ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಜುಗರ; ಟಿವಿಕೆ ಮುಖಂಡನ ವಿರುದ್ಧ ಕೇಳಿಬಂತು ಲೈಂಗಿಕ ಕಿರುಕುಳ ಆರೋಪ
Tamilaga Vettri Kazhagam: ತಮಿಳುನಾಡಿನ ಕರೂರ್ ಜಿಲ್ಲೆಯ ಟಿವಿಕೆ ಪಕ್ಷದ ಮುಖಂಡ ರಮೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. 25 ವರ್ಷದ ವಿವಾಹಿತ ಮಹಿಳೆ ದೂರು ನೀಡಿ, ಮೂರು ತಿಂಗಳಿನಿಂದ ನಿರಂತರ ದೌರ್ಜನ್ಯ ಎಸಗಿದ್ದಲ್ಲೆ ಅಪಹರಿಸಲು ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಟಿವಿಕೆ ಪಕ್ಷದ ಮುಖಂಡ ರಮೇಶ್ (ಸಂಗ್ರಹ ಚಿತ್ರ) -
ಚೆನ್ನೈ, ಜು. 14: ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತ್ತಲೈ ಪ್ರದೇಶದಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖಂಡನ ವಿರುದ್ಧ ವಿವಾಹಿತ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಹಾಗೂ ಅಪಹರಣ ಯತ್ನದ ಆರೋಪ ಮಾಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 25 ವರ್ಷದ ಮಹಿಳೆ ನೀಡಿದ ದೂರಿನ ಪ್ರಕಾರ, ಕೃಷ್ಣರಾಯಪುರಂ ಪೂರ್ವ ಘಟಕದ ಕಾರ್ಯದರ್ಶಿ ರಮೇಶ್ ಕಳೆದ ಮೂರು ತಿಂಗಳಿನಿಂದ ತಾನು ಕೆಲಸ ಮಾಡುತ್ತಿದ್ದ ಮೆಡಿಕಲ್ ಅಂಗಡಿಯ ಬಳಿ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ. ಅಶ್ಲೀಲ ಮಾತುಗಳು, ಸನ್ನೆಗಳು ಮಾಡುತ್ತಿದ್ದಲ್ಲದೆ ಮನೆಗೆ ತೆರಳುವಾಗ ಹಿಂಬಾಲಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದ ಬಳಿಕ ಎರಡು ತಿಂಗಳಿಂದ ಮಹಿಳೆಯ ಪತಿ ಪ್ರತಿದಿನ ಕೆಲಸಕ್ಕೆ ಕರೆದುಕೊಂಡು ಹೋಗಿ ಮರಳಿ ಮನೆಗೆ ಕರೆತರುತ್ತಿದ್ದರು. ಘಟನೆಯ ದಿನ ಮಹಿಳೆಯ ಪತಿಗೆ ಬರಲು ಸಾಧ್ಯವಾಗದ ಕಾರಣ ಆಕೆಯ ತಂಗಿ ಕರೆತರಲು ಬಂದಿದ್ದರು. ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರಮೇಶ್ ರಸ್ತೆಯಲ್ಲೇ ಮಹಿಳೆಯನ್ನು ತಡೆದು ಅಪಹರಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿದ ಬಳಿಕ ಸ್ಥಳಕ್ಕೆ ಬಂದ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸೇರಿ ರಮೇಶ್‌ಗೆ ಥಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ರಮೇಶ್‌ನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು.
ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ
ಮಹಿಳೆಯ ಕುಟುಂಬದವರು, ಟಿವಿಕೆ ಮುಖಂಡನನ್ನು ರಕ್ಷಿಸಲು ಪೊಲೀಸರು ಪ್ರಕರಣವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಪೊಲೀಸರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ರಮೇಶ್ ಕುಳಿತ್ತಲೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ತನಿಖೆಯ ವರದಿ ಆಧರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಡಿಎಂಕೆ ಸಂಸದೆ ಕನಿಮೊಳಿ ಈ ಪ್ರಕರಣವನ್ನು ಉಲ್ಲೇಖಿಸಿ ತಮಿಳುನಾಡಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆ ಎತ್ತಿದ್ದು, ಮಹಿಳೆಯ ದೂರಿನ ನಂತರವೂ ತಕ್ಷಣ ಕ್ರಮ ಕೈಗೊಳ್ಳದಿರುವುದನ್ನು ಟೀಕಿಸಿ, ಆರೋಪಿಯ ವಿರುದ್ಧ ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.