ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿಯನ್ನು ನಿಂದಿಸಿದ ಅಪ್ರಾಪ್ತ ಬಾಲಕಿ ವಿರುದ್ಧ ಯಾವುದೇ ಕೇಸು ಇಲ್ಲ: ದೆಹಲಿ ಪೊಲೀಸ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿ ಬಳಿಕ ವಿಡಿಯೊ ಮೂಲಕ ಕ್ಷಮೆಯಾಚಿಸಿದ ಬಾಲಕಿ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂಬುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿಯವರನ್ನು ನಿಂದಿಸಿದ ಬಾಲಕಿ ವಿರುದ್ಧ ನೋಯ್ಡಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದರು. ಇದರ ಬಳಿಕ ಆಕೆ ಕ್ಷಮೆ ಕೇಳಿದ್ದು, ಆಕೆಯ ತಾಯಿಯು ಕೂಡ ಕ್ಷಮೆಯಾಚಿಸಿದ್ದರು.

ಅಪ್ರಾಪ್ತ ಬಾಲಕಿ ವಿರುದ್ಧ ಯಾವುದೇ ಕೇಸಿಲ್ಲ

ಸಂಗ್ರಹ ಚಿತ್ರ -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ನಿಂದಿಸಿದ ಬಾಲಕಿಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೇ ಇರಲು ದೆಹಲಿ ಪೊಲೀಸರು (Delhi police) ನಿರ್ಧರಿಸಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ (CJP Protest) ವೇಳೆ ಪ್ರಧಾನಿಯವರನ್ನು ನಿಂದಿಸಿದ್ದ ಅಪ್ರಾಪ್ತ ಬಾಲಕಿ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮಾಡಿ ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಳು. ಬಳಿಕ ಆಕೆಯ ತಾಯಿಯು ಕೂಡ ಆಕೆಯನ್ನು ಕ್ಷಮಿಸುವಂತೆ ವಿನಂತಿ ಮಾಡಿಕೊಂಡಿದ್ದರು. ಇದರ ಅನಂತರ ಇದೀಗ ದೆಹಲಿ ಪೊಲೀಸರು ಆಕೆಯ ವಿರುದ್ಧದ ಪ್ರಕರಣ ಕೈಬಿಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ ಬಾಲಕಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರಿಂದ ಆಕೆಯ ವಿರುದ್ಧ ನೋಯ್ಡಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ಅದನ್ನು ದೆಹಲಿ ಸಂಸತ್ತು ಠಾಣೆಗೆ ವರ್ಗಾಯಿಸಿದ್ದರು.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಕೇಸ್: ಬ್ರಿಜ್ ಭೂಷಣ್ ಸಿಂಗ್‌ಗೆ ಬಿಗ್‌ ರಿಲೀಫ್‌

ಬಳಿಕ ಬಾಲಕಿಯು ವಿಡಿಯೊ ಮಾಡಿ, ನನಗೆ ಕೇವಲ 15 ವರ್ಷ. ನಾನು ಮಾಡಿರುವ ತಪ್ಪು ಕ್ಷಮೆಗೆ ಅರ್ಹವಾಗಿರಲಿಲ್ಲ. ನಾನು ಬಹಳಷ್ಟು ಕೆಟ್ಟ ಮಾತುಗಳನ್ನು ಹೇಳಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ನಾನು ಇಡೀ ದೇಶದ ಜನತೆಯ ಬಳಿ ಕ್ಷಮೆಯಾಚಿಸುತ್ತೇನೆ. ನನಗೆ ತುಂಬಾ ನಾಚಿಕೆಯಾಗಿದೆ. ನಾನು ನನ್ನನ್ನೇ ನೋಡಲು ಸಹ ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿ ಬಿಡುಗಡೆ ಮಾಡಿದ್ದಳು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮನ್ನು ನಿಂದಿಸಿದವರು ದಾರಿ ತಪ್ಪಿದ ಮಕ್ಕಳು. ಅವರನ್ನು ನಾನು ಕ್ಷಮಿಸಿದ್ದೇನೆ. ಅವರನ್ನು ಶಿಕ್ಷಿಸುವುದು ಮತ್ತು ನ್ಯಾಯಾಲಯಗಳಿಗೆ ಎಳೆದುಕೊಂಡು ಹೋಗುವುದು ಮತ್ತು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ನಾನು ಹೇಳುತ್ತಿರುವುದನ್ನು ಸಮಾಜವೂ ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ತಿಳಿಸಿದ್ದರು.

ಇದರ ಬಳಿಕ ಬಾಲಕಿಯ ತಾಯಿ, ತಮ್ಮ ಮಗಳನ್ನು ಕ್ಷಮಿಸಿಬಿಡಿ ಮಗಳ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಕೊಳಕು ಪದಗಳನ್ನು ಬಳಸಿ ಅವರನ್ನು ನಿಂದಿಸಿದ ಮಗಳನ್ನು ಕ್ಷಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೇಷ್ಠತೆಯನ್ನು ತೋರಿಸಿದ್ದಾರೆ. ಅವಳಿಗೆ ಹೊಸ ಜೀವನ ನೀಡಿದ್ದಾರೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದರೊಂದಿಗೆ ಅವರು ಅಪ್ರಾಪ್ತ ವಯಸ್ಕರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಬೇಕು. 18 ವರ್ಷದೊಳಗಿನ ಮಕ್ಕಳಿಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಅನ್ನು ಬಳಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಅವರು ಅಧ್ಯಯನಕ್ಕೆ ಹೆಚ್ಚು ಗಮನ ನೀಡುವಂತೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದ್ದರು.

ʼʼಪ್ರಧಾನಿ ನರೇಂದ್ರ ಮೋದಿ ಮಗಳಿಗೆ ಜೀವದಾನ ನೀಡಿದ್ದಾರೆʼʼ: ಕೃತಜ್ಞತೆ ಸಲ್ಲಿಸಿದ ಕ್ಷಮೆಯಾಚಿಸಿದ ಬಾಲಕಿಯ ತಾಯಿ

ಇದರ ಬಳಿಕ ಅಪ್ರಾಪ್ತ ಬಾಲಕಿಯ ವಿರುದ್ಧ ಪ್ರಕರಣ ದಾಖಲಿಸದಿರಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. ನೋಯ್ಡಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ನಲ್ಲಿ ಆಕೆಯ ವಯಸ್ಸು 25 ಎಂದು ಗುರುತಿಸಲಾಗಿದೆ. ಆದರೆ ಬಳಿಕ ಆಕೆ ಕ್ಷಮೆಯಾಚಿಸಿ ತಾನು ಕೇವಲ 15 ವರ್ಷದವಳು ಎಂದು ಹೇಳಿದ್ದಾಳೆ. ಅಲ್ಲದೇ ಪ್ರತಿಭಟನಾ ಸ್ಥಳದಲ್ಲಿ ಇತರರ ಪ್ರಭಾವದಿಂದ ಈ ಹೇಳಿಕೆಗಳನ್ನು ನೀಡಿರುವುದಾಗಿ ತಿಳಿಸಿದ್ದಾಳೆ. ಹೀಗಾಗಿ ಅವಳ ವಿರುದ್ದದ ಪ್ರಕರಣ ಕೈಬಿಟ್ಟಿರುವುದಾಗಿ ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.