ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾನು ಭಾರತೀಯ; ಜನಾಂಗೀಯ ದಾಳಿಯಲ್ಲಿ ಹತ್ಯೆಗೊಳಗಾಗುವ ಮುನ್ನ ತ್ರಿಪುರಾ ವಿದ್ಯಾರ್ಥಿ ಕೊನೆಯದಾಗಿ ಹೇಳಿದ್ದೇನು?

Tripura student last words: ಡೆಹ್ರಾಡೂನ್‌ನಲ್ಲಿ ನಡೆದ ಜನಾಂಗೀಯ ದಾಳಿಯಲ್ಲಿ ತ್ರಿಪುರಾದ ವಿದ್ಯಾರ್ಥಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸಾವಿನ ಕ್ಷಣಗಳ ಮೊದಲು ಅವರು ಆಡಿದ ಮಾತುಗಳು ಎಲ್ಲರ ಮನಸ್ಸನ್ನು ತಟ್ಟಿವೆ. ನಾನು ಚೀನಾದವನಲ್ಲ, ಭಾರತೀಯ ಎಂದು ಹೇಳಿದ್ದಾರೆ. ಈ ಘಟನೆ ವ್ಯಾಪಕ ಆಕ್ರೋಶ ಮತ್ತು ದುಃಖಕ್ಕೆ ಕಾರಣವಾಗಿದೆ.

ನಾನು ಭಾರತೀಯ: ತ್ರಿಪುರಾ ವಿದ್ಯಾರ್ಥಿಯ ಕೊನೆಯ ಮಾತಿದು

ಜನಾಂಗೀಯ ದಾಳಿಯಲ್ಲಿ ಹತ್ಯೆಗೊಳಗಾದ ಅಂಜೆಲ್ ಚಕ್ಮಾ -

Priyanka P
Priyanka P Dec 29, 2025 1:59 PM

ಡೆಹ್ರಾಡೂನ್‌: ಉತ್ತಾರಖಂಡದ ಡೆಹ್ರಾಡೂನ್‍ನಲ್ಲಿ (Dehradun) ನಡೆದ ಜನಾಂಗೀಯ ದಾಳಿಯಲ್ಲಿ (racist attack) ಇರಿತಕ್ಕೊಳಗಾಗಿ ತ್ರಿಪುರದ 24 ವರ್ಷದ ಎಂಬಿಎ ವಿದ್ಯಾರ್ಥಿ ಮೃತಪಟ್ಟಿದ್ದಾರೆ. 14 ದಿನಗಳಿಗೂ ಹೆಚ್ಚು ಕಾಲ ಜೀವನ್ಮರಣ ಹೋರಾಟ ನಡೆಸಿದ ಅಂಜೆಲ್ ಚಕ್ಮಾ ಎಂಬ ಯುವಕ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಡಿಸೆಂಬರ್ 9 ರಂದು ಸೆಲಾಕಿ ಪ್ರದೇಶದಲ್ಲಿ ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದ್ದ ವೇಳೆ ಯುವಕನಿಗೆ ಚೂರಿ ಇರಿಯಲಾಗಿತ್ತು.

ಅಂಜೆಲ್ ಮತ್ತು ಅವರ ಕಿರಿಯ ಸಹೋದರ ಮೈಕೆಲ್ ಅವರನ್ನು ಗುಂಪೊಂದು ತಡೆದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ಗುಂಪು ಸಹೋದರರನ್ನು ಚೀನೀ ಎಂದು ಕರೆದಿದ್ದಾರೆ ಎನ್ನಲಾಗಿದೆ. ನಾವು ಚೀನೀಯರಲ್ಲ. ನಾವು ಭಾರತೀಯರು. ಅದನ್ನು ಸಾಬೀತುಪಡಿಸಲು ನಾವು ಯಾವ ಪ್ರಮಾಣಪತ್ರವನ್ನು ತೋರಿಸಬೇಕು? ಎಂದು ಆಂಜೆಲ್ ಶಾಂತವಾಗಿಯೇ ಕೇಳಿದ್ದಾರೆ. ಆದರೆ, ಪರಿಸ್ಥಿತಿ ಉಲ್ಬಣಗೊಂಡಿತು. ಆ ಗುಂಪು ಇಬ್ಬರು ಸಹೋದರರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.

