ʼʼಪ್ರಧಾನಿ ನರೇಂದ್ರ ಮೋದಿ ಮಗಳಿಗೆ ಜೀವದಾನ ನೀಡಿದ್ದಾರೆʼʼ: ಕೃತಜ್ಞತೆ ಸಲ್ಲಿಸಿದ ಕ್ಷಮೆಯಾಚಿಸಿದ ಬಾಲಕಿಯ ತಾಯಿ
ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆ ಯಾಚಿಸಿದ್ದ ಬಾಲಕಿಯ ತಾಯಿ ಈಗ ಮೊದಲ ರಿಯಾಕ್ಷನ್ ನೀಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಳು. ಇದೀಗ ಆಕೆಯ ತಾಯಿ, ಪ್ರಧಾನಿಯವರು ತನ್ನ ಮಗಳಿಗೆ ಜೀವದಾನ ಮಾಡಿದ್ದಾರೆ ಎಂದಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನನ್ನ ಮಗಳಿಗೆ ಜೀವದಾನ ನೀಡಿದ್ದಾರೆ. ಅವರ ವಿರುದ್ಧ ಕೊಳಕು ಪದಗಳನ್ನು ಬಳಸಿ ನಿಂದಿಸಿದ್ದ ಅವಳನ್ನು ಕ್ಷಮಿಸುವ ಮೂಲಕ (forgiveness) ಅವರು ಅವಳಿಗೆ ಹೊಸ ಜನ್ಮ ಕೊಟ್ಟಿದ್ದಾರೆ ಎಂದು ಪ್ರಧಾನಿ ಮೋದಿಯವರ ಬಳಿ ಕ್ಷಮೆಯಾಚಿಸಿದ ಬಾಲಕಿಯ ತಾಯಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ (Viral Video) ಮೂಲಕ ಬಾಲಕಿಯೊಬ್ಬಳು, ನನಗೆ ಕೇವಲ 15 ವರ್ಷ. ನಾನು ಏನೇ ಮಾಡಿದರೂ ಅದು ಕ್ಷಮೆಗೆ ಅರ್ಹವಲ್ಲ. ಆದರೂ ನಾನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಹಳಷ್ಟು ಕೆಟ್ಟ ವಿಷಯಗಳನ್ನು ಹೇಳಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ ಎಂದು ಹೇಳಿರುವ ವಿಡಿಯೊ ಭಾರಿ ವೈರಲ್ ಆಗಿತ್ತು.
ಇದರ ಬಳಿಕ ಇದೀಗ ಆಕೆಯ ತಾಯಿ ಈ ಕುರಿತು ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮಗಳನ್ನು ಕ್ಷಮಿಸುವ ಮೂಲಕ ಅವಳಿಗೆ ಹೊಸ ಜೀವನ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ತಮ್ಮ ಮಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಬಾಲಕಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದಳು. ಇದರಿಂದ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದಾದ ಕೆಲವೇ ಗಂಟೆಗಳ ಬಳಿಕ ಆಕೆ ಇನ್‌ಸ್ಟಾಗ್ರಾಮ್ ನಲ್ಲಿ ಕ್ಷಮೆಯಾಚಿಸುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನೀಡಿರುವುದಕ್ಕೆ ಆಕೆಯ ವಿರುದ್ಧ ನೋಯ್ಡಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ಅದನ್ನು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಇದರ ಬಳಿಕ ಬಾಲಕಿಯು ಪ್ರಧಾನಿ ಮೋದಿ ಮತ್ತು ದೇಶದ ಜನತೆಯ ಬಳಿ ಕ್ಷಮೆ ಕೇಳುವ ವಿಡಿಯೊ ಬಿಡುಗಡೆ ಮಾಡಿದ್ದಳು.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಮಾಡಿರುವ ಪೋಸ್ಟ್ ನಲ್ಲಿ ಅವರು ದಾರಿ ತಪ್ಪಿದ ಮಕ್ಕಳು. ಅವರಿಗೆ ದಾರಿ ತೋರಿಸುವುದು ನಮ್ಮ ಕರ್ತವ್ಯ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯಗಳಿಗೆ ಎಳೆದುಕೊಂಡು ಹೋಗುವುದು ಮತ್ತು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸುತ್ತೇನೆ ಎಂದು ತಿಳಿಸಿದರು.
