ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಡ್ರಗ್ಸ್‌ ಮೇಲೆ ಟ್ರಂಪ್‌ 100% ಸುಂಕ; ಸೆನ್ಸೆಕ್ಸ್‌ 700 ಅಂಕ ಪತನ, ಐಟಿ, ಫಾರ್ಮಾ ಸ್ಟಾಕ್ಸ್‌ ಭಾರಿ ಕುಸಿತ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಭಾರಿ ಕುಸಿತಕ್ಕೀಡಾಯಿತು. ಸತತ 6 ತಿಂಗಳುಗಳಿಂದ ಸೆನ್ಸೆಕ್ಸ್‌ ಇಳಿಯುತ್ತಿದೆ. ಮುಖ್ಯವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಅಮೆರಿಕಕ್ಕೆ ಆಮದಾಗುವ ಬ್ರ್ಯಾಂಡೆಡ್‌ ಡ್ರಗ್ಸ್‌ ಆಮದಿನ ಮೇಲೆ 100% ಸುಂಕವನ್ನು ಘೋಷಿಸಿದ್ದಾರೆ.

ಡ್ರಗ್ಸ್‌ ಮೇಲೆ ಟ್ರಂಪ್‌ 100% ಸುಂಕ ಸೆನ್ಸೆಕ್ಸ್‌; 700  ಅಂಕ ಪತನ

-

Vishakha Bhat Vishakha Bhat Sep 26, 2025 5:07 PM

ಕೇಶವಪ್ರಸಾದ.ಬಿ

ಮುಂಬೈ: ಸ್ಟಾಕ್‌ ಮಾರ್ಕೆಟ್‌ನಲ್ಲಿ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಭಾರಿ (Stock Market) ಕುಸಿತಕ್ಕೀಡಾಯಿತು. ಸತತ 6 ತಿಂಗಳುಗಳಿಂದ ಸೆನ್ಸೆಕ್ಸ್‌ ಇಳಿಯುತ್ತಿದೆ. ಮುಖ್ಯವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಅಮೆರಿಕಕ್ಕೆ ಆಮದಾಗುವ ಬ್ರ್ಯಾಂಡೆಡ್‌ ಡ್ರಗ್ಸ್‌ ಆಮದಿನ ಮೇಲೆ 100% ಸುಂಕವನ್ನು ಘೋಷಿಸಿದ್ದು, ಇದರ ಬೆನ್ನಲ್ಲೇ ಷೇರು ಸೂಚ್ಯಂಕಗಳು ಕುಸಿದಿವೆ. ಸೆನ್ಸೆಕ್ಸ್‌ ಮಧ್ಯಂತರದಲ್ಲಿ 800 ಅಂಕ ಕುಸಿತಕ್ಕೀಡಾಯಿತು. ಟೆಕ್ನಾಲಜಿ, ಫಾರ್ಮಾಸ್ಯುಟಿಕಲ್ಸ್‌, ಮಿಡ್-ಕ್ಯಾಪ್‌ ಮತ್ತು ಎನರ್ಜಿ ಸೆಕ್ಟರ್‌ ಷೇರುಗಳು ಇಳಿಯಿತು. ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್‌ 733 ಅಂಕ ಕಳೆದುಕೊಂಡು 80,426ಕ್ಕೆ ಸ್ಥಿರವಾದರೆ, ನಿಫ್ಟಿ 236 ಅಂಕ ನಷ್ಟದಲ್ಲಿ 24,654ಕ್ಕೆ ಸ್ಥಿರವಾಯಿತು.

ಇಂದು ಸ್ಟಾಕ್‌ ಮಾರ್ಕೆಟ್‌ ಕುಸಿತಕ್ಕೆ ಕಾರಣವೇನು?

  1. ಫಾರ್ಮಾ ಸೆಕ್ಟರ್‌ ಮೇಲೆ ಟ್ರಂಪ್‌ ಟಾರಿಫ್‌
  2. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ
  3. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ4. ಡಾಲರ್‌ ಎದುರು ರುಪಾಯಿ ಮೌಲ್ಯ ಇಳಿಕೆ
  4. ಎಚ್-‌1ಬಿ ವೀಸಾ ಶುಲ್ಕ ಹೆಚ್ಚಳ

ಶುಕ್ರವಾರ ಔಷಧ ಕಂಪನಿಗಳ ಷೇರುಗಳ ದರದಲ್ಲಿ 5% ಇಳಿಕೆ ದಾಖಲಾಯಿತು. ಟ್ರಂಪ್‌ ಅವರು ಬ್ರಾಂಡೆಡ್‌ ಮತ್ತು ಪೇಟೆಂಟ್‌ ಇರುವ ಔಷಧಗಳ ಆಮದು ಮೇಲೆ 100% ಟ್ಯಾಕ್ಸ್‌ ವಿಧಿಸಿದ್ದಾರೆ. ಜತೆಗೆ ಹೆವಿ ಡ್ಯೂಟಿ ಟ್ರಕ್ಸ್‌ಗಳ ಮೇಲೆ 25%, ಕಿಚನ್‌ ಕ್ಯಾಬಿನೆಟ್ಸ್‌ ಮೇಲೆ 50% ಟಾರಿಫ್‌ ವಿಧಿಸಿದ್ದಾರೆ.

