ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೆವಿಕ್ವಿಕ್ ಬಳಸಿ ಎಟಿಎಂನಿಂದ ಹಣ ದೋಚಿದ ಖದೀಮರು; ಕೊನೆಗೆ ಸಿನಿಮೀಯ ಶೈಲಿಯಲ್ಲಿ ಅಂದರ್: ರೋಚಕ ಕಾರ್ಯಾಚರಣೆ ಹೇಗಿತ್ತು?

Robbers Used Feviquick at ATMs: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೊಲ್ಸೆವಾಡಿ ಎಂಬಲ್ಲಿ ದರೋಡೆಕೋರರು ಫೆವಿಕ್ವಿಕ್ ಬಳಸಿ, ಜನರನ್ನು ಯಾಮಾರಿಸಿದ್ದಾರೆ. ಇದೀಗ ಥಾಣೆಯ ಕಲ್ಯಾಣ್‌ನ ಕೊಲ್ಸೆವಾಡಿ ಪೊಲೀಸರು ಎಟಿಎಂ ಯಂತ್ರಗಳಿಗೆ ಫೆವಿಕ್ವಿಕ್ ಅನ್ನು ಹಚ್ಚಿ ಜನರನ್ನು ವಂಚಿಸುತ್ತಿದ್ದ ತಂಡವನ್ನು ಬಂಧಿಸಿದ್ದಾರೆ.

ಎಟಿಎಂಗಳಲ್ಲಿ ಫೆವಿಕ್ವಿಕ್ ಬಳಸಿ ಹಣ ದೋಚಿದ ಖದೀಮರು

ಎಟಿಎಂಗಳಲ್ಲಿ ಫೆವಿಕ್ವಿಕ್ ಬಳಸಿದ ದರೋಡೆಕೋರರು ಅರೆಸ್ಟ್ -

Priyanka P
Priyanka P Sep 8, 2026 7:25 PM

ಮುಂಬೈ, ಸೆ. 8: ಎಟಿಎಂಗೆ (ATM) ಹೋಗಿ ನಗದು ಪಡೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ (Crime News). ಒಮ್ಮೆ ಊಹಿಸಿಕೊಳ್ಳಿ. ಎಟಿಎಂ ಕೇಂದ್ರಕ್ಕೆ ಹೋಗುವ ನೀವು, ಕಾರ್ಡ್ ಹಾಕಿ, ಪಿನ್ ಮತ್ತು ಹಣದ ಮೊತ್ತವನ್ನು ನಮೂದಿಸಿ ನಗದು ಹಣವನ್ನು ಪಡೆಯುತ್ತೀರಿ. ಆದರೆ ವ್ಯವಹಾರ ಮುಗಿದ ನಂತರ ನಿಮ್ಮ ಡೆಬಿಟ್ ಕಾರ್ಡ್ ಅನ್ನು ವಾಪಸ್ ತೆಗೆದುಕೊಳ್ಳಲು ಹೋದಾಗ ಅದು ಹೊರಬರದೆ ಒಳಗಡೆಯೇ ಸಿಲುಕಿಕೊಳ್ಳುತ್ತದೆ. ಅದಾಗಿ ಸ್ವಲ್ಪ ಹೊತ್ತಲ್ಲೇ ನಿಮ್ಮ ಖಾತೆಯಿಂದ ಹಣ ಕಳ್ಳರ ಪಾಲಾಗಿರುತ್ತದೆ. ಇದು ಯಾವುದೋ ಸಿನಿಮಾದ ದೃಶ್ಯವಲ್ಲ. ಬದಲಾಗಿ ಮಹಾರಾಷ್ಟ್ರದಲ್ಲಿ ಕಳ್ಳರು ನಡೆಸಿದ ವಂಚನೆಯ ಜಾಲವೊಂದರ ವಿವರ.

ಹೌದು, ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು ಇಂಥದ್ದೇ ಘಟನೆ. ಕೊಲ್ಸೆವಾಡಿಯಲ್ಲಿ ದರೋಡೆಕೋರರು ಫೆವಿಕ್ವಿಕ್ ಬಳಸಿ, ಜನರನ್ನು ಯಾಮಾರಿಸಿದ್ದಾರೆ. ಥಾಣೆಯ ಕಲ್ಯಾಣ್‌ನ ಕೊಲ್ಸೆವಾಡಿ ಪೊಲೀಸರು ಎಟಿಎಂ ಯಂತ್ರಗಳಿಗೆ ಫೆವಿಕ್ವಿಕ್ ಅನ್ನು ಹಚ್ಚಿ ಜನರನ್ನು ವಂಚಿಸುತ್ತಿದ್ದ ತಂಡವನ್ನು ಬಂಧಿಸಿದ್ದಾರೆ. ತನಿಖೆಯಿಂದ ತಿಳಿದು ಬಂದಿರುವ ಪ್ರಕಾರ, ಈ ಗ್ಯಾಂಗ್ ಎಟಿಎಂ ಕೇಂದ್ರಗಳಲ್ಲಿ ಜನರಿಗಾಗಿ ಕಾಯುತ್ತಿದ್ದರು. ಗ್ರಾಹಕರ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲು ಕಾರ್ಡ್ ಸ್ಲಾಟ್‌ಗೆ ಫೆವಿಕ್ವಿಕ್ ಹಚ್ಚುತ್ತಿದ್ದರು.