ಈ ಕುರಿತು ಮಾತನಾಡಿರುವ ಆಕೆಯ ತಾಯಿ, ಕೊಳಕು ಪದಗಳನ್ನು ಬಳಸಿದ ದೇಶದ ಮಗಳನ್ನು ಕ್ಷಮಿಸುವ ಮೂಲಕ ಪ್ರಧಾನಿ ಮೋದಿಯವರು ಶ್ರೇಷ್ಠತೆಯನ್ನು ತೋರಿಸಿದ್ದಾರೆ. ನಾನು ಅವರಿಗೆ ಕೈಜೋಡಿಸಿ ಧನ್ಯವಾದ ಹೇಳುತ್ತೇನೆ. ಇಂದು ಅವಳ ಹೊಸ ಜನ್ಮ. ಪ್ರಧಾನಿ ಅವಳಿಗೆ ಜೀವದಾನ ಮಾಡಿ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆ ನೀಡಿರುವ ಬಾಲಕಿಯನ್ನು ಎಫ್‌ಐಆರ್‌ನಲ್ಲಿ ರುಚಿಕಾ ಸಿಂಗ್ (25) ಎಂದು ಗುರುತಿಸಲಾಗಿದೆ. ಆದರೆ ಆಕೆಯ ಹೆಸರು ಮತ್ತು ವಯಸ್ಸು ತಪ್ಪಾಗಿದೆ ಎಂದು ಆಕೆಯ ತಾಯಿ ಸ್ಪಷ್ಟಪಡಿಸಿದ್ದಾರೆ. ಆಕೆಯ ವಿರುದ್ದದ ಪ್ರಕರಣ ಕೈಬಿಡುವಂತೆ ಒತ್ತಾಯಿಸಿದ ಅವರು, ಇದರಿಂದ ನಾವು ಶಾಂತಿಯುತ ಜೀವನ ನಡೆಸಬಹುದು ಎಂದು ಹೇಳಿದ್ದಾರೆ.
ಅವಳಿಗೆ ಅವಳ ತಪ್ಪಿನ ಅರಿವಾಗಿದೆ. ಅದಕ್ಕಾಗಿ ನಾಚಿಕೆಯಾಗಿದೆ. ಆದರೂ ಅವಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ತೆಗೆದುಹಾಕಿದರೆ ಅವಳು ಶಾಂತಿಯಿಂದ ಬದುಕಬಹುದು. ಈಗ ಅವಳು ನಿಮ್ಮ ಮೇಲ್ವಿಚಾರಣೆಯಲ್ಲಿದ್ದಾಳೆ ಎಂದು ತಿಳಿಸಿರುವ ಅವರು, ದೇಶದ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವಂತೆ ಒತ್ತಾಯಿಸಿದರು.
"ಆದಾಯ ಹೆಚ್ಚಾಗಿದೆ ಎಂಬ ಕಾರಣಕ್ಕೆ ಜೀವನಶೈಲಿ ಬದಲಾಯಿಸಬೇಕಾಗಿಲ್ಲ": ಬೆಂಗಳೂರು ಯುವತಿಯ ಸಲಹೆಗೆ ನೆಟ್ಟಿಗರು ಫಿದಾ
ಅಪ್ರಾಪ್ತರು ದುರ್ಬಲರಾಗಿರುತ್ತಾರೆ. ಸುಲಭವಾಗಿ ಅವರು ಇತರರ ಜಾಲದಲ್ಲಿ ಬೀಳುತ್ತಾರೆ. 18 ವರ್ಷದೊಳಗಿನ ಮಕ್ಕಳಿಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಅನ್ನು ನಿಲ್ಲಿಸಬೇಕು. ಅವರಿಗೆ ಅಧ್ಯಯನ ಮಾಡಲು ಮಾತ್ರ ಅವಕಾಶ ನೀಡಬೇಕು. ಪ್ರತಿಭಟನಾ ಸ್ಥಳಗಳಿಗೆ ಅವರಿಗೆ ಅವಕಾಶ ನೀಡಬಾರದು. ಈ ಮಕ್ಕಳನ್ನು ಸುಲಭವಾಗಿ ಇತರರು ಬಳಸಿಕೊಳ್ಳಬಹುದು. ಚಿಕ್ಕ ಮಕ್ಕಳಿಗೆ ಪ್ರಪಂಚದ ಬಗ್ಗೆ ಅಥವಾ ಹಿರಿಯರನ್ನು ಗೌರವಿಸುವ ಬಗ್ಗೆ ಏನೂ ತಿಳಿದಿರುವುದಿಲ್ಲ ಎಂದು ಅವರು ಹೇಳಿದರು.