6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಸಲ್ಮಾನ್ ಎಸ್ಕೇಪ್: ಆರೋಪಿ ಬಂಧಿಸುವಲ್ಲಿ ಪೊಲೀಸರು ವಿಫಲ; ವ್ಯಾಪಕ ಆಕ್ರೋಶ
Physical assault: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆರೋಪಿ ಅಪರಾಧ ಸ್ಥಳದಲ್ಲೇ ಪತ್ತೆಯಾಗಿದ್ದರೂ, ಪೊಲೀಸರು ಅವನನ್ನು ಬಂಧಿಸಲು ವಿಫಲರಾಗಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದ್ದು, ಮಕ್ಕಳ ಸುರಕ್ಷತೆ ಮತ್ತು ಪೊಲೀಸರ ಕಾರ್ಯಕ್ಷಮತೆ ಬಗ್ಗೆ ತೀವ್ರ ಅಸಮಾಧಾನವುಂಟು ಮಾಡಿದೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ನ. 27: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಸಲ್ಮಾನ್ ಅಲಿಯಾಸ್ ನಜರ್ ಎಂಬಾತನನ್ನು ಬಂಧಿಸಲು ಪೊಲೀಸರು (Police) ವಿಫಲರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯ ಪ್ರದೇಶದ (Madhya Pradesh) ರಾಯ್ಸನ್ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಅಪರಾಧ ನಡೆದ ಪ್ರದೇಶವಾದ ಗೌಹರ್‌ಗಂಜ್‌ನಲ್ಲಿ ಆ ವ್ಯಕ್ತಿಯನ್ನು ವಿಡಿಯೊದಲ್ಲಿ ಗುರುತಿಸಲಾಗಿದೆ. ಅಪರಾಧ ನಡೆದು 144 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಆರೋಪಿ ಸಲ್ಮಾನ್ ತಲೆ ಮರೆಸಿಕೊಂಡಿದ್ದಾನೆ.
ಆರು ವರ್ಷದ ಬಾಲಕಿಯ ಮೇಲೆ 23 ವರ್ಷದ ಸಲ್ಮಾನ್ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಎರಡು ಪ್ರತ್ಯೇಕ ವಿಡಿಯೊಗಳು ಬಹಿರಂಗಗೊಂಡಿದ್ದವು. ಮೊದಲ ವಿಡಿಯೊದಲ್ಲಿ ಆರೋಪಿಯು ಟ್ರ್ಯಾಕ್ಟರ್ ಚಾಲಕನಿಗೆ ನಿರ್ದೇಶನ ನೀಡಿದ್ದಾನೆ ಎನ್ನಲಾಗಿದ್ದು, ಎರಡನೆಯ ವಿಡಿಯೊದಲ್ಲಿ, ಸ್ಥಳೀಯ ಅಂಗಡಿಯಿಂದ ಸಿಗರೇಟ್ ಖರೀದಿಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ.
ಪೊಲೀಸರು ಈ ದೃಶ್ಯಗಳ ಸತ್ಯಾಸತ್ಯತೆಯನ್ನು ದೃಢಪಡಿಸಿದರು. ಅಪರಾಧ ನಡೆದ ಗೌಹರ್‌ಗಂಜ್ ಸ್ಥಳದಲ್ಲೇ ಆರೋಪಿ ಸಲ್ಮಾನ್ ಕಾಣಿಸಿಕೊಂಡಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯು ಅಪರಾಧ ನಡೆಸಿದ ಸ್ಥಳಕ್ಕೆ ಬಂದರೂ ಕೂಡ ಪೊಲೀಸರು ಆತನನ್ನು ಬಂಧಿಸುವಲ್ಲಿ ವಿಫಲವಾಗಿದ್ದಕ್ಕೆ ಜನರು ಕಿಡಿಕಾರಿದ್ದಾರೆ.
