ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹದಿಹರೆಯದ ಬಾಲಕಿಯನ್ನು ಅಪಹರಿಸಿ, ಸ್ನೇಹಿತನಿಂದಲೇ ಅತ್ಯಾಚಾರ: ಪ್ರಕರಣ ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದ್ದು ಫುಡ್ ಡೆಲಿವರಿ ಆರ್ಡರ್

Crime News: ಹದಿಹರೆಯದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೇ ಅಪಹರಿಸಿ, ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಕೆಲವು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಹದಿಹರೆಯದ ಬಾಲಕಿಯನ್ನು ಅಪಹರಿಸಿ, ಸ್ನೇಹಿತನಿಂದಲೇ ಅತ್ಯಾಚಾರ

ಸಾಂದರ್ಭಿಕ ಚಿತ್ರ -

Priyanka P
Priyanka P Aug 6, 2026 3:54 PM

ಮುಂಬೈ, ಆ. 6: ಹದಿಹರೆಯದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೇ ಅಪಹರಿಸಿ, ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpur) ನಡೆದಿದೆ. ಹಿರಿಯ ಅಧಿಕಾರಿಯೊಬ್ಬರ ಪುತ್ರಿಯಾದ 12ನೇ ತರಗತಿಯ ವಿದ್ಯಾರ್ಥಿನಿಯನ್ನು, ಇನ್‌ಸ್ಟಾಗ್ರಾಮ್‌ ಸ್ನೇಹಿತನಾಗಿರುವ 20 ವರ್ಷದ ಯುವಕ ಅಪಹರಿಸಿ, ಅತ್ಯಾಚಾರ ಮಾಡಿದ್ದಲ್ಲದೆ, ಎರಡು ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ (Crime News).

16 ವರ್ಷದ ಬಾಲಕಿ ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಕೆಲವು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದಳು. ಸ್ನೇಹಿತರ ದಿನದಂದು 16 ವರ್ಷದ ಬಾಲಕಿ ತನ್ನ ಸ್ನೇಹಿತೆಯೊಂದಿಗೆ ಮಾಲ್‌ಗೆ ಹೋಗುತ್ತಿರುವುದಾಗಿ ತನ್ನ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಟಿದ್ದಳು. ಆದರೆ ಅವಳು ಹಿಂತಿರುಗದಿದ್ದಾಗ, ಆಕೆಯ ಕುಟುಂಬವು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಹುಡುಗಿ ಯಾವುದೇ ಸ್ನೇಹಿತೆಯರನ್ನು ಭೇಟಿಯಾಗಿಲ್ಲ ಎಂದು ತಿಳಿದ ನಂತರ, ಆಕೆಯ ಕುಟುಂಬವು ಪೊಲೀಸ್ ದೂರು ದಾಖಲಿಸಿತು.

ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದು ಹೇಗೆ?

ಪೊಲೀಸರು ಬಾಲಕಿಯ ಕರೆ ವಿವರ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿಯ ಮೇಲೆ ಅನುಮಾನ ಮೂಡಿತು. ತನಿಖೆಯಲ್ಲಿ ಆ ವ್ಯಕ್ತಿಯನ್ನು ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಖ್ರೆ ಎಂದು ಗುರುತಿಸಲಾಗಿದ್ದು, ಮಹಾರಾಷ್ಟ್ರದ ಥಾಣೆ ನಿವಾಸಿ. ಈತ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಓದುತ್ತಿದ್ದ. ನಾಗ್ಪುರದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ. ಆತನ ತಾಯಿ ಪ್ರಸಿದ್ಧ ವೈದ್ಯೆಯೂ ಹೌದು. ನಾಪತ್ತೆಯಾದ ಬಾಲಕಿ ಆತನ ಮನೆಯಲ್ಲಿರುವ ಅನುಮಾನ ಮೂಡಿತು.

ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ ಅಪರಾಧಿ ಎಂದು ಘೋಷಿಸಿದ ಬಾಂಬೆ ಹೈಕೋರ್ಟ್‌

ಥಾಣೆ ಪೊಲೀಸ್‌ ಅಧಿಕಾರಿಗಳು ಆರೋಪಿಯ ಮನೆಗೆ ತೆರಳಿ ಅವನ ತಾಯಿಗೆ ಮಗನಿಗೆ ಕರೆ ಮಾಡಲು ಹೇಳಿದರು. ಈ ಕರೆ ಪೊಲೀಸರಿಗೆ ಆತನ ಸ್ಥಳದ ಮಾಹಿತಿ ದೊರೆಯಿತು. ಸ್ವಲ್ಪ ಸಮಯದ ನಂತರ, ಆರೋಪಿಯು ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದ್ದಾನೆ. ವಿಳಾಸವನ್ನು ದೃಢೀಕರಿಸುವ ಸಲುವಾಗಿ ಪೊಲೀಸರು ಡೆಲಿವರಿ ಬಾಯ್‌ನೊಂದಿಗೆ ಅವನ ಮನೆಗೆ ಹೋಗಿದ್ದಾರೆ. ನಂತರ ನಾಗ್ಪುರ ಪೊಲೀಸರು ಬಾಲಕಿಯನ್ನು ರಕ್ಷಿಸಿದರು.

ಪೊಲೀಸರು, ಸಂತ್ರಸ್ತೆಯನ್ನು ಬಂಧಿಸಿದ್ದ ರೂಮ್‌ನ ಬಾಗಿಲನ್ನು ಒಡೆದು ಒಳಗೆ ನೋಡಿದಾಗ, ಆಕೆ ಗಾಯಗೊಂಡು, ಬೆತ್ತಲೆಯಾಗಿ, ಹಾಸಿಗೆಗೆ ಕಟ್ಟಿ ಹಾಕಲ್ಪಟ್ಟಿದ್ದು ಕಂಡುಬಂತು. ಈ ವೇಳೆ ಆರೋಪಿ ಚಾಕು ಹಿಡಿದುಕೊಂಡಿದ್ದ. ಬಾಲಕಿಯ ದೇಹದ ಮೇಲೆ ಕಡಿತ ಮತ್ತು ಇರಿತದ ಗಾಯಗಳಿದ್ದವು, ಆಕೆಯ ಕೈಗೂ ತೀವ್ರ ಗಾಯವಾಗಿತ್ತು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದರು. ಪೊಲೀಸರು ತೆರಳುವುದು ಇನ್ನೂ ಸ್ವಲ್ಪ ತಡವಾಗಿದ್ದರೆ, ಅವನು ಆಕೆಯನ್ನು ಕೊಲೆ ಮಾಡುವ ಅಪಾಯವಿತ್ತು.

ಆರೋಪಿಯು ಬಾಲಕಿಯ ಅಶ್ಲೀಲ ಫೋಟೋಗಳನ್ನು ತೆಗೆದು ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆಕೆಯ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಹೇಳಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕೊಲೆಯತ್ನ ಸೇರಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚುವರಿ ಶಂಕಿತರು ಇದ್ದಾರೆಯೇ ಅಥವಾ ಆರೋಪಿಯು ಇತರ ಯಾವುದೇ ಹುಡುಗಿಯರ ಮೇಲೆ ಇದೇ ರೀತಿಯ ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ಎಸಗಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.