ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೆಕ್ಯೂರಿಟಿ ಗಾರ್ಡ್‌ಗಳ ಧರ್ಮ ಕೇಳಿ ಚೂರಿ ಇರಿದ ಅನ್ಸಾರಿ; ಐಸಿಸ್ ಸೇರಲು ಬಯಸಿದಾತನ ಕರಾಳ ಇತಿಹಾಸ ಬಯಲು

Lone wolf attack: ಇಬ್ಬರು ಭದ್ರತಾ ಸಿಬ್ಬಂದಿಗೆ 31 ವರ್ಷದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಮುಂಬೈಯಲ್ಲಿ ನಡೆದಿದೆ. ಅವರ ಧರ್ಮವನ್ನು ಕೇಳಿದ ನಂತರ ಈ ಕೃತ್ಯ ಎಸಗಿದನೆಂದು ಆರೋಪಿಸಲಾಗಿದ್ದು, ಇದನ್ನು ಒಂಟಿ ತೋಳ ಉಗ್ರ ದಾಳಿ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅನ್ಸಾರಿ ಬರೆದ ಟಿಪ್ಪಣಿಗಳಲ್ಲಿ ಜಿಹಾದ್ ಮತ್ತು ಗಾಜಾ ಎಂಬ ಪದಗಳೂ ಕಂಡುಬಂದಿವೆ.

ಸೆಕ್ಯೂರಿಟಿ ಗಾರ್ಡ್‌ಗಳ ಧರ್ಮ ಕೇಳಿ ಚೂರಿ ಇರಿತ

ಸೆಕ್ಯೂರಿಟಿ ಗಾರ್ಡ್‌ಗಳ ಧರ್ಮ ಕೇಳಿ ಚೂರಿ ಇರಿದ ಆರೋಪಿ ಅನ್ಸಾರಿ -

Priyanka P
Priyanka P Apr 28, 2026 5:54 PM

ಮುಂಬೈ, ಏ. 28: ಇಬ್ಬರು ಭದ್ರತಾ ಸಿಬ್ಬಂದಿಗೆ 31 ವರ್ಷದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದ ಮುಂಬೈಯಲ್ಲಿ (Mumbai) ನಡೆದಿದೆ. ಭದ್ರತಾ ಸಿಬ್ಬಂದಿಯ ಧರ್ಮವನ್ನು ಕೇಳಿದ ನಂತರ ಈ ಕೃತ್ಯ ಎಸಗಿದನೆಂದು ಆರೋಪಿಸಲಾಗಿದ್ದು, ಇದನ್ನು ಒಂಟಿ ತೋಳ ಉಗ್ರ ದಾಳಿ (Lone wolf attack) ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಆ್ಯಂಟಿ-ಟೆರರಿಸಂ ಸ್ಕ್ವಾಡ್ (ATS) ಪ್ರಕಾರ, ಆರೋಪಿ ಜೈಬ್ ಜುಬೇರ್ ಅನ್ಸಾರಿ ಮನೆಯಲ್ಲಿ ನಡೆದ ಶೋಧದ ವೇಳೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ISIS) ಉಗ್ರ ಸಂಘಟನೆಯಲ್ಲಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ ಕೈಬರಹದ ಟಿಪ್ಪಣಿಗಳು ಪತ್ತೆಯಾಗಿವೆ.

ಈ ಟಿಪ್ಪಣಿಗಳಲ್ಲಿ, ಮುಂಬೈಯ ಮೀರಾ ರೋಡ್ ಪ್ರದೇಶದಲ್ಲಿ ನಡೆದ ದಾಳಿಯನ್ನು ತನ್ನ ಮೊದಲ ಹೆಜ್ಜೆ ಎಂದು ಅನ್ಸಾರಿ ವಿವರಿಸಿದ್ದಾನೆ ಎಂದು ಮಹಾರಾಷ್ಟ್ರ ಎಟಿಎಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಅನ್ಸಾರಿ ಬರೆದ ಟಿಪ್ಪಣಿಗಳಲ್ಲಿ ಜಿಹಾದ್ ಮತ್ತು ಗಾಜಾ ಎಂಬ ಪದಗಳೂ ಕಂಡುಬಂದಿವೆ.

ತನಿಖೆಯಲ್ಲಿ ತಿಳಿದುಬಂದಂತೆ, ಅನ್ಸಾರಿ ವಿಜ್ಞಾನ ಪದವೀಧರನಾಗಿದ್ದು, ಹಲವು ವರ್ಷಗಳ ಕಾಲ ಅಮೆರಿಕದಲ್ಲಿ ವಾಸಿಸುತ್ತಿದ್ದ. ಅಲ್ಲಿ ಉದ್ಯೋಗ ಸಿಗದೆ 2019ರಲ್ಲಿ ಭಾರತಕ್ಕೆ ಹಿಂದಿರುಗಿ, ಮೀರಾ ರೋಡ್‌ನಲ್ಲಿ ಒಬ್ಬನೇ ವಾಸಿಸುತ್ತ ಆನ್‌ಲೈನ್ ಮೂಲಕ ರಸಾಯನಶಾಸ್ತ್ರ ಪಾಠಗಳನ್ನು ಬೋಧಿಸುತ್ತಿದ್ದ.

ಅನಾರೋಗ್ಯ ಪೀಡಿತ ಬೀದಿ ನಾಯಿಯನ್ನು ಸೈಕಲ್‌ ನಲ್ಲಿ ಕೂರಿಸಿ ಚಿಕಿತ್ಸೆ ಕೊಡಿಸಿದ ವ್ಯಕ್ತಿ

ತನಿಖಾಧಿಕಾರಿಗಳ ಪ್ರಕಾರ, ಒಂಟಿತನದ ಅವಧಿಯಲ್ಲಿ ಇಂಟರ್‌ನೆಟ್‌ ಮೂಲಕ ಅವನು ಕ್ರಮೇಣ ಅತಿರೇಕಿ ಚಿಂತನೆಗಳಿಗೆ ಒಳಗಾಗಿದ್ದಾನೆ. ಇದೀಗ, ಅವನ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅವನು ಯಾವುದೇ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿವೆ.

'ಒಂಟಿ ತೋಳ' ದಾಳಿ

ಮುಂಬೈಯ ಉಪನಗರ ಮೀರಾ ರಸ್ತೆಯ ನಯಾ ನಗರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಸೋಮವಾರ ಬೆಳಗ್ಗೆ ಈ ದಾಳಿ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಅನ್ಸಾರಿ ಕರ್ತವ್ಯದಲ್ಲಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳ ಬಳಿಗೆ ಹೋಗಿದ್ದಾನೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮೊದಲು ಭದ್ರತಾ ಸಿಬ್ಬಂದಿಯಿಂದ ದಾರಿ ವಿಚಾರಿಸಿ, ನಂತರ ಮತ್ತೆ ಬಂದು ಅವರ ಧರ್ಮವನ್ನು ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನ್ಸಾರಿ ಒಬ್ಬ ಗಾರ್ಡ್‌ಗೆ ಕಲ್ಮಾ (ಇಸ್ಲಾಮಿಕ್ ಪ್ರಾರ್ಥನಾ ವಾಕ್ಯ) ಓದಲು ಬಲವಂತಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆ ಗಾರ್ಡ್ ಅದನ್ನು ಓದಲು ವಿಫಲವಾದಾಗ, ಅವನು ತೀಕ್ಷ್ಣವಾದ ಆಯುಧದಿಂದ ಇಬ್ಬರ ಮೇಲೂ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಈ ದಾಳಿಯಿಂದ ರಾಜಕುಮಾರ್ ಮಿಶ್ರಾ ಮತ್ತು ಸುಬ್ರೊತೊ ರಮೇಶ್ ಸೇನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಶ್ರಾ ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿ, ಘಟನೆ ನಡೆದ 90 ನಿಮಿಷಗಳೊಳಗೆ ಪೊಲೀಸರು ಅನ್ಸಾರಿಯನ್ನು ಬಂಧಿಸಿದ್ದಾರೆ.

ಧಾರವಾಡದಲ್ಲಿ ಪೊಲೀಸರ ಕಿರುಕುಳಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ಬಂಧಿತನ ವಿರುದ್ಧ ಹತ್ಯೆ ಯತ್ನ ಸೇರಿದಂತೆ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಆ್ಯಂಟಿ-ಟೆರರಿಸಂ ಸ್ಕ್ವಾಡ್ ಕೈಗೆತ್ತಿಕೊಂಡಿದೆ. ಗಾಯಗೊಂಡ ಸುಬ್ರೋತೋ ರಮೇಶ್ ಸೇನ್ ಅವರ ಪ್ರಕಾರ, ಅವರು ಮುಖ್ಯ ರಸ್ತೆಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕಾವಲು ಕಾಯುತ್ತಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಆರೋಪಿಯು ಅವರ ಬಳಿಗೆ ಬಂದು ಹತ್ತಿರದ ಮಸೀದಿಯ ಬಗ್ಗೆ ಕೇಳಲು ಪ್ರಾರಂಭಿಸಿದನು.

ಸಂಭಾಷಣೆಯ ಸಮಯದಲ್ಲಿ, ಆ ವ್ಯಕ್ತಿ ಇದ್ದಕ್ಕಿದ್ದಂತೆ ನೀವು ಹಿಂದೂವೇ? ಎಂದು ಕೇಳಿದನು. ಸೇನ್ ಹೌದು ಎಂದು ಉತ್ತರಿಸಿದ ನಂತರ, ಆ ವ್ಯಕ್ತಿ ಅಲ್ಲಿಂದ ಹೊರಟುಹೋದನು. ಸುಮಾರು ಒಂದು ಗಂಟೆಯ ನಂತರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸೇನ್ ಹತ್ತಿರದ ಚಹಾ ಅಂಗಡಿಗೆ ಟೀ ಕುಡಿಯಲು ಹೋದಾಗ, ಮತ್ತೆ ಅದೇ ವ್ಯಕ್ತಿಯನ್ನು ಕಂಡರು. ಬೆಳಗಿನ ಜಾವ 4.30ರ ಸುಮಾರಿಗೆ ಅವರು ತನ್ನ ಸ್ಥಳಕ್ಕೆ ಹಿಂತಿರುಗಿದ ನಂತರ, ಆರೋಪಿಯು ಮತ್ತೆ ಅವರ ಬಳಿಗೆ ಬಂದು ನೀನು ಹಿಂದೂ ಅಲ್ಲವೇ? ಎಂದು ಕೇಳುತ್ತಾ ಕೈಯನ್ನು ಹಿಡಿದುಕೊಂಡನು. ನಂತರ ಅವನು ಚಾಕುವಿನಿಂದ ಹಲ್ಲೆ ಮಾಡಿದನು.