ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರ್ಜಿ ವಿಚಾರಣೆ ಮತ್ತೆ, ಮೊದಲು ಶರಣಾಗುವಂತೆ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಆದೇಶ

Tarun Tejpal: ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿರುವ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಎರಡು ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ತಕ್ಷಣ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ನ್ಯಾಯಾಲಯ ಮೊದಲು ಶರಣಾಗುವಂತೆ ಸೂಚಿಸಿದೆ.

2 ವಾರಗಳಲ್ಲಿ ಶರಣಾಗಲು ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಸಂಗ್ರಹ ಚಿತ್ರ -

ನವದೆಹಲಿ: ತೆಹಲ್ಕಾ ಪತ್ರಿಕೆಯ (Tehelka editor) ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ (Tarun Tejpal) ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ತಕ್ಷಣ ನಡೆಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ (Supreme Court) ಮೊದಲು ಶರಣಾಗುವಂತೆ ಆದೇಶಿಸಿದೆ. ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ತರುಣ್ ತೇಜ್‌ಪಾಲ್‌ ಬಾಂಬೆ ಹೈಕೋರ್ಟ್‌ (Bambay high court) ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆಗೂ ಮೊದಲು ಬಂಧನಕ್ಕೆ ಒಳಗಾಗುವಂತೆ ನ್ಯಾಯಾಲಯ ಆದೇಶಿಸಿದೆ.

ಸಹೋದ್ಯೋಗಿಯ ಮೇಲೆ 2013ರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ತರುಣ್ ತೇಜ್‌ಪಾಲ್ ನನ್ನು ಅಪರಾಧಿ ಎಂದು ಘೋಷಿಸಿ ಬಾಂಬೆ ಹೈಕೋರ್ಟ್‌ ಆಗಸ್ಟ್ 6ರಂದು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಂಧನಕ್ಕೆ ಒಳಗಾಗಲು ಎರಡು ವಾರಗಳ ಕಾಲಾವಕಾಶವನ್ನು ಕೂಡ ನೀಡಿತ್ತು. ಈ ನಡುವೆ ಬಾಂಬೆ ಹೈಕೋರ್ಟ್‌ ವಿಧಿಸಿರುವ ಜೈಲು ಶಿಕ್ಷೆಯಿಂದ ಸದ್ಯಕ್ಕೆ ವಿನಾಯಿತಿ ನೀಡುವಂತೆ ತೇಜ್‌ಪಾಲ್‌ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಲು ನಿರಾಕರಿಸಿರುವ ನ್ಯಾಯಾಲಯ ಎರಡು ವಾರಗಳೊಳಗೆ ಶರಣಾಗುವಂತೆ ಸೂಚನೆಯನ್ನು ನೀಡಿದೆ.

ಗಂಡನಿಗೆ ತಿಳಿಸದೆ 12 ಲಕ್ಷ ರೂ ಪೆಟ್ಟಿಗೆಯೊಳಗೆ ಬಚ್ಚಿಟ್ಟಿದ್ದ ಮಹಿಳೆ: ನಗದು ಚೂರಚೂರು ಮಾಡಿದ ಇಲಿಗಳು!

ನ್ಯಾಯಮೂರ್ತಿ ಅಲೋಕ್‌ ಅರಾಧೆ ನೇತೃತ್ವದ ಪೀಠವು ತರುಣ್‌ ತೇಜ್‌ಪಾಲ್‌ ಅವರು ಎರಡು ವಾರಗಳೊಳಗೆ ಶರಣಾಗಬೇಕು. ಅವರ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 22ರಂದು ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಮೊದಲು ಶರಣಾಗತಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ.

ಈ ನಡುವೆ ಪ್ರಕರಣದಲ್ಲಿ ತೇಜ್‌ಪಾಲ್‌ಗೆ ಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿ ಗೋವಾ ಸರ್ಕಾರವು ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಶಿಕ್ಷೆ ವಿಧಿಸುವ ಆದೇಶವನ್ನು ಪ್ರಶ್ನಿಸುವ ಮೊದಲು ಶರಣಾಗುವುದು ಕಡ್ಡಾಯವಾಗಿದೆ. ಹೀಗಾಗಿ ಅದು ತೇಜ್ ಪಾಲ್ ಗೆ ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸೂಚಿಸಿದೆ.

ವಿಚಾರಣೆಯ ಸಮಯದಲ್ಲಿ ಗೋವಾ ಸರ್ಕಾರದ ಪರವಾಗಿ ತುಷಾರ್ ಮೆಹ್ತಾ ಅವರು ತೇಜ್‌ಪಾಲ್ ಮೊದಲು ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸಿದರೆ ಮಾತ್ರ ಅವರ ಮೇಲ್ಮನವಿಯನ್ನು ಆಲಿಸಬಹುದು ಎಂದು ಹೇಳಿದರು. ಇದನ್ನು ವಿರೋಧಿಸಿದ ತೇಜ್‌ಪಾಲ್ ಪರ ವಕೀಲ ಕಪಿಲ್ ಸಿಬಲ್, ಬಾಂಬೆ ಹೈಕೋರ್ಟ್ ಈಗಾಗಲೇ ತೇಜ್‌ಪಾಲ್ ಅವರ ಶಿಕ್ಷೆಗೆ ತಡೆ ನೀಡಿದೆ ಎಂದು ವಾದಿಸಿ ಅವರನ್ನು ಮತ್ತೆ ಶರಣಾಗುವಂತೆ ಕೇಳುವುದು ಸರಿಯಲ್ಲ ಎಂದರು.

ಮತ್ತೆ ಪೆರೋಲ್‌ನಲ್ಲಿ ಜೈಲಿನಿಂದ ಹೊರಗೆ ಬಂದ ಗುರುಮೀತ್ ರಾಮ್ ರಹೀಮ್‌; ಅತ್ಯಾಚಾರ ಆರೋಪಿಗೆ ವಿಐಪಿ ಟ್ರೀಟ್‌ಮೆಂಟ್‌?

ಏನಿದು ಪ್ರಕರಣ?

ಪಣಜಿಯಲ್ಲಿ 2013 ರ ನವೆಂಬರ್ 7 ಮತ್ತು 8 ರಂದು ನಡೆದ ಅಧಿಕೃತ ಕಾರ್ಯಕ್ರಮದ ವೇಳೆ ತೇಜ್‌ಪಾಲ್ ಅವರು ಹೋಟೆಲ್ ಲಿಫ್ಟ್‌ನಲ್ಲಿ ತಮ್ಮ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು 2013ರಲ್ಲಿ ಬಂಧಿಸಲಾಗಿತ್ತು.

ಈ ಕುರಿತು 2021ರಲ್ಲಿ ವಿಚಾರಣೆ ನಡೆಸಿದ ಗೋವಾ ಸೆಷನ್ಸ್ ನ್ಯಾಯಾಲಯವು ತೇಜ್‌ಪಾಲ್ ವಿರುದ್ಧ ಯಾವುದೇ ಸರಿಯಾದ ಸಾಕ್ಷ್ಯವಿಲ್ಲ ಎಂದು ಹೇಳಿ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರವು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದು, ಕಳೆದ ಆಗಸ್ಟ್ 6ರಂದು ನ್ಯಾಯಾಲಯವು ಗೋವಾ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು