ವಿದ್ಯುತ್ ಅಪಘಾತ: ಪಂಜಾಬ್ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಸಾವು
ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬಳು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಪಂಜಾಬ್ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದ ಹರಿಯಾಣ ಮೂಲದ ಜ್ಯೋತಿ ಅವರು ಹಾಸ್ಟೆಲ್‌ನಿಂದ ವಿವಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣವಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸಂಗ್ರಹ ಚಿತ್ರ -
ಪಂಜಾಬ್: ವಿದ್ಯುತ್ ಅಪಘಾತದಿಂದ (Electrical accident) ಹಾಸ್ಟೆಲ್‌ನಿಂದ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ (student dead) ಘಟನೆ ಪಂಜಾಬ್ (Punjab) ನಲ್ಲಿ ನಡೆದಿದೆ. ಚಂಡೀಗಢದಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದ (Panjab University) ವಿದ್ಯಾರ್ಥಿನಿ ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ್ದಾಳೆ. ಪಂಜಾಬ್ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ (PhD student) ನಡೆಸುತ್ತಿದ್ದ ಹರಿಯಾಣ ಮೂಲದ ಜ್ಯೋತಿ (28) ಮೃತ ವಿದ್ಯಾರ್ಥಿನಿ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಹರಿಯಾಣದ ರೇವಾರಿಯ ನಿವಾಸಿಯಾಗಿರುವ ಜ್ಯೋತಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದರು. ಅವರು ಹಾಸ್ಟೆಲ್‌ನಿಂದ ತಮ್ಮ ವಿಭಾಗಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಒಂದು ಕೋಟಿ ರುಪಾಯಿ ಬಹುಮಾನವಿದ್ದ, ದೇಶದ ಕೊನೆಯ ಸಕ್ರಿಯ ಮಾವೋವಾದಿ ಮಿಸಿರ್ ಬೆಸ್ರ ಅರೆಸ್ಟ್
ಭಾರಿ ಮಳೆಯಿಂದಾಗಿ ಈ ಪ್ರದೇಶದಲ್ಲಿ ನೀರು ತುಂಬಿತ್ತು. ಹೀಗಾಗಿ ಜ್ಯೋತಿ ಡಾಂಬರು ಹಾಕದ ಕಚ್ಚಾ ರಸ್ತೆಯಲ್ಲಿ ಕಾಲೇಜ್ ಕ್ಯಾಂಪಸ್ ಗೆ ಹೊರಟಿದ್ದರು. ಈ ದಾರಿಯಲ್ಲಿ ಹತ್ತಿರದಲ್ಲೇ ಹಾದು ಹೋಗಿದ್ದ ವಿದ್ಯುತ್ ಜಂಕ್ಷನ್ ಬಾಕ್ಸ್‌ನಿಂದ ವಿದ್ಯುತ್ ಪ್ರವಾಹ ಉಂಟಾಗಿ ಜ್ಯೋತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜ್ಯೋತಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ನೂರಾರು ವಿದ್ಯಾರ್ಥಿಗಳು ಉಪಕುಲಪತಿ ಪ್ರೊ. ರೇಣು ವಿಗ್ ಅವರ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದರು. ಕ್ಯಾಂಪಸ್ ವ್ಯಾಪ್ತಿಯಲ್ಲಿ ವಿದ್ಯುತ್ ನಿರ್ವಹಣೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮತ್ತು ಜ್ಯೋತಿ ಅವರ ಕುಟುಂಬಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜ್ಯೋತಿ ಅವರ ಕುಟುಂಬ ಸದಸ್ಯರೊಂದಿಗೆ ಮಂಗಳವಾರ ತಡರಾತ್ರಿ ಸಭೆ ನಡೆಸಿದ ಪಂಜಾಬ್ ವಿಶ್ವವಿದ್ಯಾಲಯದ ಅಧಿಕಾರಿಗಳು 16 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಮತ್ತು ಅವರ ಸಹೋದರನಿಗೆ ಉದ್ಯೋಗವನ್ನು ಘೋಷಿಸಿದರು. ಪಂಜಾಬ್ ಸರ್ಕಾರದ ನಿಯಮಗಳಡಿಯಲ್ಲಿ ಪಿಯುಸಿ ಪಾಸಾಗಿರುವ ಮತ್ತು ಐಟಿಐ (ಎಲೆಕ್ಟ್ರಿಕಲ್) ಪದವಿ ಪಡೆದಿರುವ ಜ್ಯೋತಿ ಅವರ ಸಹೋದರನಿಗೆ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಷಿಯನ್ ಆಗಿ ಉದ್ಯೋಗ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ್ಯೋತಿ ಅವರ ತಂದೆ ರೈತರಾಗಿದ್ದು, ಹರಿಯಾಣದ ಖಾಸಗಿ ಶಾಲೆಯಲ್ಲಿ ಚಾಲಕರಾಗಿದ್ದಾರೆ. ಅವರ ತಾಯಿ ಗೃಹಿಣಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಾರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಕ್ಲೀನ್ ಚಿಟ್
ಘಟನೆಯ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಚಂಡೀಗಢ ಸಂಸದ ಮನೀಶ್ ತಿವಾರಿ, ಜ್ಯೋತಿ ಅವರ ಸಾವಿಗೆ ಚಂಡೀಗಢ ಆಡಳಿತ ಮತ್ತು ಪಂಜಾಬ್ ವಿಶ್ವವಿದ್ಯಾಲಯದ ಅಧಿಕಾರಿಗಳು ಜವಾಬ್ದಾರರಾಗಿದ್ದಾರೆ. ಈ ಕುರಿತಾಗಿ ಅವರು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಅಳವಡಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.