Murder Case: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಟ್ವಿಸ್ಟ್, ಅತ್ತೆಯೇ ಕೊಲೆಗಾತಿ!
ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್, ಪ್ರೇಮಿಸಿ ಮದುವೆಯಾದ ಪತ್ನಿ ಹಾಗೂ ಆಕೆಯ ಮನೆಯವರ ಜೊತೆಗೇ ಗಲಾಟೆ ಮಾಡಿಕೊಂಡಿದ್ದಾನೆ. ಜೊತೆಗೆ ಆತನ ಅಕ್ರಮ ವ್ಯವಹಾರ, ಅಕ್ರಮ ಸಂಬಂಧಗಳು ಕೂಡ ಆತನಿಗೆ ಮುಳುವಾಗಿವೆ. ಅತ್ತೆ- ಮಗಳೇ ಸೇರಿಕೊಂಡು ಕೊಲೆ ಮಾಡಿರುವುದು ಗೊತ್ತಾಗಿದೆ.

ಯಶಸ್ವಿನಿ, ಲೋಕನಾಥ್ ಸಿಂಗ್, ಹೇಮ

ಬೆಂಗಳೂರು: ಕಳೆದ ಮಾರ್ಚ್ 22ರಂದು ಬೆಂಗಳೂರಿನ (Bengaluru crime news) ಹೆಸರುಘಟ್ಟ ಬಳಿಯ ಬಿಜಿಎಸ್ ಲೇಔಟ್ ಬಳಿ ಮಾಗಡಿ ಶಾಸಕ ಎಚ್ .ಸಿ. ಬಾಲಕೃಷ್ಣ ಆಪ್ತ ಉದ್ಯಮಿ ಲೋಕನಾಥ್ ಸಿಂಗ್ (Lokanat Singh murder case) ಕೊಲೆಯಾಗಿತ್ತು. ಇದೀಗ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಟ್ವಿಸ್ಟ್ ದೊರೆತಿದ್ದು, ಲೋಕನಾಥ್ ಸಿಂಗ್‌ನನ್ನು ಅತ್ತೆಯೇ ಕೊಲೆ ಮಾಡಿರುವುದು ಗೊತ್ತಾಗಿದೆ. ಇನ್ನಷ್ಟು ಅಚ್ಚರಿ ಎಂದರೆ, ತನ್ನ ಗಂಡನ ಕೊಲೆಗೆ ಹೆಂಡತಿಯೇ ಅಮ್ಮನ ಜೊತೆ ಕೈಜೋಡಿಸಿದ್ದಾಳೆ. ಸೋಲದೇವನಹಳ್ಳಿ ಪೊಲೀಸರು ಅಮ್ಮ ಮಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಕೃಷ್ಣ ಸಿಂಗ್ ಹಾಗೂ ಹೇಮ ದಂಪತಿಯ ಮಗಳು, ಎಂಬಿಎ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯಶಸ್ವಿನಿಯನ್ನು 37 ವರ್ಷದ ಲೋಕನಾಥ್ ಸಿಂಗ್ ಕುಣಿಗಲ್‌ಗೆ ಕರೆದೊಯ್ದು ರಿಜಿಸ್ಟರ್ ಮದುವೆಯಾಗಿದ್ದ. ಆದರೆ ಮದುವೆ ವಿಚಾರ ಹುಡುಗಿ ಕುಟುಂಬಕ್ಕೆ ಇಷ್ಟ ಇರಲಿಲ್ಲ. ಕುಣಿಗಲ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿ, ಪತ್ನಿಯನ್ನು ಅವರ ಪೋಷಕರ ಜೊತೆಯೇ ಬಿಟ್ಟಿದ್ದ. ಕೆಲ ದಿನಗಳ ಬಳಿಕ ಲೋಕನಾಥ್ ಸಿಂಗ್ನ ವ್ಯವಹಾರ, ಅಕ್ರಮ ಸಂಬಂಧಗಳ ಬಗ್ಗೆ ಪತ್ನಿ ಯಶಸ್ವಿನಿಗೆ ತಿಳಿದಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಪತ್ನಿ ಜೊತೆ ಜಗಳ ಮಾಡಿದ್ದಾನೆ. ಎರಡು ವಾರದ ಹಿಂದೆ ಪತ್ನಿಯ ಕುಟುಂಬಕ್ಕೆ ಇವರ ಮದುವೆ ವಿಚಾರ ಗೊತ್ತಾಗಿದೆ. ಈ ವೇಳೆ ಪತ್ನಿ ಕುಟುಂಬಸ್ಥರು ಲೋಕನಾಥ್ ಸಿಂಗ್ ಜೊತೆ ಗಲಾಟೆ ಮಾಡಿದ್ದರು.
ಬಳಿಕ ಲೋಕನಾಥ್ ಪತ್ನಿ ಯಶಸ್ವಿನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಮಗಳ ಭವಿಷ್ಯ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿದ ಯಶಸ್ವಿನಿ ತಾಯಿ ಹೇಮ, ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದಳು. ಅದರಂತೆ ಯಶಸ್ವಿನಿ ನಿನ್ನ ಜೊತೆ ಮಾತನಾಡಬೇಕೆಂದು ಲೋಕನಾಥನನ್ನು ಚಿಕ್ಕಬಾಣಾವರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಇವರ ಹಿಂದೆಯೇ ಯಶಸ್ವಿನಿ ತಾಯಿ ಹೇಮ ಸಹ ಆಟೋದಲ್ಲಿ ಕಾರನ್ನು ಫಾಲೋ ಮಾಡಿಕೊಂಡು ಹೋಗಿದ್ದಳು. ನಿರ್ಜನ ಪ್ರದೇಶದಲ್ಲಿ ನಿದ್ದೆ ಮಾತ್ರೆ ಬೆರಸಿದ್ದ ಊಟವನ್ನು ಯಶಸ್ವಿನಿ ತಿನ್ನಿಸಿದ್ದಾಳೆ. ಪತಿಗೆ ಮದ್ಯ ಕುಡಿಸಿದ್ದಾಳೆ. ಲೋಕನಾಥ್ ಮತ್ತಿನಲ್ಲಿ ತೇಲಾಡಿದ್ದು, ಆಗ ಹೇಮ ಹರಿತವಾದ ಆಯುಧದಿಂದ ಲೋಕನಾಥನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.
ಕೂಡಲೇ ಅಲ್ಲಿಂದ ಪರಾರಿಯಯಾದ ಇಬ್ಬರು ಖಾಸಗಿ ವಾಹನದಲ್ಲಿ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದರು. ಸದ್ಯ ಅಮ್ಮ ಮಗಳನ್ನು ಸೋಲದೇವನಹಳ್ಳಿ ಪೊಲೀಸರು ಆರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್ ಸ್ಟೋರಿ