Suspiciousgroup in Gauribidanur: ಅನುಮಾನಾಸ್ಪದ ಗುಂಪು; ಪೊಲೀಸರಿಂದ ವಿಚಾರಣೆ: ಗುರುತಿನ ದಾಖಲೆಗಳ ನೈಜತೆ ಪರಿಶೀಲನೆಗೆ ಸಾರ್ವಜನಿಕರ ಆಗ್ರಹ
ಮಹಿಳೆಯರು, ವೃದ್ಧರು, ಮಕ್ಕಳು ಹಾಗೂ ಯುವಕರನ್ನು ಒಳಗೊಂಡಿದ್ದ ಗುಂಪಿನ ಚಲನವಲನ ದ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕೆಲ ಯುವಕರು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಗುಂಪಿನಲ್ಲಿದ್ದ ಮಹಿಳೆಯರು ಮತ್ತು ವೃದ್ಧರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು
-
ಗೌರಿಬಿದನೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಮಧ್ಯಾಹ್ನ 30ರಿಂದ 40 ಮಂದಿ ಒಳಗೊಂಡ ಗುಂಪೊಂದು ಕಾಣಿಸಿಕೊಂಡಿದ್ದು, ಅವರ ಗುರುತು ಮತ್ತು ಆಗಮನದ ಉದ್ದೇಶದ ಕುರಿತು ಸಾರ್ವಜನಿಕರಲ್ಲಿ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಕೆಲವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
ಮಹಿಳೆಯರು, ವೃದ್ಧರು, ಮಕ್ಕಳು ಹಾಗೂ ಯುವಕರನ್ನು ಒಳಗೊಂಡಿದ್ದ ಗುಂಪಿನ ಚಲನವಲನ ದ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕೆಲ ಯುವಕರು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಗುಂಪಿನಲ್ಲಿದ್ದ ಮಹಿಳೆಯರು ಮತ್ತು ವೃದ್ಧರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಅವರ ಬಳಿ ಹೊಸದಾಗಿ ಮುದ್ರಿಸಿರುವ ಆಧಾರ್ ಕಾರ್ಡ್‌ಗಳ ಪ್ರತಿಗಳು ಇದ್ದವು ಎನ್ನಲಾಗಿದ್ದು, ದಾಖಲೆಗಳ ನೈಜತೆ ಹಾಗೂ ಅವರು ಯಾವ ಪ್ರದೇಶದವರು ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ: Gauribidanur News: ಶ್ರೀ ಮಹೇಶ್ವರಮ್ಮ ದೇವಿಯ ವಾರ್ಷಿಕೋತ್ಸವ ಯಶಸ್ವಿ
ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಮಾಧ್ಯಮದವರನ್ನು ಠಾಣೆಯೊಳಗೆ ಪ್ರವೇಶಿಸದಂತೆ ಠಾಣಾಧಿ ಕಾರಿಯೊಬ್ಬರು ತಡೆದು ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸ್ ಉಪನಿರೀಕ್ಷಕಿ ವರಲಕ್ಷ್ಮಿ ಅವರು ಠಾಣೆಗೆ ಆಗಮಿಸಿ ವಿಚಾರಣೆ ನಡೆಸಿದರು.
ಸುಮಾರು 30 ನಿಮಿಷಗಳ ವಿಚಾರಣೆ ಬಳಿಕ, ಠಾಣೆ ಮುಂಭಾಗ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಅವರನ್ನು ಕಳುಹಿಸಲಾಯಿತು. ಪೊಲೀಸರು ಬಸ್ ಬಳಿ ಹಾಜರಿದ್ದು, ವಿಚಾರಣೆಗೊಳಗಾದವರನ್ನು ಒಬ್ಬೊಬ್ಬರಾಗಿ ಬಸ್ಸಿಗೆ ಕಳುಹಿಸಿದರು.
ಈ ನಡುವೆ, ಗುಂಪಿನವರು ಯಾರು, ಎಲ್ಲಿಂದ ಬಂದಿದ್ದಾರೆ, ಅವರ ಗುರುತಿನ ದಾಖಲೆಗಳು ನೈಜವೇ ಮತ್ತು ಅವರ ಪ್ರಯಾಣದ ಉದ್ದೇಶವೇನು ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ. ಇತ್ತೀಚಿನ ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಕೆಲವರು ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದರೂ, ಈ ಗುಂಪಿಗೂ ಎಸ್‌ಐಆರ್‌ಗೂ ಸಂಬಂಧವಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಆದ್ದರಿಂದ ಪೊಲೀಸರು ಗುಂಪಿನ ಗುರುತು, ಪ್ರಯಾಣದ ಉದ್ದೇಶ ಹಾಗೂ ದಾಖಲೆಗಳ ನೈಜತೆ ಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ವಾಸ್ತವಾಂಶವನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಉಂಟಾಗಿರುವ ಅನುಮಾನಗಳಿಗೆ ತೆರೆ ಎಳೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿ ದ್ದಾರೆ.