ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಮಾನ್ಯ ಪ್ರಜೆ ಮುಖ್ಯಮಂತ್ರಿಯಾದರೆ ಏನಾಗುತ್ತೆ? ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್

Common Man Movie: ಗೌರಿಶಂಕರ್‌ ನಟನೆಯ ʻಕಾಮನ್‌ ಮ್ಯಾನ್ʼ‌ ಸಿನಿಮಾವು ಇದೇ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಪ್ರಜೆಯೊಬ್ಬ ಮುಖ್ಯಮಂತ್ರಿಯಾದಾಗ ಎದುರಾಗುವ ಸವಾಲುಗಳನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ತಮ್ಮ 106ನೇ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್ ‌

-

Avinash GR
Avinash GR Sep 8, 2026 8:00 PM

ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗೆ ಆಡಳಿತ ನಡೆಸುತ್ತಾನೆ ಮತ್ತು ಆತ ಎದುರಿಸುವ ಸವಾಲುಗಳೇನು ಎಂಬುದನ್ನು ವಿವರಿಸುವ 'ಕಾಮನ್ ಮ್ಯಾನ್' ಚಿತ್ರವು ಇದೇ ತಿಂಗಳ 25ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಎನ್. ನರಸಿಂಹಮೂರ್ತಿ ಅವರು ಈ ಕಥೆಯನ್ನು ಬರೆದು ಸುರಭಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದ ನಾಲ್ಕು ವಿವಿಧ ಶೈಲಿಯ ಹಾಡುಗಳನ್ನು ಚಿತ್ರರಂಗದ ನಾಲ್ವರು ಗಣ್ಯರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ನಟ ವಿನೋದ್ ಪ್ರಭಾಕರ್, ಹಿರಿಯ ನಟ ರಮೇಶ್ ಭಟ್ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಅವರು 4 ಹಾಡುಗಳನ್ನು ರಿಲೀಸ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಎನ್. ನರಸಿಂಹಮೂರ್ತಿ, "ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಆಸೆ ಇದ್ದೇ ಇರುತ್ತದೆ. ಅದೇ ರೀತಿ ಒಬ್ಬ ಸಾಮಾನ್ಯ ಮನುಷ್ಯ ಸಿಎಂ ಆಗಿ ಏನೆಲ್ಲ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ" ಎಂದು ಹೇಳಿದರು.

ನನ್ನ ಕಥೆ ಮುಗಿಯಿತು ಎಂದುಕೊಂಡಿದ್ದೆ

ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಟಿ ಉಮಾಶ್ರೀ, "ಈ ಚಿತ್ರದ ಹೆಸರು 'ಕಾಮನ್ ಮ್ಯಾನ್'. ಇಂಗ್ಲಿಷ್ ಹೆಸರು ಏಕೆ ಎಂದು ಕೆಲವರು ಕೇಳಬಹುದು. ಇಂದು ನಮ್ಮ ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿ ಹೆಸರು ಮಾಡುತ್ತಿರುವಾಗ ಇಂತಹ ಸಾಮಾನ್ಯ (ಕಾಮನ್) ಶೀರ್ಷಿಕೆ ಇಡಲೇಬೇಕಾಗುತ್ತದೆ. ಸಾಯಿಪ್ರಕಾಶ್ ಅವರು ನನ್ನ ಗುರುಗಳಂತೆ; ಈ ಕಾರ್ಯಕ್ರಮಕ್ಕೆ ಅವರು ಕರೆದಾಗ ಇಲ್ಲ ಎನ್ನಲು ಸಾಧ್ಯವಾಗಲಿಲ್ಲ. ಒಂದು ಕಾಲದಲ್ಲಿ ನನ್ನ ಹಾಗೂ ಎನ್.ಎಸ್. ರಾವ್ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ಪ್ರೇಕ್ಷಕರು ನಮ್ಮಿಬ್ಬರನ್ನು ನಿಜವಾದ ಗಂಡ-ಹೆಂಡತಿ ಎಂದೇ ತಿಳಿದುಕೊಂಡಿದ್ದರು. ಅವರು ತೀರಿಕೊಂಡಾಗ ಕೆಲವರು 'ಇನ್ನು ಉಮಾಶ್ರೀ ಕಥೆ ಮುಗಿದೇ ಹೋಯಿತು' ಎಂದೆಲ್ಲ ಮಾತನಾಡಿಕೊಂಡಿದ್ದರು. ಅದೇ ಸಮಯದಲ್ಲಿ ನಾನು ವಿಧವೆಯಾಗಿ ನಟಿಸಿದ್ದ ಚಿತ್ರವೂ ಬಿಡುಗಡೆಯಾಯಿತು. ಅಂತಹ ಸಂಕಷ್ಟದ ಸಂದರ್ಭದಲ್ಲಿ ಸಾಯಿಪ್ರಕಾಶ್ ಅವರು ನನ್ನನ್ನು ಕರೆದು ಅವಕಾಶ ನೀಡಿದರು" ಎಂದು ಸ್ಮರಿಸಿಕೊಂಡರು.

ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ ರಮೇಶ್ ಭಟ್, "ನನಗೆ ಅತ್ಯುತ್ತಮ ಹಾಡನ್ನೇ ನೀಡಿದ್ದಾರೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದನ್ನು ಮಟ್ಟಹಾಕುವುದನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಅವಕಾಶ ಕಲ್ಪಿಸಿದ ಗುರುಗಳಿಗೆ ಧನ್ಯವಾದಗಳು" ಎಂದರು.

ನಂತರ ನಟ ವಿನೋದ್ ಪ್ರಭಾಕರ್ ಮಾತನಾಡಿ, "ನನ್ನ ತಂದೆಯವರ ಜೊತೆ ಕೆಲಸ ಮಾಡಿದ ಎಲ್ಲ ಹಿರಿಯ ಕಲಾವಿದರನ್ನು ಈ ವೇದಿಕೆಯಲ್ಲಿ ಒಟ್ಟಿಗೆ ನೋಡಿ ತುಂಬಾ ಸಂತೋಷವಾಯಿತು" ಎಂದು ಹರ್ಷ ವ್ಯಕ್ತಪಡಿಸಿದರು. ಚಿತ್ರದ ಎಲ್ಲಾ ಹಾಡುಗಳು ಅತ್ಯುತ್ತಮವಾಗಿ ಮೂಡಿಬಂದಿವೆ ಎಂದು ನಟಿ ಪ್ರಿಯಾಂಕಾ ಉಪೇಂದ್ರ ತಿಳಿಸಿದರು. ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೆಹಗಲ್ ಮುಂತಾದ ಖ್ಯಾತ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

‌ʻಬಿಗ್‌ ಬಾಸ್‌ʼ ಕನ್ನಡ 13ರ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಕಾಮನ್‌ ಮ್ಯಾನ್‌ ಕೆಟಗರಿಗೆ ಬಂಪರ್ ಚಾನ್ಸ್!

ಇದು ಓಂ ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರವಾಗಿದ್ದು, ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಸಿಎಂ ಆದರೆ ಏನೆಲ್ಲ ಸುಧಾರಣೆಗಳನ್ನು ತರಬಹುದು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರಂತೆ. ʻಕೆರೆಬೇಟೆʼ ಖ್ಯಾತಿಯ ಗೌರಿಶಂಕರ್ ಚಿತ್ರದ ನಾಯಕನಾಗಿದ್ದು, ಸೋನಾ ಲದ್ವಾ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರ ನಿರ್ವಹಿಸಿದ್ದಾರೆ. ವಿನಯ್ ಚಂದ್ರ ಅವರ ಸಂಗೀತ ನಿರ್ದೇಶನ, ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಅವರ ಛಾಯಾಗ್ರಹಣ ಮತ್ತು ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಗಣೇಶ್ ರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಮೊದಲಾದವರು ನಟಿಸಿದ್ದಾರೆ.