ಪಂಜಾಬ್ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಹಿಂದೆ ಪಾಕಿಸ್ತಾನಿ ಸಂಚುಕೋರರ ಕೈವಾಡ
ಪಂಜಾಬ್ ಪೊಲೀಸ್ ಸಿಬ್ಬಂದಿ ಮೇಲೆ ಅಕ್ಟೋಬರ್ 4 ರಂದು ದಾಳಿ ನಡೆಸಿದ ಗ್ಯಾಂಗ್‌ನ ಹಿಂದೆ ಪಾಕಿಸ್ತಾನಿ ಸಂಚುಕೋರರ ಕೈವಾಡವಿರುವುದು ಬಯಲಾಗಿದೆ. ದಾಳಿ ನಡೆಸಿದ ಗ್ಯಾಂಗ್ ನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗೋಯಿಂದ್ವಾಲ್ ಸಾಹಿಬ್ ಕೇಂದ್ರ ಕಾರಾಗೃಹದಲ್ಲಿರುವ ವ್ಯಕ್ತಿಯೊಬ್ಬ ಈ ಗ್ಯಾಂಗ್ ಅನ್ನು ಸಂಘಟಿಸಿದ್ದಾನೆ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಅಮೃತಸರ: ಪಂಜಾಬ್ ಪೊಲೀಸ್ (punjab police) ಸಿಬ್ಬಂದಿ ಮೇಲೆ ಅಮೃತಸರ ಜಿಲ್ಲೆಯಲ್ಲಿ (Amritsar district) ದಾಳಿ ನಡೆಸಿದ್ದ ಗ್ಯಾಂಗ್ ಒಂದನ್ನು ಸೋಮವಾರ ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಕಾರಾಗೃಹದಲ್ಲಿರುವ ವ್ಯಕ್ತಿಯೊಬ್ಬ ಪಾಕಿಸ್ತಾನದ (Pakistan) ಐಎಸ್‌ಐ ಸಂಚುಕೋರರೊಂದಿಗೆ (Pakistani ISI handler) ಸೇರಿಕೊಂಡು ಸಂಘಟನೆಯನ್ನು ರೂಪಿಸಿ ಪಂಜಾಬ್ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಕಳೆದ ಅಕ್ಟೋಬರ್ 4 ರಂದು ದಾಳಿ ನಡೆಸಿದ್ದನ್ನು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರನ್ನು ಬಂಧಿಸಲಾಗಿದ್ದು, ಇನ್ನೋರ್ವ ತಲೆ ಮರೆಸಿಕೊಂಡಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಅಮೃತಸರ ಗ್ರಾಮಾಂತರ ಠಾಣೆ ಪೊಲೀಸರು, ಗೋಯಿಂದ್ವಾಲ್ ಸಾಹಿಬ್ ಕೇಂದ್ರ ಕಾರಾಗೃಹದಲ್ಲಿರುವ ವ್ಯಕ್ತಿಯೊಬ್ಬ ಗ್ಯಾಂಗ್ ವೊಂದನ್ನು ಸಂಘಟಿಸಿದ್ದಾನೆ. ಅಲ್ಲದೇ ಮೊಬೈಲ್ ಫೋನ್ ಮೂಲಕ ಪಾಕಿಸ್ತಾನದ ಐಎಸ್‌ಐ ಸಂಚುಕೋರರೊಂದಿಗೆ ಮತ್ತೆ ಸಂಪರ್ಕ ಸಾಧಿಸಿದ್ದನು ಎಂದು ತಿಳಿಸಿದ್ದಾರೆ.
ಭಾರತೀಯ ಯೋಧರಿಗೆ ಗುಣಮಟ್ಟದ ʼಭಾರತ್ ರೈಸ್ʼ; ಸೇನೆಗೆ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮೀಸಲು
ಪಾಕಿಸ್ತಾನಿ ಸಂಚುಕೋರರ ಸೂಚನೆ ಮೇರೆಗೆ ಅಮೃತಸರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಳೆದ ಅಕ್ಟೋಬರ್ ೪ರಂದು ದಾಳಿ ನಡೆಸಲಾಗಿತ್ತು. ಈ ದಾಳಿಗೆ ಸಂಬಂಧಿಸಿದ ಗ್ಯಾಂಗ್ ಒಂದನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದಾಗ ಒಬ್ಬ ಆರೋಪಿಗೆ ಗುಂಡೇಟು ಹೊಡೆದು ಸೆರೆ ಹಿಡಿಯಲಾಯಿತು ಎಂದರು.
ಆತ ನೀಡಿರುವ ಮಾಹಿತಿ ಪ್ರಕಾರ ಗೋಯಿಂದ್ವಾಲ್ ಸಾಹಿಬ್ ಕೇಂದ್ರ ಕಾರಾಗೃಹದಲ್ಲಿರುವ ವ್ಯಕ್ತಿಯೊಬ್ಬ ಈ ಗ್ಯಾಂಗ್ ಅನ್ನು ಸಂಘಟಿಸಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಲು ಮತ್ತು ಪಂಜಾಬ್‌ನಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನಿ ಸಂಚುಕೋರರು 10 ಲಕ್ಷ ರೂಪಾಯಿಗಳ ಆಮಿಷವೊಡ್ಡಿದ್ದರು ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 4 ರಂದು ಅಮೃತಸರದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಸುಖ್‌ಚೈನ್ ಸಿಂಗ್ ಅವರು ತಮ್ಮ ಮೋಟಾರ್‌ಸೈಕಲ್‌ನಲ್ಲಿ ಸಂಜೆ ಸುಮಾರು 7.15 ರ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಗುಂಡೇಟಿಗೆ ಒಳಗಾಗಿದ್ದರು. ಅವರ ಜಗದೇವ್ ಖುರ್ದ್ ಗ್ರಾಮದಲ್ಲಿರುವ ತಮ್ಮ ನಿವಾಸದಿಂದ ಸುಮಾರು 200 ಮೀಟರ್ ದೂರದಲ್ಲಿದ್ದಾಗ ಈ ಘಟನೆ ನಡೆದಿತ್ತು.
