Bengaluru News: ಯುವತಿಗೆ 'ನಿನ್ ರೇಟ್ ಎಷ್ಟುʼ ಎಂದು ಕೇಳಿ ಕಿರುಕುಳ ಕೊಟ್ಟಿದ್ದ ಕಾಮುಕ ಅರೆಸ್ಟ್
ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ, ವ್ಯಕ್ತಿಯೊಬ್ಬ "ರೇಟ್ ಎಷ್ಟು?" ಎಂದು ಕೇಳಿ ಕಿರುಕುಳ ನೀಡಿದ್ದ. ವ್ಯಕ್ತಿಯ ಈ ವಿಕೃತ ವರ್ತನೆಯಿಂದ ಆಕ್ರೋಶಗೊಂಡಿದ್ದ ಯುವತಿ, ತಕ್ಷಣ ತನ್ನ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿದ್ದಳು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
-
ಬೆಂಗಳೂರು: ರಸ್ತೆಬದಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳ ಜತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ (Bengaluru woman harassed) ನೀಡಿದ ಘಟನೆ ರಾಮಮೂರ್ತಿನಗರದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ರಾಮಮೂರ್ತಿನಗರದ ರಸ್ತೆ ಬದಿಯಲ್ಲಿ ಯುವತಿಯೊಬ್ಬಳು ಕ್ಯಾಬ್‌ಗಾಗಿ ಕಾಯುತ್ತಾ ನಿಂತಿದ್ದಾಗ, ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಗೆ ಅಸಭ್ಯವಾಗಿ "ರೇಟ್ ಎಷ್ಟು?" ಎಂದು ಕೇಳಿ ಕಿರುಕುಳ ನೀಡಿದ್ದ. ವ್ಯಕ್ತಿಯ ಈ ವಿಕೃತ ವರ್ತನೆಯಿಂದ ಆಕ್ರೋಶಗೊಂಡಿದ್ದ ಯುವತಿ, ತಕ್ಷಣ ತನ್ನ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿದ್ದಳು. ಅಲ್ಲದೆ, ಪೊಲೀಸರಿಗೆ ದೂರು ನೀಡುವುದಾಗಿಯೂ ಎಚ್ಚರಿಸಿದ್ದಾಳೆ. ಇದರಿಂದ ಗಲಿಬಿಲಿಗೊಂಡ ಆರೋಪಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ಪರಾರಿಯಾಗಿದ್ದ.
ಇನ್ನು ಧೈರ್ಯಗೆಡದ ಯುವತಿ ತಾನು ಅನುಭವಿಸಿದ ಕಿರುಕುಳದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ವಿಕೃತ ಕಾಮುಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಆಗ್ರಹಿಸಿದ್ದಳು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
Woman Alleges Harassment While Waiting for Cab in Bengaluru, Seeks Police Action
— Karnataka Portfolio (@karnatakaportf) July 27, 2026
A woman has shared a video on social media alleging that she was harassed while waiting for her cab in Bengaluru. She claimed the accused, who was riding a vehicle bearing registration number KA03… pic.twitter.com/juc7uYhidl
ಎಫ್‌ಐಆರ್ ದಾಖಲು, ಆರೋಪಿ ಬಂಧನ:
ವಿಡಿಯೊ ವೈರಲ್ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಮಮೂರ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.
ತನಿಖೆ ತೀವ್ರಗೊಳಿಸಿದ ಪೊಲೀಸರು 42 ವರ್ಷದ ವಿಜಯ್ ರಾಘವ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾಮಮೂರ್ತಿನಗರದ ಎನ್‌ಆರ್‌ಐ ಲೇಔಟ್‌ನ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.