Self Harming: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ಮಾಡೆಲ್; ಕೇಸ್ ಬಗ್ಗೆ ಪೊಲೀಸರು ಹೇಳಿದ್ದೇನು?
ಗುಜರಾತ್ನ (Gujarat) ಸೂರತ್ನಲ್ಲಿ (Surat) 23 ವರ್ಷದ ಯುವ ಮಾಡೆಲ್ ಅಂಜಲಿ ವರ್ಮೋರಾ (Anjali Varmora) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. ಅಥ್ವಾ (Athwa) ಪ್ರದೇಶದ ತನ್ನ ನಿವಾಸದಲ್ಲಿ ಅಂಜಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಸೂರತ್: ಗುಜರಾತ್ನ (Gujarat) ಸೂರತ್ನಲ್ಲಿ (Surat) 23 ವರ್ಷದ ಯುವ ಮಾಡೆಲ್ ಅಂಜಲಿ ವರ್ಮೋರಾ (Anjali Varmora) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. ಅಥ್ವಾ (Athwa) ಪ್ರದೇಶದ ತನ್ನ ನಿವಾಸದಲ್ಲಿ ಅಂಜಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಅಂಜಲಿ ದೀರ್ಘಕಾಲದಿಂದ ಮಾನಸಿಕ ಒತ್ತಡದಲ್ಲಿದ್ದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಕುಟುಂಬದವರನ್ನು ವಿಚಾರಿಸುವುದರ ಜೊತೆಗೆ, ಆಕೆಯ ಮೊಬೈಲ್ ಫೋನ್ನ್ನು ಪರಿಶೀಲಿಸಿ ಸುಳಿವುಗಳನ್ನು ಕಲೆಹಾಕಲು ಪೊಲೀಸರು ಆರಂಭಿಸಿದ್ದಾರೆ. ತನಿಖೆ ಮುಂದುವರಿದಂತೆ ಹೆಚ್ಚಿನ ಆಘಾತಕಾರಿ ಬೆಳವಣಿಗೆಗಳು ಬಯಲಾಗಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಮಧ್ಯಪ್ರದೇಶದ 19 ವರ್ಷದ ಆಕಾಂಕ್ಷಿ ಮಾಡೆಲ್ ಸುಖ್ಪ್ರೀತ್ ಕೌರ್ ಸೂರತ್ನ ಸರೋಲಿ ಪ್ರದೇಶದಲ್ಲಿ ನಿಗುಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಫ್ಯಾಷನ್ ಜಗತ್ತಿನ ಕನಸಿನೊಂದಿಗೆ ಸೂರತ್ಗೆ ಬಂದಿದ್ದ ಸುಖ್ಪ್ರೀತ್, ಮಹೇಂದ್ರ ರಾಜಪೂತ್ ಎಂಬಾತನಿಂದ ಬ್ಲಾಕ್ಮೇಲ್ ಮತ್ತು ಮಾನಸಿಕ ಕಿರುಕುಳಕ್ಕೊಳಗಾಗಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ರಾಜಪೂತ್ ವಿರುದ್ಧ ಸರೋಲಿ ಪೊಲೀಸರು ದಾಳಿ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಗುಜರಾತ್ನಲ್ಲಿ ಆತ್ಮಹತ್ಯೆ ಏರಿಕೆ
ಗುಜರಾತ್ನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ. 2020-21ರಿಂದ 2022-23ರವರೆಗೆ 25,000ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವಿಧಾನಸಭೆಯಲ್ಲಿ ಸಲ್ಲಿಕೆಯಾದ ಅಧಿಕೃತ ದಾಖಲೆಯಲ್ಲಿ ಉಲ್ಲೇಖವಾಗಿವೆ. ಇದರಲ್ಲಿ 2020-21ರಲ್ಲಿ 8,307, 2021-22ರಲ್ಲಿ 8,614, ಮತ್ತು 2022-23ರಲ್ಲಿ 8,557 ಪ್ರಕರಣಗಳು ದಾಖಲಾಗಿವೆ. ಅಹಮದಾಬಾದ್ (3,280), ಸೂರತ್ (2,862) ಮತ್ತು ರಾಜಕೋಟ್ (1,287) ನಗರ ಕೇಂದ್ರಗಳು ಈ ಸಾವುಗಳಲ್ಲಿ ಗಮನಾರ್ಹ ಪಾಲು ಹೊಂದಿವೆ.
ಯುವಜನರಲ್ಲಿ ಮಾನಸಿಕ ಒತ್ತಡ
ಈ ಆತ್ಮಹತ್ಯೆಗಳಲ್ಲಿ 495 ವಿದ್ಯಾರ್ಥಿಗಳಿದ್ದು, ಪುರುಷ ಮತ್ತು ಮಹಿಳೆಯರ ಸಂಖ್ಯೆ ಸರಿಸುಮಾರು ಸಮಾನವಾಗಿದೆ. ಇದು ಯುವಜನರಲ್ಲಿ ಮಾನಸಿಕ ಒತ್ತಡದ ಏರಿಕೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳ ಆತ್ಮಹತ್ಯೆ 2020-21ರ 147ರಿಂದ 2022-23ರಲ್ಲಿ 179ಕ್ಕೆ ಏರಿಕೆಯಾಗಿದೆ. ಪರೀಕ್ಷೆಯ ಒತ್ತಡ, ಶೈಕ್ಷಣಿಕ ವೈಫಲ್ಯ, ಮತ್ತು ಭಾವನಾತ್ಮಕ ಬೆಂಬಲದ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ.