Crime News: ಇನ್‌ಸ್ಟಾಗ್ರಾಂನಲ್ಲಿ ಲವ್ವಿ-ಡವ್ವಿ; ಫಿಲ್ಟರ್ ಬಳಸಿ ವಯಸ್ಸು ಮುಚ್ಚಿಟ್ಟ ಮಹಿಳೆ- ಕೊನೆಗೆ ಪ್ರಿಯಕರನಿಂದಲೇ ಕೊಲೆಯಾದ್ಳು
ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಗೆಳತನವಾಗಿ, ಸ್ನೇಹ ಪ್ರೀತಿಯಾಗಿ ಹೋದ ಕೆಲವರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಇಂತಹ ಪ್ರಕರಣಗಳಲ್ಲಿ ರಕ್ತಪಾತವೂ ನಡೆದಿದ್ದು, ಈ ಸೋಷಿಯಲ್ ಮೀಡಿಯಾ ಮೂಲಕ ಕಿರುಕುಳ ನೀಡುವುದು ಕೂಡ ಜಾಸ್ತಿಯಾಗುತ್ತಿದೆ. ಇದೀಗ ಇಂತದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ 52 ವರ್ಷದ ಮಹಿಳೆಯೋರ್ವರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

ಹತ್ಯೆಗೀಡಾದ ಮಹಿಳೆ -

ಫರೂಕಾಬಾದ್: ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್ (Farrukhabad) ಜಿಲ್ಲೆಯಲ್ಲಿ ಆಗಸ್ಟ್ 11ರಂದು ಅಪರಿಚಿತ ಮಹಿಳೆಯ ಶವ ಕಂಡುಬಂದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆ ಮಹಿಳೆಯನ್ನು 52 ವರ್ಷದ ರಾಣಿ ಎಂದು ಗುರುತಿಸಲಾಗಿದ್ದು, ಆಕೆಯ 26 ವರ್ಷದ ಪ್ರಿಯಕರ ಅರುಣ್ ರಾಜಪೂತ್ (Arun Rajput) ಸ್ಕಾರ್ಫ್‌ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈನ್‌ಪುರಿಯ ನಿವಾಸಿಯಾದ ರಾಜಪೂತ್‌ನನ್ನು ಕಾಲ್ ರೆಕಾರ್ಡ್ ಮತ್ತು ಸೋಷಿಯಲ್ ಮೀಡಿಯಾ ಸಂಭಾಷಣೆಯ ಆಧಾರದಲ್ಲಿ ಬಂಧಿಸಲಾಗಿದೆ. ಆತನಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ರಾಣಿ ಮತ್ತು ರಾಜಪೂತ್ ಸುಮಾರು ಒಂದೂವರೆ ವರ್ಷದ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಭೇಟಿಯಾಗಿದ್ದರು. ರಾಣಿ ತನ್ನ ವಯಸ್ಸನ್ನು ಮರೆಮಾಚಲು ಫಿಲ್ಟರ್‌ಗಳನ್ನು ಬಳಸಿದ್ದರಿಂದ, ಆಕೆ ಚಿಕ್ಕವಳೆಂದು ರಾಜಪೂತ್ ಭಾವಿಸಿದ್ದ. ಆನ್‌ಲೈನ್ ಸಂಭಾಷಣೆ ಪ್ರೇಮ ಸಂಬಂಧಕ್ಕೆ ತಿರುಗಿದೆ. ಇಬ್ಬರೂ ಫರೂಕಾಬಾದ್‌ನ ಹೋಟೆಲ್‌ಗಳಲ್ಲಿ ಭೇಟಿಯಾಗುತ್ತಿದ್ದರು. ನಾಲ್ಕು ಮಕ್ಕಳ ತಾಯಿಯಾಗಿದ್ದ ರಾಣಿ, ರಾಜಪೂತ್‌ಗೆ 1.5 ಲಕ್ಷ ರೂ. ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Crime News: ಹೆಂಡ್ತಿ ರೀಲ್ಸ್ ಹುಚ್ಚಾಟ ತಡೆಯಲಾಗದೇ ಹೊಡೆದು ಕೊಂದ ಗಂಡ
ಕಾಲ ಕಳೆದಂತೆ ರಾಣಿ ಮದುವೆಗೆ ಒತ್ತಾಯಿಸಿದ್ದು, ಜೊತೆಗೆ ತನ್ನ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಳು. ಆಗಸ್ಟ್ 10ರಂದು, ಅರುಣ್ ಆಕೆಯನ್ನು ಮೈನ್‌ಪುರಿಗೆ ಕರೆದಿದ್ದ. ರಾಣಿ ಮತ್ತೆ ಮದುವೆ ಮತ್ತು ಹಣದ ವಿಷಯವನ್ನು ಎತ್ತಿದಾಗ, ಕೋಪಗೊಂಡ ರಾಜಪೂತ್ ಆಕೆಯ ಕುತ್ತಿಗೆ ಬಿಗಿದುಕೊಂದು ಪರಾರಿಯಾಗಿದ್ದ ಎಂದು ನಗರ ಪೊಲೀಸ್ ಮುಖ್ಯಸ್ಥ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಆರಂಭದಲ್ಲಿ ಶವದ ಗುರುತು ಪತ್ತೆಯಾಗದಿದ್ದರಿಂದ, ಪೊಲೀಸರು ಫೋಟೊಗಳನ್ನು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಂಚಿದ್ದರು. ಫರೂಕಾಬಾದ್‌ನ ಕಾಣೆಯಾದ ಬಗ್ಗೆ ದಾಖಲಾಗಿದ್ದ ದೂರಿನೊಂದಿಗೆ ಶವದ ಗುರುತು ಖಚಿತವಾಯಿತು. ವಿಚಾರಣೆಯಲ್ಲಿ, ರಾಣಿ ಪೊಲೀಸರಿಗೆ ದೂರು ನೀಡಬಹುದು ಅಥವಾ ತನ್ನ ಕುಟುಂಬಕ್ಕೆ ತಿಳಿಸಬಹುದು ಎಂಬ ಭಯದಿಂದ ಕೊಲೆ ಮಾಡಿದ್ದಾಗಿ ರಾಜಪೂತ್ ಒಪ್ಪಿಕೊಂಡಿದ್ದಾನೆ. ಇವರು ಪ್ರತಿದಿನ ಮಾತನಾಡುತ್ತಿದ್ದ ಫೋನ್‌ಗಳಲ್ಲಿ ಫೋಟೊಗಳು ಮತ್ತು ಚಾಟ್‌ಗಳು ಕಂಡುಬಂದಿವೆ. ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.