Bagalkot Car Blast: ಜಮಖಂಡಿಯಲ್ಲಿ ಬಾರ್ ಮುಂದೆ ನಿಲ್ಲಿಸಿದ್ದ ಕಾರು ಏಕಾಏಕಿ ಸ್ಫೋಟ, ಛಿದ್ರಛಿದ್ರಗೊಂಡ ವಾಹನ!
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಕಾರು ಸ್ಫೋಟಗೊಂಡಿದೆ. ಘಟನೆಯ ವೇಳೆ ವೈನ್ ಶಾಪ್ ಮಾಲೀಕ ಅಂಗಡಿ ಮುಚ್ಚುತ್ತಿದ್ದರು. ಇದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಫೋಟದ ರಭಸಕ್ಕೆ ಸುತ್ತಮುತ್ತ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಕಾರು ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿಯಲ್ಲಿ ಸೆರೆಯಾಗಿದೆ.
-
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ XUV300 ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ವಾಹನ ಸಂಪೂರ್ಣ ಛಿದ್ರಛಿದ್ರವಾಗಿದೆ. ವೈನ್ ಶಾಪ್ ಮಾಲೀಕ ಹಣಮಂತ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಸುಮಾರು 10:30ಕ್ಕೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಹಾಗೂ ಬೆಳಗಾವಿ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಯಶ್ರೀ ಹಣಮಂತ ಅಥಣಿ ಅವರಿಗೆ ಸೇರಿದ ವಾಹನ ಇದಾಗಿದೆ. ಮೂರು ವರ್ಷದ ಹಿಂದೆ ಪತ್ನಿಯ ಹೆಸರಿನಲ್ಲಿ ವೈನ್ ಶಾಪ್ ಮಾಲೀಕ ವಾಹನ ಖರೀದಿಸಿದ್ದರು.
ಕಾರು ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿಯಲ್ಲಿ ಸೆರೆಯಾಗಿದೆ. ಕಾರು ಮಾಲೀಕರು ಯಾರೋ ಬಾಂಬ್ ಇಟ್ಟಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಸಿಸಿಟಿವಿ ಹಾಗೂ ಕಾಲ್ ಸಿಡಿಆರ್ ಪರಿಶೀಲನೆ ಮಾಡಲಾಗಿದೆ. ಕಾರಿನ ಬಳಿ ಅನುಮಾನಾಸ್ಪದವಾಗಿ ಯಾರೂ ಹೋಗಿರುವುದು ಕಂಡುಬಂದಿಲ್ಲ. ಬಾಂಬ್ ನಿಷ್ಕ್ರಿಯ ದಳ ಹಾಗೂ SOCO ತಂಡದಿಂದ ಪರಿಶೀಲನೆ ಮಾಡಲಾಗಿದ್ದು, ಕಾರಿನ ಎಂಜಿನ್ ಭಾಗದಲ್ಲಿ ಸ್ಫೋಟ ಸಂಭವಿಸಿರುವುದು ಪ್ರಾಥಮಿಕವಾಗಿ ಪತ್ತೆಯಾಗಿದೆ. ಸ್ಫೋಟಕ್ಕೆ ಬ್ಯಾಟರಿ, ಎಂಜಿನ್ ಅಥವಾ ಬೇರೆ ಏನಾದರೂ ಕಾರಣವಿದೆಯೇ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.