ಟ್ರಂಪ್‌ ಅವರು ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಔಷಧಗಳ ಮೇಲೆ 100% ಸುಂಕ ಹಾಕಿದ್ದಾರೆ. ಹೀಗಿದ್ದರೂ ಜೆನೆರಿಕ್‌ ಔಷಧಗಳ ಮೇಲೆ ಈ ಸುಂಕ ಅನ್ವಯವಾಗುವುದಿಲ್ಲ. ಭಾರತದ ಫಾರ್ಮಾಸ್ಯುಟಿಕಲ್ಸ್‌ ರಫ್ತಿನಲ್ಲಿ ಮೂರನೇ ಒಂದರಷ್ಟು ಪಾಲು ಅಮೆರಿಕಕ್ಕೆ ರಫ್ತಾಗುತ್ತಿದೆ. ಟ್ರಂಪ್‌ ಇದೀಗ 100% ಟ್ಯಾಕ್ಸ್‌ ವಿಧಿಸಿರುವುದರಿಂದ ಔಷಧ ಕಂಪನಿಗಳು ಆಫ್ರಿಕದ ರಾಷ್ಟ್ರಗಳು ಸೇರಿದಂತೆ ಇತರ ಮಾರುಕಟ್ಟೆಯನ್ನು ಅವಲಂಬಿಸುವ ನಿರೀಕ್ಷೆ ಇದೆ.

ಸನ್‌ ಫಾರ್ಮಾ ಷೇರು ದರ ಅತಿ ಹೆಚ್ಚು ನಷ್ಟಕ್ಕೀಡಾಯಿತು. 5% ಗೂ ಹೆಚ್ಚು ಇಳಿಯಿತು. 52 ವಾರಗಳ ಕನಿಷ್ಠ ಮಟ್ಟಕ್ಕಿಳಿಯಿತು. 1,547 ರುಪಾಯಿಗೆ ಇಳಿಯಿತು. ಬಯೊಕಾನ್‌ ಷೇರು ದರ 344 ರುಪಾಯಿಗೆ ಇಳಿಯಿತು. ಜೂಡೂಸ್‌ ಲೈಫ್‌ ಸೈನ್ಸ್‌ 990/-ಕ್ಕೆ ತಗ್ಗಿತು.

ಟ್ರಂಪ್‌ ಸರಕಾರ ಎಚ್‌ -1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿರುವುದು ಕೂಡ ನಕಾರಾತ್ಮಕ ಪ್ರಭಾವ ಬೀರಿದೆ. ಅಕ್ಟೋಬರ್‌ ಮತ್ತು ಡಿಸೆಂಬರ್‌ನಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ. ಈ ವರ್ಷ ಇದುವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1 ಲಕ್ಷದ 44 ಸಾವಿರ ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಎಫ್‌ಪಿಐಗಳು ಭಾರತದ ಸ್ಟಾಕ್‌ ಮಾರ್ಕೆಟ್‌ ನಿಂದ ಷೇರುಗಳನ್ನುಮಾರಿ, ಹಾಂಕಾಂಗ್‌, ತೈವಾನ್‌, ದಕ್ಷಿಣ ಕೊರಿಯಾದ ಸ್ಟಾಕ್‌ ಮಾರ್ಕೆಟ್‌ ನಲ್ಲಿ ಹೂಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: ಸೆನ್ಸೆಕ್ಸ್‌ 206 ಅಂಕ ಇಳಿಕೆ; ಬ್ಯಾಂಕ್‌, ಹೆಲ್ತ್‌ಕೇರ್‌ ಸ್ಟಾಕ್ಸ್‌ ಕುಸಿತ ಕಾರಣವೇನು?

ಎಚ್‌ಎಎಲ್‌ ಅಥವಾ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ ಕಂಪನಿಯ ಷೇರು ದರದಲ್ಲಿ ಈ ವರ್ಷ 15% ಏರಿಕೆಯಾಗಿದೆ. ಸಂಸ್ಥೆಯು 97 ಲಘು ಯುದ್ಧ ವಿಮಾನಗಳ ತಯಾರಿಕೆಗೆ ಒಪ್ಪಂದ ಮಾಡಿಕೊಂಡಿರುವುದು ಸಕಾರಾತ್ಮಕ ಪರಿಣಾಮ ಬೀರಿದೆ. ಷೇರಿನ ದರ 6,220/-ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಈಗ ಷೇರಿನ ದರ 4,734/- ಇದೆ.