ಚಂಡೀಗಢದಲ್ಲಿ ಭಾರಿ ಉಗ್ರ ಸಂಚು ವಿಫಲ; 5 ಕೆಜಿ ಸ್ಫೋಟಕದೊಂದಿಗೆ ಮೂವರು ಉಗ್ರರ ಬಂಧನ
BKI Terror Suspects: ಹರಿಯಾಣದ ಚಂಡೀಗಢದಲ್ಲಿ ಸಂಭವಿಸಬಹುದಾಗಿದ್ದ ಉಗ್ರ ದಾಳಿಯ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದು, ಬಿಕೆಐ ಸಂಪರ್ಕ ಹೊಂದಿರುವ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 5 ಕೆಜಿ ಜಿಲೆಟಿನ್ ಸ್ಫೋಟಕ, ಡಿಟೋನೇಟರ್, ರಿಮೋಟ್ ವ್ಯವಸ್ಥೆ, ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ -
ಚಂಡೀಗಢ, ಆ. 24: ಹರಿಯಾಣದ ಚಂಡೀಗಢ ನಗರದೊಳಗೆ ಉಗ್ರ ದಾಳಿ ನಡೆಸುವ ಸಂಚು ರೂಪಿಸಿದ್ದ ಆರೋಪದ ಮೇಲೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (BKI) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮೂವರು ಶಂಕಿತರನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ. ಸೆಕ್ಟರ್-43 ಅಂತಾರಾಜ್ಯ ಬಸ್ ನಿಲ್ದಾಣದ ಸಮೀಪ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ 5 ಕೆಜಿ ಜೆಲಟಿನ್ ಸ್ಟಿಕ್ ಸ್ಫೋಟಕಗಳು, ಡಿಟೋನೇಟರ್, ಪವರ್ ಸೋರ್ಸ್ ಹಾಗೂ ರಿಮೋಟ್ ಮೂಲಕ ಕಾರ್ಯನಿರ್ವಹಿಸುವ ವ್ಯವಸ್ಥೆ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ವಸ್ತುಗಳನ್ನು ಟಿಫಿನ್ ಬಾಕ್ಸ್ ಇರುವ ಬ್ಯಾಗ್‌ನಲ್ಲಿ ಅಡಗಿಸಲಾಗಿತ್ತು.
ಇದಲ್ಲದೆ ಆರೋಪಿಗಳ ಬಳಿ ಒಂದು ಪಿಸ್ತೂಲ್, ಮ್ಯಾಗಜಿನ್ ಹಾಗೂ ಐದು ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಮೂಲಕ ಚಂಡೀಗಢ ನಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಉಗ್ರ ದಾಳಿಯನ್ನು ಪೊಲೀಸರು ತಪ್ಪಿಸಿದ್ದಾರೆ.
ತಮಿಳುನಾಡು ಎಕ್ಸ್‌ಪ್ರೆಸ್‌ನಲ್ಲಿ ಕೊಳೆತ ಮೃತದೇಹದ ಅವಶೇಷ ಪತ್ತೆ: ಒಡಿಶಾಕ್ಕೆ ತೆರಳಿದ ವಿಶೇಷ ಪೊಲೀಸ್ ತಂಡ
ಬಂಧಿತರನ್ನು ಲವ್‌ಪ್ರೀತ್ ಸಿಂಗ್ (19), ಜಶನ್‌ಪ್ರೀತ್ ಸಿಂಗ್ (21) ಹಾಗೂ ಪ್ರಭ್‌ಪ್ರೀತ್ ಸಿಂಗ್ ಆಲಿಯಾಸ್ ಪ್ರಭ್ (19) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಟರ್-36 ಪೊಲೀಸ್ ಠಾಣೆಯಲ್ಲಿ ಸ್ಫೋಟಕ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ವಿದೇಶದಲ್ಲಿ ನೆಲೆಸಿರುವ BKI ಹ್ಯಾಂಡ್ಲರ್ ಸತ್ನಾಮ್ ಅಲಿಯಾಸ್ ಸಟ್ಟಾ ನೌಶೇರಾ ಎಂಬಾತನ ಸೂಚನೆಯ ಮೇರೆಗೆ ಆರೋಪಿಗಳು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಚಂಡೀಗಢದಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಉದ್ದೇಶದಿಂದ ಸ್ಫೋಟಕ ಸಾಧನವನ್ನು ಇರಿಸುವ ಸಂಚು ರೂಪಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಫೋಟಕಗಳನ್ನು ಎಲ್ಲಿಂದ ಪಡೆದುಕೊಂಡರು, ಅವುಗಳನ್ನು ಎಲ್ಲಿ ಇರಿಸಲು ಮುಂದಾಗಿದ್ದರು ಹಾಗೂ ಈ ಸಂಚಿನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.