Stock Market: ಸೆನ್ಸೆಕ್ಸ್ 528 ಅಂಕ ಕುಸಿತ; ರಷ್ಯಾ ತೈಲಕ್ಕೆ ನ್ಯಾಟೊ ನಿರ್ಬಂಧ, ಭಾರತದ ನಡೆ ಏನು?
ಸೆನ್ಸೆಕ್ಸ್ ಇವತ್ತು 500 ಅಂಕ ಕುಸಿತಕ್ಕೀಡಾಗಿದ್ದು, ದಿನದ ಮುಕ್ತಾಯದ 81,757 ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 143 ಅಂಕ ಕಳೆದುಕೊಂಡು 24,968 ಕ್ಕೆ ಸ್ಥಿರವಾಯಿತು. ಎಲ್ಲ ಪ್ರಮುಖ ಸೆಕ್ಟರ್‌ಗಳು ಇಳಿಕೆಯಾಗಿತ್ತು. ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಬ್ಯಾಂಕ್ ಷೇರುಗಳು ಇಳಿಕೆ ದಾಖಲಿಸಿತು.


ಕೇಶವಪ್ರಸಾದ.ಬಿ
ಮುಂಬೈ: ಸೆನ್ಸೆಕ್ಸ್ ಇವತ್ತು 500 ಅಂಕ ಕುಸಿತಕ್ಕೀಡಾಗಿದ್ದು, ದಿನದ ಮುಕ್ತಾಯದ 81,757 ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 143 ಅಂಕ ಕಳೆದುಕೊಂಡು 24,968 ಕ್ಕೆ ಸ್ಥಿರವಾಯಿತು. ಎಲ್ಲ ಪ್ರಮುಖ ಸೆಕ್ಟರ್‌ಗಳು ಇಳಿಕೆಯಾಗಿತ್ತು. ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಬ್ಯಾಂಕ್ ಷೇರುಗಳು ಇಳಿಕೆ ದಾಖಲಿಸಿತು. ನಿಫ್ಟಿ ಪ್ರೈವೇಟ್ ಬ್ಯಾಂಕ್ ಇಂಡೆಕ್ಸ್ ಇಳಿಯಿತು. ಆಟೊಮೊಬೈಲ್,FMCG, ಫಾರ್ಮಾ, ಹಣಕಾಸು ಸೇವೆ ವಲಯದ ಷೇರುಗಳು ನಷ್ಟಕ್ಕೀಡಾಯಿತು. ಶ್ರೀರಾಮ್ ಫೈನಾನ್ಸ್ ಷೇರು 3% ಇಳಿದರೆ, ಬಿಇಎಲ್ 2% ಇಳಿಯಿತು. ಇವತ್ತು ಬಂಗಾರದ ದರ 10 ಗ್ರಾಮ್‌ಗೆ 97,559 ರುಪಾಯಿ ಮಟ್ಟದಲ್ಲಿ ಇತ್ತು.
ಇಂದು ಲಾಭ ಗಳಿಸಿದ ಷೇರುಗಳು: ವಿಪ್ರೊ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಜೆಎಸ್ ಡಬ್ಲ್ಯು ಸ್ಟೀಲ್.
ಇಂದು ನಷ್ಟಕ್ಕೀಡಾದ ಷೇರುಗಳು: ಎಕ್ಸಿಸ್ ಬ್ಯಾಂಕ್, ಶ್ರೀರಾಮ್ ಫೈನಾನ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್.
ಇಂದು ಷೇರು ಮಾರುಕಟ್ಟೆ ಸೂಚ್ಯಂಕ ಕುಸಿತಕ್ಕೆ ಕಾರಣವೇನು?
- ಜುಲೈನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೂಡಿಕೆಯ ಹಿಂತೆಗೆತ.
- ಎಕ್ಸಿಸ್ ಬ್ಯಾಂಕ್‌ನ ತ್ರೈಮಾಸಿಕ ಫಲಿತಾಂಶ ನಿರಾಶಾದಾಯಕ.
- ಭಾರತದ ಸ್ಟಾಕ್ ಮಾರ್ಕೆಟ್ ಡೌನ್‌ಗ್ರೇಡ್ ಮಾಡಿದ ಸಿಟಿ ಸಂಸ್ಥೆಯ ವರದಿ ಎಫೆಕ್ಟ್
4. ಅಮೆರಿಕದ ಫೆಡರಲ್ ರಿಸರ್ವ್‌ನ ಮುಂದಿನ ನಡೆಯ ಅನಿಶ್ಚಿತತೆ
- ಕಚ್ಚಾ ತೈಲ ದರ ಏರಿಕೆ
ಷೇರು ಮಾರುಕಟ್ಟೆಯಲ್ಲಿ ಇಂದು ಸಿಯೆಟ್ ಟೈರ್ ಕಂಪನಿಯ ಷೇರುಗಳ ದರದಲ್ಲಿ 2% ಇಳಿಕೆ ದಾಖಲಾಯಿತು. ಮೊದಲ ತ್ರೈಮಾಸಿಕ ಫಲಿತಾಂಶ ಇಳಿಕೆ ಕಾರಣ.
ವಿಪ್ರೊ ಷೇರು ದರದಲ್ಲಿ 4% ಇಳಿಕೆ ಆಯಿತು. ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ಬಳಿಕ ಷೇರು ದರ ಇಳಿದಿದೆ. ವಿಪ್ರೊ ಏಪ್ರಿಲ್-ಜೂನ್ ಅವಧಿಯಲ್ಲಿ 3,330 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. 11% ಏರಿಕೆಯಾಗಿತ್ತು. ಎಕ್ಸಿಸ್ ಬ್ಯಾಂಕ್ ಷೇರು ದರದಲ್ಲಿ 6% ಇಳಿಕೆಯಾಗಿದೆ.
ಜೆಎಎಸ್‌ಡಬ್ಲ್ಯು ಸ್ಟೀಲ್ ಕ್ಯೂ 1 ರಿಸಲ್ಟ್ ಘೋಷಿಸಿದ್ದು, ನಿವ್ವಳ ಲಾಭದಲ್ಲಿ 158% ಏರಿಕೆ ಆಗಿದೆ. ಕಂಪನಿಯು ಏಪ್ರಿಲ್-ಜೂನ್ ಅವಧಿಯಲ್ಲಿ 2,184 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ 845 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಕಂಪನಿಯ ಆದಾಯ ಈ ಅವಧಿಯಲ್ಲಿ 43,147 ಕೋಟಿ ರುಪಾಯಿಗೆ ಏರಿಕೆಯಾಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಭಾರತೀಯ ಷೇರು ಮಾರುಕಟ್ಟೆಯಿಂದ ಕಳೆದ ಐದು ದಿನಗಳಲ್ಲಿ 10,000 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಅಥವಾ ಡಿಐಐಗಳು ನಿವ್ವಳ ಖರೀದಿದಾರರಾಗಿದ್ದಾರೆ.
ಗುಜರಾತ್ ಮಿನರಲ್ ಡೆವಲಪ್,ಮೆಂಟ್ ಕಾರ್ಪೊರೇಷನ್ ಕಂಪನಿಯ ಷೇರು ದರದಲ್ಲಿ ಶುಕ್ರವಾರ 14% ಏರಿಕೆ ಆಯಿತು. ಪ್ರಧಾನ ಮಂತ್ರಿಯವರ ಕಚೇರಿಯು ರೇರ್ ಅರ್ತ್ ಮ್ಯಾಗ್ನೇಟ್ ಬಿಕ್ಕಟ್ಟು ಉಪಶಮನ ಸಲುವಾಗಿ ಚರ್ಚೆ ನಡೆಸಲಿರುವುದು ಇದಕ್ಕೆ ಕಾರಣವಾಗಿದೆ. ಕಂಪನಿಯ ಷೇರಿನ ದರ 429 /-ಕ್ಕೆ ಏರಿಕೆ ಆಗಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಷೇರಿನ ದರ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 76% ಏರಿಕೆಯಾಗಿತ್ತು. ಬ್ಯಾಂಕ್ 1,111 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ 633 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.
ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಶನಿವಾರ ತನ್ನ ಕ್ಯೂ 1 ರಿಸಲ್ಟ್ ಅನ್ನು ಘೋಷಿಸಲಿದೆ. ಬ್ಯಾಂಕ್ 11,649 ಕೋಟಿ ರುಪಾಯಿಗಳಿಂದ 12,382 ಕೋಟಿ ತನಕ ನಿವ್ವಳ ಲಾಭ ಗಳಿಸುವ ನಿರೀಕ್ಷೆ ಇದೆ.
ಇಂಡಿಯಾ ಮಾರ್ಟ್ ಇಂಟರ್‌ಮೆಶ್ ಕ್ಯೂ 1 ರಿಸಲ್ಟ್ ಪ್ರಕಟಿಸಿದ್ದು, 153 ಕೋಟಿ ನಿವ್ವಳ ಲಾಭ ಗಳಿಸಿದೆ. 35% ಏರಿಕೆ ದಾಖಲಿಸಿದೆ.
ಬಂಧನ್ ಬ್ಯಾಂಕ್ ಕ್ಯೂ 1 ರಿಸಲ್ಟ್ ಪ್ರಕಟಿಸಿದ್ದು, 372 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. 65% ಇಳಿಕೆ ದಾಖಲಿಸಿದೆ.
ಹಿಂದೂಸ್ತಾನ್ ಝಿಂಕ್ ಕ್ಯೂ 1 ರಿಸಲ್ಟ್ ಪ್ರಕಟಿಸಿದ್ದು, 2,234 ಕೋಟಿ ರುಪಾಯಿಗೆ ನಿವ್ವಳ ಲಾಭ ಇಳಿಕೆಯಾಗಿದೆ. 5% ಇಳಿದಿದೆ.
ಗ್ಲೋಬಲ್ ಬ್ರೋಕರೇಜ್ ಆಗಿರುವ ಸಿಟಿ ಸಂಸ್ಥೆಯು ಭಾರತದ ಸ್ಟಾಕ್ ಮಾರ್ಕೆಟ್‌ನ ಗ್ರೇಡಿಂಗ್ ಅನ್ನು "ನ್ಯೂಟ್ರಲ್ʼಗೆ ಇಳಿಸಿದೆ. ಹೈ ವಾಲ್ಯುಯೇಶನ್ ಇದಕ್ಕೆ ಕಾರಣ ಎಂದು ತಿಳಿಸಿದೆ. ಕಾರ್ಪೊರೇಟ್ ಕಂಪನಿಗಳ ತ್ರೈಮಾಸಿಕ ಅದಾಯ ಸಾಧಾರಣ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಗ್ರೇಡಿಂಗ್ ಅನ್ನು ನ್ಯೂಟ್ರಲ್ ಗೊಳಿಸಿದೆ. ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ಬ್ಯಾಂಕಿಂಗ್, ಎನ್‌ಬಿಎಫ್‌ಸಿ, ಹೆಲ್ತ್‌ಕೇರ್, ಟೆಲಿಕಾಂ ವಲಯದ ಷೇರುಗಳು ಸಕಾರಾತ್ಮಕವಾಗಿವೆ. ಐಟಿ, ಮೆಟಲ್ ಷೇರುಗಳು ಒತ್ತಡದಲ್ಲಿವೆ ಎಂದು ಸಿಟಿ ವರದಿ ತಿಳಿಸಿದೆ.