ಬೈಕ್ ನಲ್ಲಿ ಬಂದ ಮೂವರು ಯುವಕರು ಅವರ ಹತ್ತಿರ ಬಂದು ಗುಂಡು ಹಾರಿಸಿದ್ದರು. ಗುಂಡು ಅವರ ಎಡಗೈಗೆ ತಗುಲಿದ್ದು, ತಕ್ಷಣವೇ ಅವರನ್ನು ಅಜ್ನಾಲಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ದಾಳಿಯ ಹೊಣೆಗಾರಿಕೆಯನ್ನು ಬಳಿಕ 'ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್' ಸಂಘಟನೆಯು ಹೊತ್ತುಕೊಂಡಿದೆ. ಜೈಲು ಕೈದಿಯು ಪಾಕಿಸ್ತಾನಿ ಸಂಚಾಲಕರೊಂದಿಗೆ ಸಂಪರ್ಕ ಸಾಧಿಸಿರುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಅಕ್ಟೋಬರ್ 5 ರಂದು ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109, 61(2) ಮತ್ತು 3(5) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಚಕ್ ಡೋಗ್ರಾ ಗ್ರಾಮದ ನಿವಾಸಿ ಹಾಗೂ ಮೇವಾ ಸಿಂಗ್ ಅವರ ಪುತ್ರನಾದ ಬಲ್ಜಿತ್ ಸಿಂಗ್ ಕಳೆದ ಮಾರ್ಚ್ ತಿಂಗಳಲ್ಲಿ ಗ್ರೆನೇಡ್ ದಾಳಿಯ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದನು. ಆತ ಗೋಯಿಂದ್ವಾಲ್ ಸಾಹಿಬ್ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಇಲ್ಲಿಂದ ಮೊಬೈಲ್ ಫೋನ್ ಮೂಲಕ ಪಾಕಿಸ್ತಾನಿ ಐಎಸ್‌ಐ ಸಂಚಾಲಕರೊಂದಿಗೆ ಸಂಪರ್ಕ ಸಾಧಿಸಿದ್ದು, ಮೂವರು ಸಹಚರರ ತಂಡವನ್ನು ರಚಿಸಿದ್ದಾನೆ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಿಮರ್ಜಿತ್ ಸಿಂಗ್ ಅಲಿಯಾಸ್ ಸಿಮರ್, ಸಾಹಿಬ್ ಸಿಂಗ್ ಅಲಿಯಾಸ್ ಗೋರಿ, ಮೇವಾ ಸಿಂಗ್ ಅವರ ಪುತ್ರ ಬಲ್ಜಿತ್ ಸಿಂಗ್ ಮತ್ತು ಬಾಬನ್ ಸಿಂಗ್ ಅವರ ಪುತ್ರನಾದ ಮತ್ತೊಬ್ಬ ಬಲ್ಜಿತ್ ಸಿಂಗ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಮರ್ಜಿತ್ ಸಿಂಗ್, ಸಾಹಿಬ್ ಸಿಂಗ್ ಮತ್ತು ಮೇವಾ ಸಿಂಗ್ ಅವರ ಪುತ್ರ ಬಲ್ಜಿತ್ ಸಿಂಗ್ ಪೊಲೀಸ್ ವಶದಲ್ಲಿದ್ದು, ಬಾಬನ್ ಸಿಂಗ್ ಅವರ ಪುತ್ರ ಬಲ್ಜಿತ್ ಸಿಂಗ್‌ನನ್ನು ತಲೆ ಮರೆಸಿಕೊಂಡಿದ್ದಾನೆ.
ಪಾಕಿಸ್ತಾನಿ ಸಂಚಾಲಕರೊಂದಿಗೆ ಸಂವಹನ ನಡೆಸಲು ಜೈಲು ಕೈದಿ ಬಳಸಿದ್ದ ಎನ್ನಲಾದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ.ಈ ಕುರಿತು ಜೈಲು ಅಧಿಕಾರಿಗಳು ಪ್ರತ್ಯೇಕ ಕ್ರಿಮಿನಲ್ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಆರೋಪಿಗಳೊಂದಿಗೆ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದಾಗ ಸಾಹಿಬ್ ಸಿಂಗ್ ಪಲಾಯನ ಮಾಡಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಸಾಹಿಬ್ ಸಿಂಗ್‌ನ ಕಾಲಿಗೆ ಗುಂಡೇಟು ಹಾಕಿದ್ದಾರೆ. ಇದರಿಂದ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗಾಗಿ ಅಜ್ನಾಲಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಹುಲ್, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಮೈತ್ರಿಕೂಟದ ಮೆರವಣಿಗೆ: ಪೊಲೀಸರಿಂದ ತಡೆ
ಪ್ರಕರಣದ ಕುರಿತು ವಿಸ್ತೃತ ತನಿಖೆಗಾಗಿ ಅಮೃತಸರ ಗ್ರಾಮಾಂತರ ಎಸ್‌ಎಸ್‌ಪಿ ಕನ್ವಲ್‌ಪ್ರೀತ್ ಸಿಂಗ್ ಚಾಹಲ್ ಅವರು ತನಿಖಾ ವಿಭಾಗ, ಅಜ್ನಾಲಾ ಪೊಲೀಸ್ ಠಾಣೆ ಮತ್ತು ಸಿಐಎ ಘಟಕದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ.