ನಿಯಂತ್ರಣ ರೇಖೆ ದಾಟಿ ಪೂಂಚ್ ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆ ಬಂಧನ: ಭದ್ರತಾ ಪಡೆಗಳಿಂದ ತೀವ್ರ ವಿಚಾರಣೆ
ಗಡಿ ನಿಯಂತ್ರಣ ರೇಖೆಯನ್ನು (LOC) ಅಕ್ರಮವಾಗಿ ದಾಟಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಗೆ ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಭಾರತೀಯ ಸೇನಾ ಸಿಬ್ಬಂದಿ ಬಂಧಿಸಿದ್ದಾರೆ. ಪೂಂಚ್ ಜಿಲ್ಲೆಯ ಖಾರಿ ಕರ್ಮಾರಾ ವಲಯದ ಮೂಲಕ ಈ ವ್ಯಕ್ತಿ ಭಾರತದ ಭೂಪ್ರದೇಶಕ್ಕೆ ಒಳನುಸುಳಲು ಯತ್ನಿಸುತ್ತಿದ್ದನು
ಸಂಗ್ರಹ ಚಿತ್ರ -
ಶ್ರೀನಗರ: ಗಡಿ ನಿಯಂತ್ರಣ ರೇಖೆಯನ್ನು (LOC) ಅಕ್ರಮವಾಗಿ ದಾಟಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಗೆ ಪ್ರವೇಶಿಸಿದ ಪಾಕಿಸ್ತಾನಿ (Pakistani Citizen) ಪ್ರಜೆಯೊಬ್ಬನನ್ನು ಭಾರತೀಯ ಸೇನಾ (Indian Army) ಸಿಬ್ಬಂದಿ ಬಂಧಿಸಿದ್ದಾರೆ. ಪೂಂಚ್ ಜಿಲ್ಲೆಯ ಖಾರಿ ಕರ್ಮಾರಾ ವಲಯದ ಮೂಲಕ ಈ ವ್ಯಕ್ತಿ ಭಾರತದ ಭೂಪ್ರದೇಶಕ್ಕೆ ಒಳನುಸುಳಲು ಯತ್ನಿಸುತ್ತಿದ್ದನು. ಲಭ್ಯವಿರುವ ಮಾಹಿತಿಯ ಪ್ರಕಾರ, ಖಾರಿ ಕರ್ಮಾರಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೇನಾ ಪಡೆಗಳಿಗೆ ಗಡಿಯಾಚೆಯಿಂದ ಅನುಮಾನಾಸ್ಪದ ಚಲನವಲನ ಕಂಡುಬಂದಿತ್ತು.
ತಕ್ಷಣವೇ ಜಾಗೃತರಾದ ಯೋಧರು ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದರು. ವ್ಯಕ್ತಿಯು ಭಾರತದ ಗಡಿಯೊಳಗೆ ಕಾಲಿಡುತ್ತಿದ್ದಂತೆಯೇ ಕರ್ಮಾರಾ ಗ್ರಾಮದ ರಂಗಾರ್ ನಾಲಾ ಬಳಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಪಾಕಿಸ್ತಾನಿ ಪ್ರಜೆಯನ್ನು ಕಕುಟಾ ನಿವಾಸಿ ಗುಲಾಮ್ ಹುಸೇನ್ ಅವರ ಪುತ್ರ ಮೊಹಮ್ಮದ್ ಜಮೀಲ್ ಎಂದು ಗುರುತಿಸಲಾಗಿದೆ.
ಪ್ರಸ್ತುತ ಭದ್ರತಾ ಸಂಸ್ಥೆಗಳು ಬಂಧಿತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿವೆ. ಆತ ದಾರಿ ತಪ್ಪಿ ಆಕಸ್ಮಿಕವಾಗಿ ಗಡಿ ದಾಟಿದ್ದಾನೆಯೇ ಅಥವಾ ಇದರ ಹಿಂದೆ ಯಾವುದಾದರೂ ವಿಧ್ವಂಸಕ ಕೃತ್ಯದ ಸಂಚು ಅಡಗಿದೆಯೇ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಭದ್ರತಾ ಅಧಿಕಾರಿಗಳು, ಭಾರತೀಯ ಸೇನಾ ಪಡೆಗಳ ಎಚ್ಚರಿಕೆಯನ್ನು ಪರೀಕ್ಷಿಸಲು ಮತ್ತು ಭಯೋತ್ಪಾದಕರನ್ನು ಒಳನುಸುಳಿಸಲು ಇರುವ ಸುರಕ್ಷಿತ ಮಾರ್ಗಗಳನ್ನು ಪತ್ತೆಹಚ್ಚಲು ಪಾಕಿಸ್ತಾನ ಸೇನೆಯು ಸಾಮಾನ್ಯ ನಾಗರಿಕರನ್ನು ಗಡಿಯತ್ತ ಕಳುಹಿಸುವ ತಂತ್ರವನ್ನು ಸಾಮಾನ್ಯವಾಗಿ ಅನುಸರಿಸುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಜಮೀಲ್ ಬಂಧನವಾದ ದಿನದಂದೇ, ಪೂಂಚ್ ಜಿಲ್ಲೆಯ ಸಾವ್ಜಿಯಾನ್ ವಲಯದ ಗಾಗ್ರಿಯನ್ ಗ್ರಾಮದಲ್ಲಿ ಮತ್ತೊಬ್ಬ ಶಂಕಿತ ವ್ಯಕ್ತಿಯನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದು ಸಾವ್ಜಿಯಾನ್ ಪೊಲೀಸ್ ಚೌಕಿಯಲ್ಲಿ ವಿಚಾರಣೆ ನಡೆಸುತ್ತಿವೆ. ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ಬಮಿಯಾಲ್ ವಲಯದ ಪಹಾಡ್ಪುರ ಗಡಿ ಠಾಣೆ ಬಳಿ ಮುಂಜಾನೆ 2 ಗಂಟೆಯ ಸುಮಾರಿಗೆ ಅಂತಾರಾಷ್ಟ್ರೀಯ ಗಡಿ ದಾಟಿ ಸುಮಾರು 120 ಮೀಟರ್ ಒಳಬಂದಿದ್ದ ಪಾಕಿಸ್ತಾನಿ ಒಳನುಸುಳುಕೋರನನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ. ಯೋಧರು ಎಚ್ಚರಿಕೆ ನೀಡಿದರೂ ನಿಲ್ಲದೆ ಮುಂದುವರಿದಿದ್ದರಿಂದ ಗುಂಡು ಹಾರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.