IDFC First Bank ಷೇರು ದರ ಕಳೆದ 5 ದಿನಗಳಲ್ಲಿ 6% ಇಳಿಕೆಯಾಗಿದೆ. ಕಳೆದ ಒಂದು ವರ್ಷದಿಂದಲೂ ಷೇರು ನಷ್ಟದಲ್ಲಿದೆ. ಷೇರಿನ ದರ 73/- ಆಗಿದೆ.
ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ನ್ಯಾಟೊ ಮತ್ತು ಅಮೆರಿಕ ನಿರ್ಬಂಧ ವಿಧಿಸಿವೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳಿಗೆ ನ್ಯಾಟೊ ಬೆದರಿಕೆ ಒಡ್ಡಿವೆ. ಇದು ಭಾರತಕ್ಕೂ ಒಂದು ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಭಾರತವು ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿದೆ.
ಹೀಗಿದ್ದರೂ, ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸಜ್ಜಾಗಿದೆ, ಪರ್ಯಾಯ ಆಯ್ಕೆಗಳೂ ಭಾರತದ ಮುಂದಿದೆ ಎಂದು ಭರವಸೆ ನುಡಿದಿದ್ದಾರೆ.
ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು 2022ರ ಫೆಬ್ರವರಿಯಿಂದಲೂ ರಷ್ಯಾದಿಂದ ಕಚ್ಚಾ ತೈಲವನ್ನು ಡಿಸ್ಕೌಂಟ್ ದರದಲ್ಲಿ ಪಡೆಯುತ್ತಿವೆ. ಹಲವು ದೇಶಗಳು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಗೆ ಹೆದರಿಕೊಂಡು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿಲ್ಲ.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ರಾಷ್ಟ್ರಗಳ ವಿರುದ್ಧ ನಿರ್ಬಂಧ ಹೇರುವ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ 50 ದಿನಗಳಲ್ಲಿ ರಷ್ಯಾವು ಉಕ್ರೇನ್ ಜತೆಗೆ ಕದನ ವಿರಾಮ ಮಾಡದಿದ್ದರೆ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ವಿರುದ್ಧ ನಿರ್ಬಂಧ ಹಾಕುವ ಬೆದರಿಕೆಯನ್ನು ಟ್ರಂಪ್ ಹಾಕಿದ್ದಾರೆ.
ರಷ್ಯಾದಿಂದ ಅಮೆರಿಕಕ್ಕೆ ರಫ್ತು ಮೇಲೆ 100% ಟಾರಿಫ್ ಹಾಕಿರುವ ಟ್ರಂಪ್, ಮುಂದಿನ ಹಂತದಲ್ಲಿ ರಷ್ಯಾದಿಂದ ಸರಕುಗಳನ್ನು, ತೈಲವನ್ನು ಆಮದು ಮಾಡುವ ದೇಶಗಳ ವಿರುದ್ಧ ಟಾರಿಫ್ ಹೆಚ್ಚಿಸುವ ಸುಳಿವು ನೀಡಿದ್ದಾರೆ. ಜತೆಗೆ ಮೂರನೇ ರಾಷ್ಟ್ರದ ಮೂಲಕ ರಷ್ಯಾದ ತೈಲವನ್ನು ಭಾರತವು ತರಿಸಿಕೊಳ್ಳುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Stock Market: ಗ್ರಾಸಿಮ್ ಇಂಡಸ್ಟ್ರೀಸ್ ಸ್ಟಾಕ್ ಖರೀದಿಸಿದ್ರೆ 36% ಲಾಭ? RCB ಮಾರಾಟಕ್ಕಿಲ್ಲ: ಡಿಯಾಜಿಯೊ
ಗಯಾನಾ, ಬ್ರೆಜಿಲ್, ಕೆನಡಾ, ವೆನಿಜುವೆಲಾ ಹೀಗೆ ಪರ್ಯಾಯ ಮೂಲಗಳಿಂದಲೂ ಭಾರತ ತೈಲ ಖರೀದಿಸುವ ಆಯ್ಕೆ ಇದೆ. 40 ದೇಶಗಳಿಂದ ಕಚ್ಚಾ ತೈಲ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.