Viral News: ಐರ್ಲೆಂಡ್ನಲ್ಲಿ ಜನಾಂಗೀಯ ದಾಳಿ; ಭಾರತೀಯ ಮೂಲದ 6 ವರ್ಷದ ಬಾಲಕಿಗೆ ಥಳಿಸಿದ ಗುಂಪು

ದುಷ್ಕರ್ಮಿಗಳ ದಾಳಿಗೆ ಅಂಜೆಲ್ ಅವರ ಕುತ್ತಿಗೆ ಮತ್ತು ಬೆನ್ನುಮೂಳೆಗೆ ತೀವ್ರ ಗಾಯಗಳಾಗಿತ್ತು. ಮೈಕೆಲ್ ಕೂಡ ಗಾಯಗೊಂಡಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅಂಜೆಲ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ, ಆಸ್ಪತ್ರೆಯಲ್ಲಿದ್ದ ಆತನ ಆಪ್ತ ಸ್ನೇಹಿತ, ಈ ಹಿಂಸಾಚಾರದಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದರು. ಅಂಜೆಲ್ ಶಾಂತ ಮತ್ತು ಸ್ನೇಹಪರರಾಗಿದ್ದರು. ಈ ರೀತಿ ಸಂಭವಿಸಿರುವುದು ನಮ್ಮಲ್ಲಿ ಯಾರಿಗೂ ನಂಬಲು ಸಾಧ್ಯವಿಲ್ಲ ಎಂದು ಸ್ನೇಹಿತ ಹೇಳಿದರು.

ಅಂಜೆಲ್ ಅವರ ಮೃತದೇಹವನ್ನು ಶನಿವಾರ ಅಗರ್ತಲಾಕ್ಕೆ ತರಲಾಯಿತು. ಅವರ ಸಾವು ತ್ರಿಪುರ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ ಮತ್ತು ದುಃಖವನ್ನು ಹುಟ್ಟುಹಾಕಿದೆ. ತಿಪ್ರಾ ಮೋಥಾ ಪಕ್ಷದ ಅಧ್ಯಕ್ಷ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ಬರ್ಮಾ ಅವರು ಕುಟುಂಬಕ್ಕೆ ವೈದ್ಯಕೀಯ ನೆರವು ಮತ್ತು ಅಂತ್ಯಕ್ರಿಯೆಯ ವ್ಯವಸ್ಥೆಗಳಲ್ಲಿ ಸಹಾಯ ಮಾಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ದೇಬ್ಬರ್ಮಾ, ಈಶಾನ್ಯದ ಜನರನ್ನು ಜನಾಂಗೀಯ ನಿಂದನೆಗೆ ಗುರಿಯಾಗಿಸಿಕೊಂಡಿರುವುದು ದುರಂತ ಎಂದು ಹೇಳಿದರು. ಈ ದಾಳಿಗಳು ನಮ್ಮನ್ನು ವಿಭಜಿಸುತ್ತವೆ. ನಮಗೆ ನ್ಯಾಯ ಬೇಕು ಎಂದು ಅವರು ಆಗ್ರಹಿಸಿದರು.

ಕಠಿಣ ಕ್ರಮದ ಪ್ರತಿಜ್ಞೆ ಮಾಡಿದ ಉತ್ತರಾಖಂಡ ಸಿಎಂ

ತ್ರಿಪುರ ವಿದ್ಯಾರ್ಥಿ ಅಂಜೆಲ್ ಚಕ್ಮಾ ಹತ್ಯೆಯನ್ನು ಉತ್ತರಾಖಂಡ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಪ್ರಕರಣದಲ್ಲಿ ಇಲ್ಲಿಯವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದು, ಅವರನ್ನು ಬಾಲಾಪರಾಧಿ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಒಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಆತನ ಪತ್ತೆಗೆ ಸಹಕರಿಸಿದವರಿಗೆ 25,000 ರೂ. ಬಹುಮಾನ ಘೋಷಿಸಲಾಗಿದೆ. ಶಂಕಿತನನ್ನು ಪತ್ತೆಹಚ್ಚಲು ನೇಪಾಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಪೊಲೀಸ್ ಕ್ರಮ

ಮೈಕೆಲ್ ಚಕ್ಮಾ ಅವರ ದೂರಿನ ಮೇರೆಗೆ ಡಿಸೆಂಬರ್ 12 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ಆರೋಪಿಗಳಲ್ಲಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಐವರನ್ನು ಡಿಸೆಂಬರ್ 14 ರಂದು ಬಂಧಿಸಲಾಯಿತು. ಪ್ರಮುಖ ಆರೋಪಿ ಯಜ್ಞ ಅವಸ್ಥಿ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಜನಾಂಗೀಯ ದ್ವೇಷ ಅಪರಾಧಗಳ ವಿರುದ್ಧ ರಾಷ್ಟ್ರೀಯ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಈಶಾನ್ಯ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಪ್ರಾರಂಭಿಸಿವೆ. ಡೆಹ್ರಾಡೂನ್‌ನ ವಿದ್ಯಾರ್ಥಿ ಸಂಘಟನೆಗಳು ಸಹ ದೇಶದ ಎಲ್ಲಾ ಭಾಗಗಳ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಘನತೆಗಾಗಿ ಕರೆ ನೀಡಿವೆ.