ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಠಾರಿ ಹತ್ಯಾಕಾಂಡ ಕೇಸ್‌; ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ ಹರಿದ್ವಾರದಲ್ಲಿ ಆತ್ಮಹತ್ಯೆಗೆ ಶರಣು

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 2006 ರಲ್ಲಿ ನಡೆದಿದ್ದ ನಿಠಾರಿ ಸರಣಿ ಹತ್ಯಾಕಾಂಡದ ಆರೋಪಿಯಾಗಿ, ನಂತರ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ ಹರಿದ್ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ತನಿಖೆ ನಡೆಯುತ್ತಿದೆ.

ನಿಠಾರಿ ಹತ್ಯಾಕಾಂಡ ಕೇಸ್‌; ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ ಆತ್ಮಹತ್ಯೆ

ನಿಠಾರಿ ಹತ್ಯಾಕಾಂಡ ಕೇಸ್‌ನಲ್ಲಿ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ -

Vishakha Bhat Heggar
Vishakha Bhat Heggar Sep 18, 2026 3:33 PM

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 2006 ರಲ್ಲಿ ನಡೆದಿದ್ದ ನಿಠಾರಿ ಸರಣಿ ಹತ್ಯಾಕಾಂಡದ ಆರೋಪಿಯಾಗಿ, ನಂತರ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ (Surendra Koli) ಹರಿದ್ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಶುಕ್ರವಾರ ನಗರದ ಉತ್ತರ ಭಾಗದಲ್ಲಿರುವ ಲಾಲ್ ಮಾತಾ ದೇವಸ್ಥಾನದ ಎದುರಿನ ಸಪ್ತ್ ಸರೋವರ ರಸ್ತೆಯಲ್ಲಿರುವ ಟೀ ಸ್ಟಾಲ್‌ನಲ್ಲಿ ಕೋಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿಯ ಒಳಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ ಬಾಡಿಗೆ ಚಹಾ ಅಂಗಡಿಯನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಅಲ್ಮೋರಾದಲ್ಲಿರುವ ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿರುವ ಹರಿದ್ವಾರ ಪೊಲೀಸರು, ಕೋಲಿಯ ಆತ್ಮಹತ್ಯೆಗೆ ಕೌಟುಂಬಿಕ ಕಲಹಗಳೇ ಪ್ರಮುಖ ಕಾರಣ ಇರಬಹುದು ಎಂದು ಶಂಕಿಸಿದ್ದಾರೆ.

ಸುಮಾರು 19 ವರ್ಷಗಳ ಕಾಲ ಜೈಲಿನಲ್ಲಿದ್ದ ಕೋಲಿ, ನವೆಂಬರ್ 2025 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಸಂಪೂರ್ಣವಾಗಿ ಖುಲಾಸೆಗೊಂಡು ಹೊರಬಂದಿದ್ದನು. ಜೈಲಿನಿಂದ ಬಿಡುಗಡೆಯಾದ ನಂತರ ಆತನ ಕುಟುಂಬಸ್ಥರು ದೂರವಾಗಿದ್ದರು. ಹೀಗಾಗಿ ಉತ್ತರಾಖಂಡದ ಅಲ್ಮೋರಾ ಮೂಲದ ಆತ, ಕಳೆದ ಕೆಲವು ತಿಂಗಳುಗಳಿಂದ ಹರಿದ್ವಾರದಲ್ಲಿ ಏಕಾಂಗಿಯಾಗಿ ಚಹಾ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದನು.

ಏನಿದು ನಿಠಾರಿ ಸರಣಿ ಹತ್ಯಾಕಾಂಡ ಕೇಸ್‌?

