ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

150 ಕೋಟಿ ರುಪಾಯಿ ಆಸ್ತಿಗಾಗಿ ಹರಿಯಿತು ನೆತ್ತರು: ಕುಡಿದ ಮತ್ತಿನಲ್ಲಿ ತಂದೆಯನ್ನೇ ಗುಂಡಿಕ್ಕಿ ಕೊಂದ ಪಾಪಿ ಪುತ್ರ

Crime News: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮೋದಿನಗರದಲ್ಲಿ ₹150 ಕೋಟಿ ಮೌಲ್ಯದ ಆಸ್ತಿ ವಿವಾದ ದುರಂತ ಅಂತ್ಯ ಕಂಡಿದೆ. ಮದ್ಯದ ಅಮಲಿನಲ್ಲಿದ್ದ 32 ವರ್ಷದ ಪುತ್ರ ನಿಖಿಲ್ ತನ್ನ ತಂದೆ ಹರಿಯೋಂ ಚೌಧರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈಗಾಗಲೇ 25 ಬಿಘಾ ಜಮೀನು ಮತ್ತು ಅಂಗಡಿಗಳನ್ನು ಪಡೆದಿದ್ದರೂ ಉಳಿದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

150 ಕೋಟಿ ರುಪಾಯಿ ಆಸ್ತಿಗಾಗಿ ತಂದೆಯನ್ನೇ ಕೊಂದ ಪುತ್ರ

ನಿಖಿಲ್ ಮತ್ತು ಹರಿಯೋಂ ಚೌಧರಿ (ಸಂಗ್ರಹ ಚಿತ್ರ) -

Profile
Sushmitha Jain Jul 16, 2026 10:05 PM

ಲಖನೌ, ಜು. 16: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಲ್ಲಿ ₹150 ಕೋಟಿ ಮೌಲ್ಯದ ಆಸ್ತಿ ವಿವಾದ ಭೀಕರ ಹತ್ಯೆಗೆ ಕಾರಣವಾಗಿದೆ. 32 ವರ್ಷದ ನಿಖಿಲ್ ಎಂಬಾತ ತನ್ನ ತಂದೆ ಹರಿಯೋಂ ಚೌಧರಿ (52) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಲು ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಪೊಲೀಸರ ಪ್ರಕಾರ, ಹರಿಯೋಂ ಚೌಧರಿ ಬುದಾನಾ ಗ್ರಾಮದ ಪ್ರಭಾವಿ ರೈತರಲ್ಲಿ ಒಬ್ಬರಾಗಿದ್ದು, ಸುಮಾರು 75 ಬಿಘಾ ಕೃಷಿ ಭೂಮಿ ಹಾಗೂ ದೆಹಲಿ–ಮೀರತ್‌ ರಸ್ತೆಯಲ್ಲಿರುವ ವಾಣಿಜ್ಯ ಮಾರುಕಟ್ಟೆಯ ಮಾಲಕರಾಗಿದ್ದರು. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹150 ಕೋಟಿ ಎಂದು ಅಂದಾಜಿಸಲಾಗಿದೆ. ಪತ್ನಿ ಅನಿತಾ ಹಾಗೂ ಕಿರಿಯ ಪುತ್ರ ನೀಶು ಅಗಲಿದ್ದಾರೆ.

ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು

ಬುಧವಾರ (ಜುಲೈ 15) ರಾತ್ರಿ ಕುಟುಂಬದವರು ಊಟ ಮುಗಿಸಿದ ಬಳಿಕ ನಿಖಿಲ್ ಮದ್ಯದ ಅಮಲಿನಲ್ಲಿ ಮನೆಗೆ ಬಂದಿದ್ದಾನೆ. ಮದ್ಯಪಾನ ವಿಚಾರವಾಗಿ ತಂದೆ ಗದರಿಸಿದಾಗ, ಮಾತಿನ ಚಕಮಕಿ ಆಸ್ತಿ ಹಂಚಿಕೆ ವಿಚಾರಕ್ಕೆ ತಿರುಗಿದೆ. ಈಗಾಗಲೇ 25 ಬಿಘಾ ಜಮೀನು ಹಾಗೂ ಕೆಲವು ಅಂಗಡಿಗಳನ್ನು ಪಡೆದಿದ್ದ ನಿಖಿಲ್, ಉಳಿದ ಆಸ್ತಿಯನ್ನೂ ತನ್ನ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದಾನೆ. ಆದರೆ, "ನೀನು ಮದ್ಯದ ಚಟದಿಂದ ಆಸ್ತಿಯನ್ನು ಹಾಳು ಮಾಡುತ್ತೀಯ" ಎಂದು ಹರಿಯೋಂ ನಿರಾಕರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ನಿಖಿಲ್ ಪಿಸ್ತೂಲ್ ತೆಗೆದು ತಂದೆಯ ಮೇಲೆ ಸತತವಾಗಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ಮೊದಲ ಗುಂಡು ಮುಖಕ್ಕೆ ತಗುಲಿದ ಬಳಿಕ ನೆಲಕ್ಕುರುಳಿದ ಹರಿಯೋಂ ಅವರ ಮೇಲೆ ಮುಖ, ಎದೆ ಮತ್ತು ಹೊಟ್ಟೆ ಭಾಗಕ್ಕೂ ಗುಂಡು ಹಾರಿಸಲಾಗಿದೆ. ಮೃತದೇಹದಲ್ಲಿ 4ರಿಂದ 6 ಗುಂಡಿನ ಗಾಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯಲ್ಲಿ ನಿಖಿಲ್‌ಗೆ ಮದ್ಯದ ವ್ಯಸನವಿದ್ದು, ಈ ಕಾರಣಕ್ಕೆ ತಂದೆ-ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, 2018ರಲ್ಲಿಯೂ ಕಿರಿಯ ಸಹೋದರ ನೀಶು ಮೇಲೆ ಗುಂಡು ಹಾರಿಸಿದ್ದ ಆರೋಪವೂ ಇದ್ದು, ಆ ಪ್ರಕರಣದ ಬಗ್ಗೆಯೂ ಪೊಲೀಸರು ಮರುಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಯ ಬಳಿಕ ಪಿಸ್ತೂಲ್ ಸಮೇತ ಪರಾರಿಯಾಗಿರುವ ನಿಖಿಲ್‌ನ ಪತ್ತೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.