Robbery Case: ಸೊಸೆ, ಅಪ್ರಾಪ್ತ ಮೊಮ್ಮಗನೊಂದಿಗೆ ಮಗಳ ಮನೆಗೆ ಸ್ಕೆಚ್: 50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದು ವೃದ್ಧ ಎಸ್ಕೇಪ್
Uttar Pradesh Crime: ಬಹ್ರೈಚ್‌ನಲ್ಲಿ ಮಹಿಳೆಗೆ ಮಾದಕ ದ್ರವ್ಯ ನೀಡಿ ಸುಮಾರು 50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದ ಆರೋಪ ಕೇಳಿಬಂದಿದೆ. ಮಹಿಳೆಯ 70 ವರ್ಷದ ತಂದೆ, ಅವರ ಸೊಸೆ ಹಾಗೂ ಅಪ್ರಾಪ್ತ ಮೊಮ್ಮಗ ಈ ಕೃತ್ಯವೆಸಗಿದವರು. ಪ್ರಕರಣ ಸಂಬಂಧ ಸೊಸೆಯನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ಸಾಂಧರ್ಬಿಕ ಚಿತ್ರ -
ಲಖನೌ: 70 ವರ್ಷದ ವೃದ್ಧನೊಬ್ಬ ತನ್ನ ಸೊಸೆ ಮತ್ತು ಆಕೆಯ ಅಪ್ರಾಪ್ತ ಮಗನೊಂದಿಗೆ ಸೇರಿ ತನ್ನ ಮಗಳಿಗೆ ಮಾದಕ ದ್ರವ್ಯ (Robbery Case) ನೀಡಿ ಆಕೆಯ ಮನೆಯಿಂದ 50 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿರುವ (theft) ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಸೊಸೆಯನ್ನು ಬಂಧಿಸಲಾಗಿದ್ದು, ವೃದ್ಧ ಮತ್ತು ಅಪ್ರಾಪ್ತ ಬಾಲಕನನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
ವಾಸ್ತವ್ಯ ಹೂಡಲು ಬಂದು ದರೋಡೆ
ಬಹ್ರೈಚ್ ಜಿಲ್ಲೆಯ ದರ್ಗಾ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರವೀಂದ್ರ ಖೇತಾನ್ ತನ್ನ ಸೊಸೆ ಶಿವಾನಿ ಖೇತಾನ್ ಮತ್ತು ಆಕೆಯ 16 ವರ್ಷದ ಮಗನೊಂದಿಗೆ ತನ್ನ ಮಗಳು ಸೋನಿ ಬನ್ಸಾಲ್ ಮನೆಯಲ್ಲಿ ಉಳಿದುಕೊಳ್ಳಲು ಬಂದಿದ್ದ. ಸ್ಥಳೀಯ ಉದ್ಯಮಿ ಮನೋಜ್ ತುಳಸಿಯನ್ ಎಂಬುವವರನ್ನು ವಿವಾಹವಾಗಿರುವ ಸೋನಿ, ಅದೇ ಪೊಲೀಸ್ ಠಾಣೆ ವ್ಯಾಪ್ತಿಯ ಡಿಎಸ್ಎಲ್ ಗ್ರೀನ್ ಸಿಟಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: Murder Case: ಅಕ್ರಮ ಸಂಬಂಧದ ಸಂಶಯದಲ್ಲಿ ಯುವಕನ ಹೊಡೆದು ಕೊಲೆ
ನವೆಂಬರ್ 18ರಂದು ತನ್ನ ಮಗನೊಂದಿಗೆ ಅಂಗಡಿಯಲ್ಲಿದ್ದ ಉದ್ಯಮಿ ಮನೆಗೆ ಹಿಂದಿರುಗಿದಾಗ ತನ್ನ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿರುವುದಾಗಿ ತುಳಸಿಯನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಬಹ್ರೈಚ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಆಕೆಯ ಸ್ಥಿತಿ ಸುಧಾರಿಸದಿದ್ದಾಗ, ಲಕ್ನೋದ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.
ತನ್ನ ಪತ್ನಿ ಲಕ್ನೋಗೆ ಸ್ಥಳಾಂತರಗೊಂಡ ಕೂಡಲೇ, ತನ್ನ ಮಾವ ಅವರ ಸೊಸೆ ಯಾರಿಗೂ ತಿಳಿಸದೆ ಮನೆಯಿಂದ ಹೊರಟುಹೋದರು ಎಂದು ತುಳಸಿಯಾನ್ ದೂರಿದ್ದಾರೆ. ನವೆಂಬರ್ 21 ರಂದು ಕುಟುಂಬವು ಬಹ್ರೈಚ್‌ಗೆ ಹಿಂತಿರುಗಿದಾಗ, ಅವರ ಲಾಕರ್‌ನಿಂದ ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳು ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ.
ದೂರಿನ ಆಧಾರದ ಮೇಲೆ ಮೂವರು ಆರೋಪಿಗಳ ವಿರುದ್ಧ ನವೆಂಬರ್ 22ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ ಹಲವಾರು ಪೊಲೀಸ್ ತಂಡಗಳು ಮೊಬೈಲ್ ಫೋನ್ ವಿವರಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದವು. ಸೋಮವಾರ, ಪೊಲೀಸರು ಗುಲ್ಲಬೀರ್ ದೇವಸ್ಥಾನದ ಬಳಿ ಶಿವಾನಿ ಖೇತಾನ್ ಅವರನ್ನು ಬಂಧಿಸಿ, ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಎಸ್ಪಿ ಹೇಳಿದರು. ಆದರೆ, ವೃದ್ಧ ಮತ್ತು ಅಪ್ರಾಪ್ತ ಬಾಲಕ ತಲೆಮರೆಸಿಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸೊಸೆ ಶಿವಾನಿ ದುಬಾರಿ ಆಭರಣಗಳಿಗಾಗಿ ಕಳ್ಳತನಕ್ಕೆ ಯೋಜಿಸಿದ್ದಳು. ಆಕೆ ತನ್ನ ಅತ್ತಿಗೆಯ ಚಹಾದಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಕುಡಿಸಿದ್ದರಿಂದ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಈ ವೇಳೆ ಆರೋಪಿ ಶಿವಾನಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿವಿಧ ಅಂಗಡಿಗಳಲ್ಲಿ ಕದ್ದಿರುವ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು. ಆದರೆ ಆಭರಣ ವ್ಯಾಪಾರಿಗಳು ಗುರುತಿನ ದಾಖಲೆಗಳನ್ನು ಕೇಳಿದ್ದರಿಂದ ಮಾರಾಟ ಮಾಡುವಲ್ಲಿ ವಿಫಲರಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ, ಶಿವಾನಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಶುರುವಾಗಿದೆ.