ಆಮ್ಲೆಟ್ ಚೂರು, ಎಐ ಸಹಾಯದಿಂದ ಮಹಿಳೆ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು; ಸಿನಿಮೀಯ ಕಾರ್ಯಾಚರಣೆ ಹೇಗಿತ್ತು?
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕಳೆದ ಡಿಸೆಂಬರ್ ತಿಂಗಳಾಂತ್ಯದಲ್ಲಿ ನಡೆದಿದ್ದ ಯಾವುದೇ ಕುರುಹುಗಳಿಲ್ಲದ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಆಮ್ಲೆಟ್ ತುಂಡು, ಕೃತಕ ಬುದ್ಧಿಮತ್ತೆ ಮತ್ತು ಯುಪಿಐ ಪಾವತಿ ವಿವರಗಳು ಸಹಾಯ ಮಾಡಿತ್ತು. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
(ಸಂಗ್ರಹ ಚಿತ್ರ) -
ಗ್ವಾಲಿಯರ್: ಮುಖ ಸಂಪೂರ್ಣ ನಜ್ಜುಗುಜ್ಜಾಗಿ ಗುರುತೇ ಪತ್ತೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಶವ ಯಾರದ್ದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ (Gwalior)ನಲ್ಲಿ ನಡೆದಿದ್ದ ಯಾವುದೇ ಕುರುಹುಗಳಿಲ್ಲದ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದು ಮೂರು ಪ್ರಮುಖ ಅಂಶಗಳು. ಅವುಗಳೆಂದರೆ ಆಮ್ಲೆಟ್ ತುಂಡು (omelette piece), ಕೃತಕ ಬುದ್ಧಿಮತ್ತೆ (Artificial intelligence) ಮತ್ತು ಯುಪಿಐ ಪಾವತಿ (UPI payment) ವಿವರಗಳು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಗೋಲಾ ಕಾ ಮಂದಿರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 29ರಂದು ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಆಕೆಯ ಮುಖವನ್ನು ಭಾರವಾದ ಕಲ್ಲಿನಿಂದ ಜಜ್ಜಲಾಗಿತ್ತು. ಈ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದು ಆಮ್ಲೆಟ್ ತುಂಡು, ಕೃತಕ ಬುದ್ಧಿಮತ್ತೆ ಮತ್ತು ಯುಪಿಐ ಪಾವತಿ ವಿವರಗಳು.
ಶಿಲ್ಪಾ ಶೆಟ್ಟಿ ದಂಪತಿಗೆ ಮತ್ತೊಂದು ಸಂಕಷ್ಟ; ಬಿಟ್‌ಕಾಯಿನ್ ಹಗರಣದಲ್ಲಿ ಸಮನ್ಸ್ ಜಾರಿ
ಶವದ ಮುಖ ಭಾಗ ಬಹುತೇಕ ನಾಶವಾಗಿದ್ದರಿಂದ ಪೊಲೀಸರು ಆಕೆಯನ್ನು ಗುರುತಿಸುವಲ್ಲಿ ವಿಫಲರಾದರು. ಬಳಿಕ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಆಕೆಯ ರೇಖಾಚಿತ್ರವನ್ನು ತಯಾರಿಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಲು ಆಮ್ಲೆಟ್ ತುಂಡು ಮತ್ತು ಆನ್‌ಲೈನ್ ಪಾವತಿಯ ವಿವರಗಳು ಸಹಾಯ ಮಾಡಿತ್ತು. ಇದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಯಾವುದೇ ಕುರುಹುಗಳಿಲ್ಲದ ಈ ಪ್ರಕರಣದಲ್ಲಿ ಮಹಿಳೆಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಆರಂಭದಲ್ಲಿ, ಶವವನ್ನು ಪರಿಶೀಲಿಸಿದಾಗ ಆಮ್ಲೆಟ್ ತುಂಡು ಕಂಡುಬಂದಿದೆ. ಇದರ ಆಧಾರದಲ್ಲಿ 200 ಮೀಟರ್ ವ್ಯಾಪ್ತಿಯೊಳಗಿನ ಆಹಾರ ಮಳಿಗೆಗಳನ್ನು ಪ್ರಶ್ನಿಸಲಾಗಿದ್ದು, ಒಬ್ಬ ಮಹಿಳೆ ಇಬ್ಬರು ಪುರುಷರೊಂದಿಗೆ ಆಮ್ಲೆಟ್ ತಿಂದಿರುವ ಮಾಹಿತಿ ಸಿಕ್ಕಿದೆ ಎಂದು ಅವರು ವಿವರಿಸಿದರು.
ಸಿಸಿಟಿವಿ ದೃಶ್ಯಗಳು, ಇಬ್ಬರು ವ್ಯಕ್ತಿಗಳ ಆನ್‌ಲೈನ್ ಪಾವತಿ ವಿವರಗಳನ್ನು ಬಳಸಿ ಮಂಗಳವಾರ ಬೆಳಗ್ಗೆ ಪೊಲೀಸರು ಗ್ವಾಲಿಯರ್ ನಿವಾಸಿ ಸಚಿನ್ ಸೇನ್ ಎಂಬಾತನನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಟಿಕಮ್‌ಗಢ ಮೂಲದವರೆಂದು ಗುರುತಿಸಲಾಗಿದೆ. ಆಕೆ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಕೊಲೆಯಾಗುವ ವಾರದ ಹಿಂದೆಯಷ್ಟೇ ಸೇನ್ ಜೊತೆ ಸಂಪರ್ಕ ಬೆಳೆಸಿದ್ದು, ಆತನೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಮಹಿಳೆಗೆ ಹಲವಾರು ಪುರುಷರೊಂದಿಗೆ ಸಂಬಂಧವಿದೆ ಎಂಬ ಅನುಮಾನ ಹುಟ್ಟಿಕೊಂಡಿದ್ದರಿಂದ ಸಚಿನ್ ಆಕೆಯ ಕೊಲೆಗೆ ಯೋಜನೆ ರೂಪಿಸಿದ್ದನು ಎಂದು ಎಸ್‌ಎಸ್‌ಪಿ ಸಿಂಗ್ ತಿಳಿಸಿದ್ದಾರೆ.
Assault Case: ರೌಡಿಶೀಟರ್‌ನ ಕೈ ಮುರಿದು, ಕಣ್ಣಿಗೆ ಇರಿದ ಪತ್ನಿ! ಪೊಲೀಸ್ ಠಾಣೆಗೆ ಓಡಿ ಬಂದ ಗಂಡ!
ಆತ ಆಕೆಯನ್ನು ಮುಖ್ಯ ರಸ್ತೆಯ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು,ಅನಂತರ ಕಲ್ಲಿನಿಂದ ಅವಳ ತಲೆಯನ್ನು ಜಜ್ಜಿ ಪುಡಿ ಮಾಡಿದ್ದಾನೆ. ಮಹಿಳೆ ಕೊಲೆಯಾದ ಸ್ಥಳದಲ್ಲಿ ಜಾಕೆಟ್ ಮತ್ತು ಇನ್ನು ಕೆಲವು ವಸ್ತುಗಳು ಪೊಲೀಸರಿಗೆ ಸಿಕ್ಕಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಪೊಲೀಸರು ಮಹಿಳೆಯ ರೇಖಾಚಿತ್ರವನ್ನು ಬಿಡಿಸಿದ್ದಾರೆ. ಬಳಿಕ ಇತರ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಯನ್ನು ಪತ್ತೆ ಮಾಡಲಾಯಿತು ಎಂದು ಸಿಂಗ್ ಹೇಳಿದ್ದಾರೆ.