Andhra Horror: ಕಾರಿನೊಳಗೆ ಉಸಿರುಗಟ್ಟಿ ನಾಲ್ವರು ಮಕ್ಕಳು ದಾರುಣ ಸಾವು; ಪೋಷಕರ ಆಕ್ರಂದನ
ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಘೋರ ದುರಂತವೊಂದು ನಡೆದಿದೆ. ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಿಲುಕಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.


ಹೈದರಾಬಾದ್: ಆಂಧ್ರಪ್ರದೇಶದ (Andhra Horror) ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಘೋರ ದುರಂತವೊಂದು ನಡೆದಿದೆ. ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಿಲುಕಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಹೋಗಿದ್ದಾರೆ. ಎಷ್ಟು ಹೊತ್ತಾದರೂ ಮಕ್ಕಳು ಬಾರದ ಕಾರಣ ಪೋಷಕರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಿದ ನಂತರ ಕಾರಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ.
ಬಳಿಕ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರಗೆ ತಂದಿದ್ದಾರೆ. ಕೂಡಲೇ ವಿಜಯನಗರದ ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಜಿಹೆಚ್) ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ಮಕ್ಕಳನ್ನು ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಮತ್ತು ಕಂಡಿ ಮನಸ್ವಿನಿ (6) ಎಂದು ಗುರುತಿಸಲಾಗಿದೆ, ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರಾಗಿದ್ದು, ನಾಲ್ವರು ಮಕ್ಕಳು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಎರಡು ದಿನಗಳ ಹಿಂದೆ ದ್ವಾರಪುಡಿ ಗ್ರಾಮದ ಮಹಿಳಾ ಮಂಡಳಿ ಕಚೇರಿಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿದ್ದ. ಕಾರು ಲಾಕ್ ಮಾಡುವುದನ್ನು ಮರೆತಿದ್ದ ಎನ್ನಲಾಗಿದೆ. ಈ ನಡುವೆ ಭಾನುವಾರ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಕಾರಿನೊಳಗೆ ಹೋಗಿದ್ದು, ಕಾರಿನ ಬಾಗಿಲು ಲಾಕಿ ಆಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯನಗರ ಜಿಜಿಹೆಚ್‌ಗೆ ರವಾನಿಸಿದ್ದಾರೆ. ಸ್ಥಳೀಯ ಶಾಸಕಿ ಅದಿತಿ ವಿಜಯಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಈ ನಡುವೆ ಸ್ಥಳೀಯ ನಿವಾಸಿಗಳ ಮಾಹಿತಿಯ ಮೇರೆಗೆ, ವಿಜಯನಗರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಕಾರಿನ ಮಾಲೀಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Terrorist Arrest: ಹೈದರಾಬಾದ್‌ನಲ್ಲಿ ಭಾರೀ ಸ್ಪೋಟಕ್ಕೆ ಸಂಚು ; ಇಬ್ಬರು ಶಂಕಿತರ ಬಂಧನ
ಕಳೆದ ತಿಂಗಳಲ್ಲಿ ತೆಲುಗು ರಾಜ್ಯಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಏಪ್ರಿಲ್‌ನಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಲಾಕ್ ಆಗಿದ್ದ ಕಾರಿನಲ್ಲಿ ಸಿಲುಕಿಕೊಂಡು ಇಬ್ಬರು ಹುಡುಗಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದರು.