Raichur Horror: ಪ್ರೀತಿಸಿದ ಹುಡುಗಿಯ ಕತ್ತು ಸೀಳಿ ಬರ್ಬರ ಹತ್ಯೆ; ಆರೋಪಿ ಸೆರೆ
ಪ್ರೀತಿಸಿದ ಹುಡುಗಿಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ ಶಿಫಾ (24) ಮೃತ ವಿದ್ಯಾರ್ಥಿನಿ. ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುಬಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರು: ಎಂಎಸ್ಸಿ (MSC) ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವಂತಹ ದುರಂತ ಘಟನೆ ಇಂದು (ಜ. 30) ರಾಯಚೂರು ಜಿಲ್ಲೆಯ (Raichur Horror) ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಎಂಟು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯಕರನೇ ಹಾಡಹಗಲಿನಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ವಿದ್ಯಾರ್ಥಿನಿಯನ್ನು 24 ವರ್ಷದ ಶಿಫಾ ಅಬ್ದುಲ್ ವಾಹೀದ್ ಎಂದು ಗುರುತಿಸಲಾಗಿದೆ. ಆರೋಪಿ ಮುಬಿನ್ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಲೇಜಿಗೆ ತೆರಳುತ್ತಿದ್ದ ಶಿಫಾಳನ್ನು ಮಾತನಾಡಬೇಕೆಂದು ಕರೆದಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಕಾಲೇಜಿಗೆ ಹೋಗದೆ ಮುಬಿನ್ ಜತೆ ಮಾತನಾಡಲು ಹೋಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಮುಬಿನ್ ಏಕಾಏಕಿ ಚೂರಿ ತೆಗೆದು ಶಿಫಾಳ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿಫಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಶಿಫಾಳ ಪೋಷಕರು ಕಣ್ಣೀರು ಹಾಕಿದ್ದಾರೆ. ಹತ್ಯೆಯ ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್. ತಳವಾರ, ಗ್ರಾಮೀಣ ಠಾಣೆಯ ಸಿಪಿಐ ವೀರಾರೆಡ್ಡಿ, ಬಳಗಾನೂರು ಪಿಎಸ್ಐ ಯರಿಯಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಮುಬಿನ್ ಲಿಂಗಸುಗೂರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಈ ಸುದ್ದಿಯನ್ನೂ ಓದಿ:Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!
ಶಿಫಾ ಬೇರೆಯವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು, ಎಷ್ಟೇ ಮನವೊಲಿಸಿದರೂ ಕೇಳಲಿಲ್ಲ ಅದಕ್ಕಾಗಿ ಕೊಲೆ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಕೊಲೆಯಾದ ಶಿಫಾ, ಹಾಗೂ ಮೊಬಿನ್ ಇಬ್ಬರೂ ಲಿಂಗಸುಗೂರು ನಿವಾಸಿಗಳಾಗಿದ್ದು, ಸದ್ಯ ಸ್ಥಳಕ್ಕೆ ಸಿಂಧನೂರು ಟೌನ್ ಪೋಲೀಸರು ಭೇಟಿ ನೀಡಿ ಮತ್ತಷ್ಟು ಪರಿಶೀಲನೆ ನಡೆಸುತ್ತಿದ್ದಾರೆ.