ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಒಂದು ಕಾಗದ ಚೂರಿನಿಂದ ಕೊಲೆ ಪ್ರಕರಣ ಭೇದಿಸಿದ ಸ್ನಿಫರ್ ನಾಯಿ

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಎರಡು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಗ್ರಾಮಸ್ಥರನ್ನೆಲ್ಲ ಬೆಚ್ಚಿ ಬೀಳಿಸಿತ್ತು. 70 ವರ್ಷದ ರೈತನೊಬ್ಬನ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಯಾವುದೇ ಕುರುಹುಗಳಿಲ್ಲದ ಈ ಕೊಲೆ ಪ್ರಕರಣವನ್ನು ಭೇದಿಸಿದ ಸ್ನಿಫರ್ ನಾಯಿ ಈಗ ಹೀರೋ ಎಂದು ಗುರುತಿಸಿಕೊಂಡಿದೆ. ಕಾಗದದ ಚಿಕ್ಕ ತುಂಡಿನಿಂದ ಬೆನ್ನು ಹತ್ತಿದ ನಾಯಿ ಕೊಲೆ ಪ್ರಕರಣ ಭೇದಿಸಿದ್ದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಕೊಲೆ ಪ್ರಕರಣ ಭೇದಿಸಿದ ಸ್ನಿಫರ್ ನಾಯಿ

ಸಾಂದರ್ಭಿಕ ಚಿತ್ರ -

ಮಧ್ಯಪ್ರದೇಶ: ಸುಮಾರು ಎರಡು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು (Murder case) ಕಾಗದದ ಚೂರಿನ ಸಹಾಯದಿಂದ ಸ್ನಿಫರ್ ನಾಯಿಯೊಂದು (sniffer dog) ಭೇದಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ (Madhyapradesh) ಗಂಗೇಪುರ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಡೆದ 70 ವರ್ಷದ ರೈತನೊಬ್ಬನನ್ನು ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಇದು ಗ್ರಾಮಸ್ಥರನ್ನೆಲ್ಲ ಬೆಚ್ಚಿ ಬೀಳಿಸಿತ್ತು. ಅಪರಾಧಿಗಳು ಯಾವುದೇ ಕುರುಹು ಬಿಡದೇ ಇದ್ದುದರಿಂದ ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಸಣ್ಣ ಕಾಗದದ ತುಂಡಿನ ಸಹಾಯದಿಂದ ಸ್ನಿಫರ್ ನಾಯಿ ಈಗ ಕೊಲೆ ಪ್ರಕರಣವನ್ನು ಭೇದಿಸಿದೆ.

ಎರಡು ತಿಂಗಳ ಹಿಂದೆ ಶಿವನಾರಾಯಣ ಕೌರವ (70) ಎಂಬವರ ಶವ ಅವರ ಹೊಲದಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾವುದೇ ಕುರುಹುಗಳು, ಶಂಕಿತರಿಲ್ಲದ್ದ ಕಾರಣ ಈ ಪ್ರಕರಣ ನಿಗೂಢವಾಗಿತ್ತು. ಆದರೆ ಹರಿದ ಕಾಗದದ ತುಂಡು ಮತ್ತು ಸ್ನಿಫರ್ ನಾಯಿ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ನೀಡಿದೆ.