ನವೆಂಬರ್ 21ರಂದು ಆರೋಪಿ ಸಲ್ಮಾನ್ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ. ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಚಾಕೊಲೇಟ್ ಕೊಡಿಸುವುದಾಗಿ ಆಸೆ ತೋರಿಸಿ ಆಕೆಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ.
ಸಂತ್ರಸ್ತೆ ಕಾಣೆಯಾದ ನಂತರ ಹುಡುಕಾಟ ಆರಂಭಿಸಿದ ಆಕೆಯ ಕುಟುಂಬದವರಿಗೆ ಬಾಲಕಿಯು ಅರೆಪ್ರಜ್ಞೆಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆ ಕೊನೆಯ ಬಾರಿಗೆ ಸಲ್ಮಾನ್ ಜತೆ ಕಾಣಿಸಿಕೊಂಡಿದ್ದಾಳೆಂದು ತಿಳಿದುಬಂದಿದೆ. ಕೂಡಲೇ ಬಾಲಕಿಯನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿತು. ನಂತರ ಭೋಪಾಲ್‌ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಗೆ ಬಾಲಕಿಯನ್ನು ಕರೆದೊಯ್ಯಲಾಯಿತು.
ಸಲ್ಮಾನ್ ಹುಡುಕಾಟದಲ್ಲಿ 300ಕ್ಕೂ ಹೆಚ್ಚು ಪೊಲೀಸರು
ಸಲ್ಮಾನ್ ಬಂಧನಕ್ಕೆ 10ರಿಂದ 11 ತಂಡಗಳು ಕೆಲಸ ಮಾಡುತ್ತಿವೆ ಎಂದು ಪೊಲೀಸ್ ಮಹಾನಿರ್ದೇಶಕ (ಐಜಿ) ಮಿಥಿಲೇಶ್ ಕುಮಾರ್ ಶುಕ್ಲಾ ಹೇಳಿದ್ದಾರೆ. ನಮಗೆ ಸುಳಿವು ಸಿಕ್ಕ ಕೂಡಲೇ ನಾವು ಅವನನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಸಾರ್ವಜನಿಕರಿಗೆ ಕೋಪವಿದೆ ಎಂಬುದು ನಿಜ. ಆದರೆ, ನಾವು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
300ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದು, ಸಲ್ಮಾನ್ ಪೋಸ್ಟರ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೈಮಾನಿಕ ಕಣ್ಗಾವಲುಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಆರೋಪಿಯನ್ನು ಹುಡುಕಿ ಕೊಡುವವರಿಗೆ 30,000 ರೂ.ಗಳ ಬಹುಮಾನವನ್ನು ಸಹ ಘೋಷಿಸಲಾಗಿದೆ.
ಆರೋಪಿಯ ಬಂಧನ ವಿಳಂಬದಿಂದಾಗಿ ಗೌಹರ್‌ಗಂಜ್‌ನಲ್ಲಿ ಅಶಾಶ್ವತ ಭದ್ರತಾ ಪರಿಸ್ಥಿತಿ ಉಂಟಾಗಿದೆ. ಅಘೋಷಿತ ಕರ್ಫ್ಯೂ ವಿಧಿಸಲಾಗಿದ್ದು, ರಸ್ತೆಗಳು ನಿರ್ಜನವಾಗಿವೆ. ಆರು ಜಿಲ್ಲೆಗಳ ಪೊಲೀಸ್ ಸಿಬ್ಬಂದಿ, ತ್ವರಿತ ಪ್ರತಿಕ್ರಿಯೆ ಪಡೆ ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿದೆ.
ಘಟನೆ ನಡೆದ ಐದನೇ ದಿನವಾದ ಬುಧವಾರ, ಗೌಹರ್‌ಗಂಜ್ ಶಾಲಾ ಮೈದಾನದಲ್ಲಿ ಸಲ್ಮಾನ್ ಬಂಧನಕ್ಕೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಯಿತು. ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಿದ ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ, ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೋಪಗೊಂಡ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.