರ ಖರ್ಚು ವೆಚ್ಚಗಳು ಕುಸಿಯುತ್ತವೆ. ಹೀಗಾಗಿ ಟ್ರಂಪ್‌ ಅವರ ಟ್ರೇಡ್‌ ವಾರ್‌ಗೆ ಒಂದು ತಾರ್ಕಿಕ ಅಂತ್ಯ ಸಿಗದಿದ್ದರೆ ರಿಸೆಶನ್‌ ಭೀತಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದೇ ಇದೆ.

ಈ ಸಲ ಚೀನಾ ಕೂಡ ಅಮೆರಿಕದ ಟ್ರೇಡ್‌ ವಾರ್‌ಗೆ ಎದಿರೇಟು ಕೊಟ್ಟಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಆಮದಿಗೆ ಚೀನಾ ಕೂಡ ಆಮದು ತೆರಿಗೆಯನ್ನು ಹೆಚ್ಚಿಸಿ ತಿರುಗೇಟು ಕೊಟ್ಟಿದೆ. ಅಷ್ಟು ಮಾತ್ರವಲ್ಲದೆ, ಅಮೆರಿಕದ ಜತೆಗೆ ಯಾವುದೇ ರೀತಿಯ ಯುದ್ಧ ನಡೆಸಲು ತಾನು ರೆಡಿಯಾಗಿದ್ದೇನೆ ಎಂದು ಚೀನಾ ಸವಾಲು ಹಾಕಿದೆ. ಅದು ವಾಣಿಜ್ಯ ಸಮರ ಇರಬಹುದು, ಬೇರೆ ಯಾವುದಾದರೂ ಯುದ್ಧವೇ ಆಗಿರಬಹುದು, ಎದುರಿಸಲು ಸಿದ್ಧ ಎಂದು ತಿರುಗೇಟು ಕೊಟ್ಟಿದೆ. 2018ರಲ್ಲಿ ಟ್ರಂಪ್‌ ಅವರು ಚೀನಾ ವಿರುದ್ಧ ಮೊದಲ ಸಲ ಟ್ರೇಡ್‌ ವಾರ್‌ ನಡೆಸಿದಾಗ ಚೀನಾ ಇಂಥ ತೀಕ್ಷ್ಣವಾದ ಪ್ರತ್ಯುತ್ತರ ನೀಡಿರಲಿಲ್ಲ. ಆದರೆ ಈ ಸಲ ಡೋಂಟ್‌ ಕೇರ್‌ ಎನ್ನುತ್ತಿದೆ. ಕೆನಡಾ ಕೂಡ ಅಮೆರಿಕದ ಸರಕುಗಳ ಆಮದಿಗೆ ತೆರಿಗೆಯನ್ನು ಹೆಚ್ಚಿಸಿದೆ.