ಕಾರ್ಡ್ ಸಿಲುಕಿಕೊಂಡಾg ಬಳಕೆದಾರರು ಅಸಹಾಯಕರಾದಾಗ ವಂಚಕನೊಬ್ಬ ಸಹಾಯ ಮಾಡುವವರಂತೆ ನಟಿಸಿ ಒಳ ಬರುತ್ತಿದ್ದ. ಸಹಾಯ ಮಾಡುವುದಾಗಿ ನಂಬಿಸಿ, ಎಟಿಎಂ ಪಿನ್ ಅನ್ನು ಸತತ ಮೂರು ಬಾರಿ ನಮೂದಿಸುವಂತೆ ಗ್ರಾಹಕರಿಗೆ ಸೂಚಿಸುತ್ತಿದ್ದ. ಪಿನ್ ನಮೂದಿಸಿದ ನಂತರವೂ ಹಣ ಹೊರಬರುತ್ತಿರಲಿಲ್ಲ. ಅಷ್ಟರಲ್ಲೇ, ಸಂತ್ರಸ್ತ ಗ್ರಾಹಕನಿಗೆ ನಿರ್ದಿಷ್ಟ ಮೊಬೈಲ್ ಸಂಖ್ಯೆಯೊಂದಕ್ಕೆ ಕರೆ ಮಾಡಲು ಹೇಳಲಾಗುತ್ತಿತ್ತು. ಆಘಾತಕಾರಿ ವಿಷಯವೆಂದರೆ, ನೀಡಲಾಗುತ್ತಿದ್ದ ಆ ಫೋನ್ ನಂಬರ್ ಅದೇ ವಂಚಕ ಗ್ಯಾಂಗ್‌ನ ಮತ್ತೊಬ್ಬ ಸದಸ್ಯನದಾಗಿರುತ್ತಿತ್ತು.

ʼʼಸಹಕರಿಸಿದರೆ ಹೆಚ್ಚುವರಿ ಅಂಕʼʼ: ಜೆಎನ್‌ಯು ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಕರೆ ಸ್ವೀಕರಿಸಿದ ವಂಚಕ ಸಂತ್ರಸ್ತ ಗ್ರಾಹಕರನ್ನು ಯಾವುದೋ ಒಂದು ನಿರ್ದಿಷ್ಟ ಸ್ಥಳಕ್ಕೆ ಬರುವಂತೆ ಸೂಚಿಸುತ್ತಿದ್ದ. ಈ ಗ್ಯಾಂಗ್‌ನ ಸದಸ್ಯರು ಗ್ರಾಹಕರಿಂದ ಎಟಿಎಂ ಪಿನ್ ಅನ್ನು ಪಡೆದುಕೊಳ್ಳುತ್ತಿದ್ದರು ಅಥವಾ ಬೆದರಿಕೆ ಹಾಕಿ ಅವರ ಬ್ಯಾಂಕಿಂಗ್ ಮಾಹಿತಿಯನ್ನು ಸಂಗ್ರಹಿಸಿ, ನಂತರ ಅವರ ಖಾತೆಗಳಿಂದ ಹಣವನ್ನು ಡ್ರಾ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

ಕಲ್ಯಾಣ್ ಪೂರ್ವದ ಕೊಲ್ಸೆವಾಡಿ ಪ್ರದೇಶದ ಎಟಿಎಂ ಕೇಂದ್ರದಲ್ಲಿ ಗ್ರಾಹಕರೊಬ್ಬರನ್ನು ವಂಚಿಸಲು ಯತ್ನಿಸಿದ ಬಗ್ಗೆ ದೂರು ಬಂದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ರಾಜೇಶ್ ಕುಮಾರ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ರಾಜೇಶ್ ಪೊಲೀಸರಿಗೆ ಇನ್ನೂ ಮೂವರು ಕೃತ್ಯದಲ್ಲಿ ಭಾಗಿಯಾಗಿದ್ದು, ಭಿವಾಂಡಿಯ ಕೊಂಗಾವೊ ಪ್ರದೇಶದಲ್ಲಿದ್ದಾರೆ ಎಂದು ತಿಳಿಸಿದ್ದಾನೆ.

ಮೂವರು ಆರೋಪಿಗಳು ಪಾಟ್ನಾ ಎಕ್ಸ್‌ಪ್ರೆಸ್‌ನಲ್ಲಿ ಬಿಹಾರಕ್ಕೆ ಪ್ರಯಾಣಿಸುತ್ತಿದ್ದಾರೆಂದು ತಿಳಿದುಬಂದ ಕೂಡಲೇ ಬೆನ್ನಟ್ಟಿದ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಇದೇ ವಿಧಾನವನ್ನು ಬಳಸಿಕೊಂಡು ಹಲವರನ್ನು ವಂಚಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸಂತ್ರಸ್ತರ ಖಾತೆಗಳಿಂದ ಎಷ್ಟು ಹಣವನ್ನು ಹಿಂಪಡೆಯಲಾಗಿದೆ ಎಂಬುದರ ಕುರಿತು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.