ನಿಠಾರಿ ಸರಣಿ ಹತ್ಯಾಕಾಂಡವು ಭಾರತದ ಅಪರಾಧ ಇತಿಹಾಸದಲ್ಲೇ ಅತ್ಯಂತ ಕ್ರೂರ ಮತ್ತು ದೇಶವನ್ನೇ ನಡುಗಿಸಿದ ಸರಣಿ ಕೊಲೆಗಳ ಪ್ರಕರಣವಾಗಿದೆ. 2005 ರಿಂದ 2006 ರ ಅವಧಿಯಲ್ಲಿ ಉತ್ತರ ಪ್ರದೇಶದ ನೋಯ್ಡಾದ ನಿಠಾರಿ ಗ್ರಾಮದಲ್ಲಿ ಈ ಘಟನೆಗಳು ನಡೆದಿದ್ದವು. ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಆತನ ಮನೆಗೆಲಸದವನಾದ ಸುರೇಂದ್ರ ಕೋಲಿ ಈ ಭೀಕರ ಹತ್ಯಾಕಾಂಡದ ಪ್ರಮುಖ ಆರೋಪಿಗಳಾಗಿದ್ದರು.

ಮಕ್ಕಳಿಗೆ ಚಾಕೊಲೇಟ್ ಮತ್ತು ಸಿಹಿತಿಂಡಿಗಳ ಆಮಿಷ ಒಡ್ಡಿ ಮನೆಗೆ ಕರೆತರುತ್ತಿದ್ದ ಸುರೇಂದ್ರ ಕೋಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ, ದೇಹದ ಭಾಗಗಳನ್ನು ಕತ್ತರಿಸಿ ಚರಂಡಿಗೆ ಎಸೆಯುತ್ತಿದ್ದ. ಈ ಘಟನೆಯಲ್ಲಿ ಅತ್ಯಾಚಾರ, ಕೊಲೆ ಮಾತ್ರವಲ್ಲದೆ ನರಭಕ್ಷಣೆ ಮತ್ತು ಶವ ಕಾಮದಂತಹ ಅತ್ಯಂತ ವಿಕೃತ ಆರೋಪಗಳು ಕೇಳಿಬಂದಿದ್ದವು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ನಿಠಾರಿ ಗ್ರಾಮದ ಬಡ ಕುಟುಂಬಗಳ ಹಲವು ಸಣ್ಣ ಮಕ್ಕಳು ಮತ್ತು ಯುವತಿಯರು ನಿರಂತರವಾಗಿ ನಾಪತ್ತೆಯಾಗುತ್ತಿದ್ದರು. ಪೊಲೀಸರು ಈ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯ ವಹಿಸಿದ್ದರು. ಆದರೆ, ಡಿಸೆಂಬರ್ 2006 ರಲ್ಲಿ ಪಂಧೇರ್‌ನ 'ಡಿ-5 ಕೋಠಿ' ನಿವಾಸದ ಮುಂಭಾಗದ ಚರಂಡಿ ಹಾಗೂ ಆವರಣದಲ್ಲಿ ಮಾನವ ಮೂಳೆಗಳು, ತಲೆಬುರುಡೆಗಳು ಮತ್ತು ಬಟ್ಟೆಗಳು ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಆರಂಭದಲ್ಲಿ ಸಿಬಿಐ (CBI) ವಿಶೇಷ ನ್ಯಾಯಾಲಯವು ಮೊನೀಂದರ್ ಸಿಂಗ್ ಪಂಧೇರ್‌ ಮತ್ತು ಆತನ ಅಡುಗೆ ಕೆಲಸಗಾರನಾಗಿದ್ದ ಸುರೇಂದ್ರ ಕೋಲಿಗೆ ರ ಮರಣದಂಡನೆ ವಿಧಿಸಿತ್ತು. ಆದರೆ ತನಿಖೆಯಲ್ಲಿನ ಲೋಪದೋಷಗಳು ಮತ್ತು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ 2023 ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿತು. ಸುಪ್ರೀಂ ಕೋರ್ಟ್ ಸಹ ಸುರೇಂದ್ರ ಕೋಲಿ ವಿರುದ್ಧದ ಕೊನೆಯ ಪ್ರಕರಣದಲ್ಲೂ ಆತನನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೆ ಆದೇಶಿಸಿತ್ತು. ಇದೀಗ ಕೋಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.