ಮಧ್ಯಪ್ರದೇಶದಲ್ಲಿ ಭೀಕರ ಬಸ್ ಅಪಘಾತ: ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರ ಸಾವು
Madhya Pradesh Bus Accident: ಮಧ್ಯಪ್ರದೇಶದ ರಾಜ್‌ಗಢದ ಬಿಯೋರಾದ ಭೋಪಾಲ್ ಬೈಪಾಸ್ ರಸ್ತೆಯಲ್ಲಿ ಅಪಘಾತ ನಡೆದಿದೆ. ವೇಗವಾಗಿ ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
-
ರಾಜ್‌ಗಢ (ಮಧ್ಯಪ್ರದೇಶ): ಮಧ್ಯಪ್ರದೇಶದ ರಾಜ್‌ಗಢದಲ್ಲಿ ಶುಕ್ರವಾರ ಮುಂಜಾನೆ ಭೀಕರ ಅಪಘಾತ (Madhya Pradesh Bus Accident) ಸಂಭವಿಸಿದ್ದು, ಆರೋಪಿಯ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಆಗ್ನೇಯ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್ ರವಿ ಕೆ.ಬಿ. ಮೃತಪಟ್ಟವರು. ಅಲ್ಲದೇ, ಅವರ ಜೊತೆಗಿದ್ದ ಪೊಲೀಸ್ ಸಿಬ್ಬಂದಿಯಾದ ವಿಶ್ವನಾಥ್ ಮತ್ತು ರಮೇಶ್ ಗಾಯಗೊಂಡಿದ್ದಾರೆ.
ವೇಗವಾಗಿ ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ರಾಜ್‌ಗಢದ ಬಿಯೋರಾದ ಭೋಪಾಲ್ ಬೈಪಾಸ್ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೇಲಿನ ಡೆಕ್ನ ಸೀಟ್ಗಳಲ್ಲಿ ಮಲಗಿದ್ದ ಪ್ರಯಾಣಿಕರು ಕಿಟಕಿಗಳಿಂದ ಹೊರಗೆ ಎಸೆಯಲ್ಪಟ್ಟು ಸೇತುವೆಯಿಂದ ಕೆಳಗೆ ಬಿದ್ದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ಕಾನ್ಪುರದಿಂದ ಇಂದೋರ್‌ಗೆ ಪ್ರಯಾಣಿಸುತ್ತಿತ್ತು. ಬಿಯೋರಾ ಬಳಿಯ ಸೇತುವೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಈ ಭೀಕರ ಅಪಘಾತ ಸಂಭವಿಸಿದೆ.
ಗಾಯಗೊಂಡ 11 ಪ್ರಯಾಣಿಕರನ್ನು ಮಧ್ಯಪ್ರದೇಶದ ಬಿಯೋರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಪ್ರಯಾಣಿಕರನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.