Boiler Blast: ಬೈಲಹೊಂಗಲ ಸಕ್ಕರೆ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಭಿಂದ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿವನಾರಾಯಣ ಕೌರವ ಅವರ ಸೋದರಳಿಯ ಶಿವರತನ್ ಕೌರವ, ಮೊಮ್ಮಗ ಮಹೇಂದ್ರ ಕೌರವ ಮತ್ತು ಗ್ರಾಮದ ಬಾದಮ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಹತ್ಯೆಗೆ ಬಳಸಲಾದ ಕೊಡಲಿ ಮತ್ತು ಕಬ್ಬಿಣದ ರಾಡ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರವೀಣ್ ತ್ರಿಪಾಠಿ, ಶಿವನಾರಾಯಣ ಕೌರವ ಅವರ ಕೊಲೆಗೆ ಆಸ್ತಿ ವಿವಾದ ಮುಖ್ಯ ಕಾರಣವಾಗಿದೆ. ಸುಮಾರು 31 ಎಕರೆ ಪೂರ್ವಜರ ಆಸ್ತಿಗಾಗಿ ಶಿವನಾರಾಯಣ ಕೌರವ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶಿವನಾರಾಯಣ್ ಅವರ ಸಹೋದರಿ ಸುರ್ಜಾ ದೇವಿ ಅವರ ಸಾವಿನ ಬಳಿಕ ಅವರ ಪತಿ ರಾಮಸ್ವರೂಪ್ ಗೌತಮ್ ಅವರು ಪೂರ್ವಜರ ಭೂಮಿಯಲ್ಲಿ ತಮ್ಮ ಪತ್ನಿಯ ಪಾಲನ್ನು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. ಶಿವನಾರಾಯಣ್ ತಮ್ಮ ಸಹೋದರಿಯ ಕಾನೂನುಬದ್ಧ ಹಕ್ಕಿಗೆ ಬೆಂಬಲವನ್ನು ಕೂಡ ನೀಡಿದರು. ಆದರೆ ಅವರ ಸೋದರಳಿಯ ಶಿವರತನ್ ಮತ್ತು ಮೊಮ್ಮಗ ಮಹೇಂದ್ರ ವಿವಾದಿತ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಅವರ ವಿರೋಧದ ನಡುವೆ ಶಿವನಾರಾಯಣ್ ಅವರು ಸಹೋದರಿಯ ಹಕ್ಕಿಗೆ ಬೆಂಬಲ ನೀಡಿದ್ದರಿಂದ ಅವರು ಆಕ್ರೋಶಗೊಂಡು ಬಾದಮ್ ಸಿಂಗ್ ಸಹಾಯದಿಂದ ಶಿವನಾರಾಯಣ್ ಅವರ ಕೊಲೆಗೆ ಸಂಚು ರೂಪಿಸಿದರು ಎಂದು ಹೇಳಿದ್ದಾರೆ.

2 ಕೋಟಿ ರುಪಾಯಿ ವಿಮಾ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಹೃದಯಾಘಾತದ ನಾಟಕವಾಡಿದ ಮಹಿಳೆ

ನವೆಂಬರ್ 14ರಂದು ರಾತ್ರಿ ಶಿವನಾರಾಯಣ್ ಅವರು ತಮ್ಮ ಹೊಲದಲ್ಲಿ ಮಲಗಿ ಬೆಳೆಗಳನ್ನು ಕಾಯುತ್ತಿದ್ದ ವೇಳೆ ದಾಳಿಕೋರರು ಕೊಡಲಿಯಿಂದ ಅವರ ಕತ್ತು ಸೀಳಿ ಕೊಂದು ಕತ್ತಲಲ್ಲಿ ಓಡಿ ತಪ್ಪಿಸಿಕೊಂಡರು. ತನಿಖೆ ವೇಳೆ ಶವದ ಬಳಿ ಸಣ್ಣ, ಒಂದು ಸಣ್ಣ ಕಾಗದದ ತುಂಡು ಸಿಕ್ಕಿತ್ತು. ಅದರಲ್ಲಿ ಹಲವಾರು ಹೆಸರುಗಳಿದ್ದರೂ ಅದನ್ನು ಓದಲು ಸಾಧ್ಯವಾಗಲಿಲ್ಲ. ಹೀಗಾಗಿ ಪೊಲೀಸರು ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳವನ್ನು ಕರೆಸಿದರು. ಕಾಗದದ ವಾಸನೆ ನೋಡಿದ ಸ್ನಿಫರ್ ನಾಯಿ ನೇರವಾಗಿ ಬಾದಮ್ ಸಿಂಗ್ ಮನೆಗೆ ಪೊಲೀಸರನ್ನು ಕರೆದುಕೊಂಡು ಹೋಯಿತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲವೂ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.