B Nagendra Resignation: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ.ನಾಗೇಂದ್ರ; ನನ್ನ ವಿರುದ್ಧ ಕುತಂತ್ರ ನಡೆದಿದೆ ಎಂದು ಕಣ್ಣೀರು
valmiki corporation scam: ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಸ್ವತಂತ್ರವಾಗಿ ಬದುಕಬಾರದು ಎಂಬುವುದು ಬಿಜೆಪಿಯವರ ಉದ್ದೇಶ. ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಕುಮಾರಸ್ವಾಮಿಗೊಂದು ನ್ಯಾಯ, ನನಗೊಂದು ನ್ಯಾಯಾನಾ? ಕುಮಾರಸ್ವಾಮಿ ವಿರುದ್ಧ ತನಿಖೆಗೆ ಯಾಕೆ ರಾಜ್ಯಪಾಲರು ಅನುಮತಿ ನೀಡಿಲ್ಲ? ಎಂದು ಸಚಿವ ಬಿ.ನಾಗೇಂದ್ರ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಚಿವ ಬಿ.ನಾಗೇಂದ್ರ ಕಣ್ಣೀರು. -
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ವರಿಷ್ಠರಿಗೆ ಮುಜುಗರ ಆಗಬಾರದು ಎಂದು ನನ್ನ ಸ್ವ ಇಚ್ಛೆಯಿಂದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಶಾಸಕ ಬಿ.ನಾಗೇಂದ್ರ (B Nagendra Resignation) ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ರಾಜೀನಾಮೆ ಘೋಷಿಸಿದ ಅವರು ಭಾವುಕರಾಗಿ ಕಣ್ಣೀರಿಟ್ಟರು. ಇದೇ ವೇಳೆ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ನನಗೆ ನೈತಿಕವಾಗಿ ಬೆಂಬಲಿಸಿದವರಿಗೆ ಧನ್ಯವಾದ ಹೇಳುವೆ. ವಿಪಕ್ಷದವರು ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆಧಾರ ಇಲ್ಲದ ವಿಷಯ ಇಟ್ಟುಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಮನುಸ್ಮೃತಿ ಜಾರಿಗೆ ಬಿಜೆಪಿ ಪ್ರಯತ್ನ
ರಾಜ್ಯದಲ್ಲಿ ವಿರೋಧ ಪಕ್ಷದವರು ಈಗಲೂ ಮನುಸ್ಮೃತಿಯನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಪುರಾಣ ಅಥವಾ ವೇದಕಾಲವಲ್ಲ, ಇದು ಸಂವಿಧಾನ ಯುಗ, ಅಂಬೇಡ್ಕರ್ ಕಾಲ. ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಸ್ವತಂತ್ರವಾಗಿ ಬದುಕಬಾರದು ಎಂಬುವುದು ಬಿಜೆಪಿಯವರ ಉದ್ದೇಶ. ಆದರೆ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತೆ ಎಂಬ ನಂಬಿಕೆ ಇದೆ.
ವಿಪಕ್ಷದವರು ಸದನವನ್ನು ಹಾಳು ಮಾಡಿದರು. ಸದನದಲ್ಲಿ ಚರ್ಚೆಗೆ ಬನ್ನಿ ಎಂದು ಮನವಿ ಮಾಡಿದ್ದೆವು. ಆದರೆ, ವಿಪಕ್ಷಗಳು ಕೇಳುವಂತಹ ಪರಿಸ್ಥಿತಿಯಲ್ಲಿ ಇರಲಿಲ್ಲ. ಬರ, ಕಾವೇರಿ ವಿವಾದ, ಕೆಪಿಎಸ್‌ಸಿ ಹಗರಣ ಸೇರಿ ವಿವಿಧ ವಿಷಯಗಳ ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ವಿರೋಧಪಕ್ಷಗಳು ಚರ್ಚೆಗೆ ಅವಕಾಶವೇ ನೀಡಲಿಲ್ಲ ಎಂದು ಆರೋಪಿಸಿದರು.
ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ
ನಮ್ಮ ರಾಜ್ಯ ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ. ಆದರೆ, ಸಿಬಿಐಗೆ ಪ್ರಕರಣ ನೀಡಿ ನನ್ನನ್ನು ಜೈಲಿಗೆ ಹಾಕಿಸಿದ್ದರು. ಎರಡನೇ ಚಾರ್ಜ್‌ಶೀಟ್‌ನಲ್ಲಿ ತರಾತುರಿಯಲ್ಲಿ ನನ್ನ ಹೆಸರು ಸೇರಿಸಲಾಗಿದೆ. ನ್ಯಾಯಾಲಯ ಹಾಗೂ ಸಂವಿಧಾನದ ಬಗ್ಗೆ ಗೌರವವಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಈ ಹಿಂದೆ ರಾಜೀನಾಮೆ ನೀಡಿದ್ದೆ. ಈ ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ ಎಂದು ಹೇಳಿದರು.
ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಕುಮಾರಸ್ವಾಮಿಗೊಂದು ನ್ಯಾಯ, ನನಗೊಂದು ನ್ಯಾಯಾನಾ? ಕುಮಾರಸ್ವಾಮಿ ವಿರುದ್ಧ ತನಿಖೆಗೆ ಯಾಕೆ ರಾಜ್ಯಪಾಲರು ಅನುಮತಿ ನೀಡಿಲ್ಲ? ನಾನು ದಲಿತ, ಆದಿವಾಸಿ ಎಂದು ಹೇಳಿ ಕುತಂತ್ರ ನಡೆಸಲಾಗಿದೆ. ಚುನಾವಣೆಗಳಲ್ಲಿ ನಾವು ಇದೇ ವಿಚಾರಗಳನ್ನು ಇಟ್ಟುಕೊಂಡು ಹೋಗುತ್ತೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದಕ್ಕೆ ನನಗೆ ಈ ಶಿಕ್ಷೆ ಯಾಕೆ ಎಂದು ಭಾವುಕರಾದರು.
ಒಬ್ಬ ನಿರಪರಾಧಿ ಬಗ್ಗೆ ಒಂದು ಸುಳ್ಳನ್ನು ಹೇಳಿ ಹೇಳಿ ನಿಜ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ನಾನು ತಪ್ಪು ಮಾಡಿಲ್ಲ ಸಿಎಂ ಕೂಡ ಹೇಳಿದ್ದಾರೆ, ಆದರೆ ನಮ್ಮ ವರಿಷ್ಠರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡುತ್ತೇನೆ.
ತಾಕತ್ ಇದ್ದರೆ ಜನತಾ ನ್ಯಾಯಾಲಯಕ್ಕೆ ಬನ್ನಿ; ರೆಡ್ಡಿ, ರಾಮುಲುಗೆ ಸವಾಲು
ಕೋಮುವಾದಿ ಪಕ್ಷವನ್ನು ನಾನು ಎದುರಿಸುವೆ, ನಾನು ಪುರಾಣ ಕಾಲದ ಶಂಬೂಕ ಅಲ್ಲ, ಲೋಕ ಕಲ್ಯಾಣಕ್ಕೆ ತಪಸ್ಸು ಮಾಡಿದ ಶಂಬೂಕನನ್ನು ಕೊಲ್ಲಲಾಯಿತು. ನಾನು ಶಂಭೂಕನಾಗಲು ಬಯಸಲ್ಲ. ಸಚಿವ ಸ್ಥಾನಕ್ಕೆ ಮಾತ್ರವಲ್ಲ, ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ, ಬನ್ನಿ ಸ್ವಾಮಿ ನಿಮಗೆ ತಾಕತ್ ಇದ್ದರೆ, ಜನತಾ ನ್ಯಾಯಾಲಯಕ್ಕೆ ಹೋಗೋಣ. ನನ್ನ ತಪ್ಪಿದ್ದರೆ ಜನರು ಸೋಲಿಸುತ್ತಾರೆ, ಇಲ್ಲದಿದ್ದರೆ ಗೆಲ್ಲಿಸುತ್ತಾರೆ ಎಂದು ಬಳ್ಳಾರಿ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸವಾಲು ಹಾಕಿದರು.