23 ಕಾಶ್ಮೀರಿ ಪಂಡಿತರ ಹತ್ಯಾಕಾಂಡ: 28 ವರ್ಷಗಳ ಬಳಿಕ ಕೇಸ್ ರೀ ಓಪನ್, ಮರು ತನಿಖೆಗೆ ಆದೇಶ
Kashmir massacre: 23 ಕಾಶ್ಮೀರಿ ಪಂಡಿತರ ಹತ್ಯೆಗೆ ಕಾರಣವಾದ ಸರ್ವನಾದ್ ಪ್ರೇಮಿ ಕೌಲ್, ಟಿಕಾ ಲಾಲ್ ಟ್ಯಾಪ್ಲೂ ಮತ್ತು 1998 ರ ವಂಧಮಾ ಹತ್ಯಾಕಾಂಡದ ಬಗ್ಗೆ ಎಸ್‌ಐಎ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಲಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಹತ್ಯೆಗಳ ಪ್ರಕರಣಗಳ ತನಿಖೆಯನ್ನು ಮುಂದುವರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ -
ಶ್ರೀನಗರ, ಆ.25: ಮಧ್ಯ ಕಾಶ್ಮೀರದ ಗಂದರ್ಬಾಲ್‌ನಲ್ಲಿ ಭಯೋತ್ಪಾದಕರು 23 ಕಾಶ್ಮೀರಿ ಹಿಂದೂಗಳನ್ನು ಗುಂಡಿಕ್ಕಿ ಹತ್ಯೆ (Kashmir massacre) ಮಾಡಿದ್ದ 28 ವರ್ಷಗಳ ನಂತರ, ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜ್ಯ ತನಿಖಾ ಸಂಸ್ಥೆಯು (SIA) ವಾಂಧಮಾ ಹತ್ಯಾಕಾಂಡದ ಪ್ರಕರಣದ ವಿಚಾರಣೆಗೆ ಮತ್ತೆ ಆದೇಶ ದೊರಕಿದೆ. ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗ ನಡೆದ, ದೀರ್ಘಕಾಲದಿಂದ ಬಾಕಿ ಉಳಿದಿರುವ ಹತ್ಯೆಗಳ ಪ್ರಕರಣಗಳ ತನಿಖೆಯನ್ನು ಮುಂದುವರಿಸಲು ಈ ಕ್ರಮ ಕೈಗೊಳ್ಳಲಾಗಿದೆ. 23 ಕಾಶ್ಮೀರಿ ಪಂಡಿತರ ಹತ್ಯೆಗೆ ಕಾರಣವಾದ ಸರ್ವನಾದ್ ಪ್ರೇಮಿ ಕೌಲ್, ಟಿಕಾ ಲಾಲ್ ಟ್ಯಾಪ್ಲೂ ಮತ್ತು 1998 ರ ವಂಧಮಾ ಹತ್ಯಾಕಾಂಡದ ಬಗ್ಗೆ ಎಸ್‌ಐಎ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಲಾಗಿದೆ.
ಜನವರಿ 1998 ರಲ್ಲಿ, ವಂಧಮಾ ಗ್ರಾಮದಲ್ಲಿ ನಾಲ್ಕು ಕುಟುಂಬಗಳ 23 ಕಾಶ್ಮೀರಿ ಪಂಡಿತರನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದರು. 14 ವರ್ಷದ ಬಾಲಕ ಮಾತ್ರ ಬದುಕುಳಿದಿದ್ದ. 1990 ರಲ್ಲಿ ಕಾಶ್ಮೀರಿ ಪಂಡಿತ್ ಬರಹಗಾರ ಮತ್ತು ಸಮಾಜ ಸೇವಕ ಸರ್ವಾನಂದ್ ಕೌಲ್ ಪ್ರೇಮಿ ಹಾಗೂ ಅವರ 24 ವರ್ಷದ ಮಗ ವೀರೇಂದ್ರ ಕೌಲ್ ಅವರ ಹತ್ಯೆಯನ್ನು ಎಸ್‌ಐಎ ಮತ್ತೆ ತೆರೆದಿದೆ.
ಆಗಸ್ಟ್ 12 ರಂದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಎ ಜಮ್ಮು ಮತ್ತು ಕಾಶ್ಮೀರದಾದ್ಯಂತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು. ಮತ್ತೊಂದು ಪ್ರಮುಖ ಪ್ರಕರಣದಲ್ಲಿ, 1990 ರ ಕಾಶ್ಮೀರಿ ಪಂಡಿತ್ ದಾದಿ ಸರಳಾ ಭಟ್ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೂನ್ 29 ರಂದು ಎಸ್ಐಎ ಚಾರ್ಜ್ ಶೀಟ್ ಸಲ್ಲಿಸಿದ್ದು, ಜೆಕೆಎಲ್ಎಫ್ ಮುಖ್ಯಸ್ಥ ಮೊಹಮ್ಮದ್ ಯಾಸಿನ್ ಮಲಿಕ್ ಮತ್ತು ಖುರ್ಷಿದ್ ಅಹ್ಮದ್ ಚಲ್ಕೂ ಅವರನ್ನು ಮಾಸ್ಟರ್ ಮೈಂಡ್‌ಗಳೆಂದು ಹೆಸರಿಸಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದ ಉಗ್ರಗಾಮಿ ಚಟುವಟಿಕೆಗಳ ಸಮಯದಲ್ಲಿ ಮೃತಪಟ್ಟ ಕುಟುಂಬಗಳಿಗೆ ನ್ಯಾಯ ಸಿಗದ ಪ್ರಕರಣಗಳನ್ನು ಮತ್ತೆ ತೆರೆಯಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೂನ್ 29, 2025 ರಂದು ಘೋಷಿಸಿದ್ದರು. ಜುಲೈ 1 ರಂದು, ಅಂತಹ ಪ್ರಕರಣಗಳನ್ನು ಮತ್ತೆ ತೆರೆಯಲು, ಎಫ್‌ಐಆರ್‌ಗಳನ್ನು ನೋಂದಾಯಿಸಲು ಮತ್ತು ಆದ್ಯತೆಯ ಮೇಲೆ ಹತ್ತಿರದ ಸಂಬಂಧಿಕರಿಗೆ ಉದ್ಯೋಗ ನೀಡಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
1989 ರಲ್ಲಿ ನ್ಯಾಯಾಧೀಶ ನೀಲ್ ಕಾಂತ್ ಗಂಜೂ ಅವರ ಹತ್ಯೆಯಲ್ಲಿ ಎಸ್‌ಐಎ ಸಾರ್ವಜನಿಕರ ಸಹಾಯವನ್ನು ಕೋರಿದೆ. 1990 ರಲ್ಲಿ ಮಿರ್ವೈಜ್ ಮೊಲ್ವಿ ಫಾರೂಕ್ ಅವರ ಹತ್ಯೆಯಲ್ಲಿ ಆರೋಪಿಗಳಾಗಿ ಪರಾರಿಯಾಗಿದ್ದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಅಪರಾಧಿಗಳು ತಲೆಮರೆಸಿಕೊಂಡಿರುವ ಹಲವಾರು ಹಳೆಯ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.