ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kolar Shootout: ಮಾಸ್ತಿ ಸಮೀಪ ಬಿಜೆಪಿ ಮುಖಂಡನ ಕಾರಿನ ಮೇಲೆ ಶೂಟೌಟ್: ಇಬ್ಬರಿಗೆ ಗಾಯ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಸಮೀಪ ಇನ್ನೋವಾ ಕಾರಿನ ಮೇಲೆ ಶೂಟೌಟ್‌ ನಡೆದಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನರೇಂದ್ರ ಅವರಿಗೆ ಸೇರಿದ ಇನ್ನೋವಾ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರ ತಮ್ಮ ರವಿ ಹಾಗೂ ಮತ್ತೊಬ್ಬ ತಮ್ಮ ರೌಡಿಶೀಟರ್ ಪ್ರತಾಪ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾಸ್ತಿ ಸಮೀಪ ಬಿಜೆಪಿ ಮುಖಂಡನ ಕಾರಿನ ಮೇಲೆ ಶೂಟೌಟ್: ಇಬ್ಬರಿಗೆ ಗಾಯ!

-

Prabhakara R
Prabhakara R Nov 24, 2026 7:01 PM

ಕೋಲಾರ: ಮಾಲೂರು ತಾಲೂಕಿನ ಮಾಸ್ತಿ (Masti) ಗ್ರಾಮದ ಸಮೀಪ ಚಲಿಸುತ್ತಿದ್ದ ಇನ್ನೋವಾ ಕಾರಿನ ಮೇಲೆ ಗುಂಡಿನ ದಾಳಿ (Kolar Shootout) ನಡೆದಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನರೇಂದ್ರ ಅವರಿಗೆ ಸೇರಿದ ಇನ್ನೋವಾ ಕಾರಿನಲ್ಲಿ ಅವರ ತಮ್ಮ ರವಿ ಹಾಗೂ ಮತ್ತೊಬ್ಬ ತಮ್ಮ ರೌಡಿಶೀಟರ್ ಪ್ರತಾಪ್ ಪ್ರಯಾಣಿಸುತ್ತಿದ್ದಾಗ ಗುಂಡಿನ ಮಳೆ ಸುರಿಸಲಾಗಿದೆ.

ಸ್ವಗ್ರಾಮ ಅಣಿಕರಣಹಳ್ಳಿಯಿಂದ ಮಾಸ್ತಿ ಕಡೆಗೆ ಬರುತ್ತಿದ್ದಾಗ ಕೃತ್ಯ ನಡೆದಿದೆ. ಕಾರಿನ ಸೈಡ್ ಗ್ಲಾಸ್‌ನಲ್ಲಿ ಎರಡು ತೂತುಗಳು ಪತ್ತೆಯಾಗಿದ್ದು, ಕಾರಿನ ಚಾಲಕನ ಕಡೆಯ ಡೋರ್ ಬಳಿ ರಕ್ತದ ಗುರುತು ಕೂಡ ಕಂಡುಬಂದಿದೆ. ಕಾರಿನ ಮೇಲೆ ಶೂಟೌಟ್ ನಡೆದಿದೆ ಎಂದು ಕಾರಿನಲ್ಲಿದ್ದವರು ಪ್ರತಿಕ್ರಿಯಿಸಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಿಜವಾಗಿಯೂ ಶೂಟೌಟ್‌ನಿಂದ ನಡೆದಿದೆಯೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಮಾಸ್ತಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು, ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

ಎಸ್ಪಿ ಸೇರಿ ವಿವಿಧ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಸ್ತಿ ಭಾಗ ತಮಿಳುನಾಡು ಗಡಿಗೆ ಅಂಟಿಕೊಂಡಿರುವುದರಿಂದಾಗಿ ತಮಿಳುನಾಡಿನ ನಂಟಿನ ಕುರಿತಾಗಿಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿಗೆ ಅಂಟಿಕೊಂಡಿರುವ ಮಾಲೂರು ಭಾಗದಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ದಂಧೆಗಳು ಎಗ್ಗಿಲ್ಲದೆ ಸಾಗುತ್ತಿದ್ದು, ಈ ಸಂಬಂಧ ಗಲಾಟೆ, ವಿವಾದ ಸಾಮಾನ್ಯವಾಗಿವೆ. ಶೂಟೌಟ್ ಅದರ ಮುಂದುವರಿದ ಭಾಗವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ದಿಕ್ಕಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.