ಈ ಸುದ್ದಿಯನ್ನೂ ಓದಿ: Stock Market: ಉತ್ತಮ ಸ್ಟಾಕ್ ಖರೀದಿಗೆ ಈಗ ಸಕಾಲ? ತಜ್ಞರ ಅಭಿಮತ

ಹಾಗಾದರೆ ಅಮೆರಿಕದಲ್ಲಿ ರಿಸೆಶನ್‌ ಅಥವಾ ಆರ್ಥಿಕತೆಯ ಮಂದಗತಿ ಉಂಟಾದರೆ ಭಾರತದ ಮೇಲೆ ಪ್ರಭಾವ ಬೀರಬಹುದೇ? ಒಂದಷ್ಟು ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇದೆ. ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಏಪ್ರಿಲ್‌ 2ರಿಂದ ಟ್ರಂಪ್‌ ಅವರ ರೆಸಿಪ್ರೊಕಲ್‌ ಟಾರಿಫ್‌ ಜಾರಿಯಾಗಲಿದೆ. ಇದರಿಂದ ಭಾರತಕ್ಕೆ ವಾರ್ಷಿಕ 60 ಸಾವಿರ ಕೋಟಿ ರುಪಾಯಿ ನಷ್ಟ ನಿರೀಕ್ಷಿಸಲಾಗಿದೆ. ಇದು ಅಂಥ ದೊಡ್ಡ ಮೊತ್ತವಲ್ಲ. ಹೀಗಿದ್ದರೂ, ಅಮೆರಿಕದ ಆರ್ಥಿಕತೆ ಮಂದಗತಿಯಲ್ಲಿದ್ದರೆ, ಭಾರತಕ್ಕೆ ಕೆಲವು ಸವಾಲುಗಳು ಎದುರಾಗಬಹುದು. ಭಾರತದ ಐಟಿ ಕ್ಷೇತ್ರದಲ್ಲಿ ಉದ್ಯೋಗ ನಷ್ಟವಾಗಬಹುದು. ಟೆಕ್‌ ಕಂಪನಿಗಳಿಗೆ ಅಮೆರಿಕದ ಐಟಿ ಹೊರಗುತ್ತಿಗೆಯ ಆರ್ಡರ್‌ಗಳು ಕಡಿಮೆಯಾದರೆ ಅದರ ಪರಿಣಾಮ ಉದ್ಯೋಗ ಕಡಿತ ಸಂಭವಿಸಬಹುದು. ಅಮೆರಿಕನ್‌ ಕಂಪನಿಗಳು ಭಾರತದಲ್ಲಿ ಹೂಡಿಕೆಯನ್ನು ಕಡಿಮೆ ಮಾಡಿದರೂ, ನಕಾರಾತ್ಮಕ ಪ್ರಭಾವ ಬೀರಬಹುದು.

ಅಮೆರಿಕದಲ್ಲಿ ರಿಸೆಶನ್‌ ಆದರೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ವೃದ್ಧಿಸಬಹುದು. ಆಗ ಆಮದು ವೆಚ್ಚ ಹೆಚ್ಚಬಹುದು. ಟ್ರಂಪ್‌ ಅವರ ತೆರಿಗೆ ಸಮರ ಮತ್ತು ವ್ಯಾಪಾರ ಸಂಘರ್ಷದಿಂದ ಭಾರತದ ಮೇಲೆ ಆಗಬಲ್ಲ ಪರಿಣಾಮ ಕಡಿಮೆ ಎಂಬುದಕ್ಕೆ ಮೂರು ಕಾರಣಗಳಿವೆ. ಮೊದಲನೆಯದಾಗಿ ಭಾರತವು ಅಮೆರಿಕಕ್ಕೆ ಕಡಿಮೆ ಸರಕುಗಳನ್ನು ರಫ್ತು ಮಾಡುತ್ತಿದೆ. ಹೀಗಾಗಿ ನಮಗೆ ಅಂಥ ಟೆನ್ಷನ್‌ ಇಲ್ಲ. ಎರಡನೆಯದಾಗಿ ಭಾರತ ಹೆಚ್ಚು ಸೇವೆಯನ್ನು ರಫ್ತು ಮಾಡುತ್ತಿದೆ. ಮೂರನೆಯದಾಗಿ ಕೇಂದ್ರ ಸರಕಾರ ತನ್ನ ಸಾರ್ವಜನಿಕ ವೆಚ್ಚಗಳನ್ನು ಹೆಚ್ಚಿಸಿದೆ. ಹಣಕಾಸು ನೀತಿಗಳನ್ನು ಆರ್‌ಬಿಐ ಸಡಿಲಗೊಳಿಸುತ್ತಿದೆ. ಆಹಾರ ಹಣದುಬ್ಬರ ನಿಯಂತ್ರಣದಲ್ಲಿದೆ. ಇದು ದೇಶೀಯ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಬೇಡಿಕೆಗಳನ್ನು ಸ್ಥಳೀಯವಾಗಿಯೇ ಉಳಿಸುತ್ತದೆ.