ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾಗೆ ಜಾಮೀನು ಮಂಜೂರು
ಹರಿಯಾಣದ ಶಿಕೋಪುರ ಭೂ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆಯು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಗಣಿಸಿ ಉದ್ಯಮಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರಿಗೆ ದೆಹಲಿ ನ್ಯಾಯಾಲಯವು ಬಂಧನ ಪೂರ್ವ ಜಾಮೀನು ಮಂಜೂರು ಮಾಡಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಅಕ್ರಮ ಹಣ ವರ್ಗಾವಣೆ (Money laundering case) ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Congress MP Priyanka Gandhi Vadra) ಅವರ ಪತಿ ರಾಬರ್ಟ್ ವಾದ್ರಾ (Robert Vadra) ಅವರಿಗೆ ದೆಹಲಿ ನ್ಯಾಯಾಲಯವು (delhi court) ಜಾಮೀನು ಮಂಜೂರು ಮಾಡಿದೆ. ಹರಿಯಾಣದ ಶಿಕೋಪುರ ಭೂ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಗಣಿಸಿದ ನ್ಯಾಯಾಲಯ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿದೆ. ಇದರಿಂದ ಈಗ ಜಾರಿ ನಿರ್ದೇಶನಾಲಯಕ್ಕೆ ಭಾರಿ ಹಿನ್ನಡೆಯಾಗಿದೆ.
ಶಿಕೋಪುರ ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಪರಿಗಣಿಸಿದ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಶನಿವಾರ ರಾಬರ್ಟ್ ವಾದ್ರಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ವಾದ್ರಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗಿತ್ತು.
ಮಹಾರಾಷ್ಟ್ರ ನೆಲೆಯಲ್ಲಿ ಅಭ್ಯಾಸದ ವೇಳೆ ಗುಂಡು ಹಾರಿ ಸೇನಾಧಿಕಾರಿ ಸಾವು
ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಸುಶಾಂತ್ ಚಂಗೋತ್ರಾ ಅವರು, ವಾದ್ರಾ ಅವರಿಗೆ ಯಾವುದೇ ಹೆಚ್ಚುವರಿ ಷರತ್ತುಗಳನ್ನು ವಿಧಿಸದೆ ಜಾಮೀನು ಬಾಂಡ್‌ಗಳನ್ನು ಸಲ್ಲಿಸುವಂತೆ ಸೂಚಿಸಿದರು.
ಹರಿಯಾಣದ ಶಿಕೋಹ್‌ಪುರ ಗ್ರಾಮದಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಪ್ರಾಸಿಕ್ಯೂಷನ್ ದೂರನ್ನು ಗಮನಿಸಿದ ನ್ಯಾಯಾಲಯ ವಾದ್ರಾ ಮತ್ತು ಇತರ ಎಂಟು ಮಂದಿಗೆ ಸಮನ್ಸ್ ಜಾರಿಗೊಳಿಸಿತ್ತು. ಜಾರಿ ನಿರ್ದೇಶನಾಲಯದ ಪರವಾಗಿ ವಕೀಲ ಜೋಹೆಬ್ ಹೊಸೇನ್ ಅವರು ವರ್ಚುವಲ್ ಮೂಲಕ ಹಾಜರಾಗಿ ನ್ಯಾಯಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಸಂಸ್ಥೆಯು ವರದಿಯನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ವಿಸ್ತೃತ ವರದಿ ಸಲ್ಲಿಸಲು ಎರಡು ವಾರ ಹೆಚ್ಚುವರಿ ಕಾಲಾವಕಾಶವನ್ನು ಕೋರಿದ ಅವರು, ಸಂಸ್ಥೆಯು ಇನ್ನೂ ಕೆಲವು ಅಂಶಗಳನ್ನು ಪರಿಶೀಲಿಸುತ್ತಿದೆ. ಇದಕ್ಕಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದರು.
ಚಾರ್ಜ್‌ಶೀಟ್ ಆಧಾರದಲ್ಲಿ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ವಾದ್ರಾ ಪ್ರಶ್ನಿಸಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಜುಲೈ 10ರಂದು ಪ್ರಕರಣದ ಮುಂದಿನ ವಿಚಾರಣೆಗೆ ದಿನ ನಿಗದಿಪಡಿಸಿದೆ.
ಏನು ಪ್ರಕರಣ?
ಗುರುಗ್ರಾಮ್‌ನ ಶಿಕೋಹ್‌ಪುರದಲ್ಲಿ 3.5 ಎಕರೆ ಜಮೀನಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದಲ್ಲಿ 2018ರ ಸೆಪ್ಟೆಂಬರ್ ತಿಂಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ದೂರಿನ ಪ್ರಕಾರ ವಾದ್ರಾ ಅವರ ಕಂಪನಿಯು 2008ರ ಫೆಬ್ರವರಿಯಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ 7.5 ಕೋಟಿ ರೂ.ಗೆ ಭೂಮಿಯನ್ನು ಖರೀದಿಸಿದ್ದು, ಬಳಿಕ ಅದನ್ನು 58 ಕೋಟಿ ರೂ. ಗೆ ಡಿಎಲ್‌ಎಫ್‌ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ: ಮಹಿಳೆ ಸೇರಿ ಐವರ ಬಂಧನ
ಇದಕ್ಕೆ ಸಂಬಂಧಿಸಿ 2025ರ ಜುಲೈ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ವಾದ್ರಾ ಸೇರಿದಂತೆ ಇತರ ಹಲವರ ಹೆಸರನ್ನು ದೂರಿನಲ್ಲಿ ದಾಖಲಿಸಿದೆ. ಇದರಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿಗಳಾದ ಮನೋಹರ್ ಲಾಲ್ ಖಟ್ಟರ್ ಮತ್ತು ಭೂಪಿಂದರ್ ಸಿಂಗ್ ಹೂಡಾ ಕೂಡ ಸೇರಿದ್ದಾರೆ.