Meerut Murder Case: "ಅಪ್ಪ ಡ್ರಮ್‌ನೊಳಗಿದ್ದಾರೆ," ಎಂದು ನೆರೆಹೊರೆಯವರಿಗೆ ಹೇಳಿದ್ದ ಮೃತ ಮರ್ಚೆಂಟ್ ನೇವಿ ಅಧಿಕಾರಿಯ 6 ವರ್ಷದ ಮಗಳು
Meerut Murder Case: ಉತ್ತರಪ್ರದೇಶದ ಮೀರಟ್‌ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದ್ದು, ಈ ಕರಾಳ ಘಟನೆಯ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ


ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿ(Meerut Murder Case) ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದ್ದು, ಈ ಕರಾಳ ಘಟನೆಯ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಸೌರಭ್ ದೇಹವನ್ನು 15 ತುಂಡು ಮಾಡಿ ಡ್ರಮ್‌ನೊಳಗೆ ಹಾಕಿ ಅದಕ್ಕೆ ಸಿಮೆಂಟ್ ತುಂಬಿಸಿದ್ದರು. ಘಟನೆಯ ಬಳಿಕ ನೆರೆಹೊರೆಯವರೊಂದಿಗೆ ಮಾತನಾಡಿದ್ದ ಸೌರಭ್‌ನ ಆರು ವರ್ಷದ ಮಗಳು, "ಪಾಪಾ ಡ್ರಮ್ ಮೇ ಹೈ" (ಅಪ್ಪ ಡ್ರಮ್‌ನೊಳಗಿದ್ದಾರೆ) ಎಂದು ಹೇಳುತ್ತಲೇ ಇದ್ದಳು ಎಂದು ಸೌರಭ್ ತಾಯಿ ರೇಣು ದೇವಿ ಹೇಳಿದ್ದಾರೆ. ಮಗುವಿನ ಈ ಹೇಳಿಕೆಯು, ಕೊಲೆ ನಡೆದ ಮತ್ತು ಅದರ ನಂತರದ ಘಟನೆಗಳನ್ನು ಮುನ್ನೆಲೆಗೆ ತಂದಿದೆ.
ತನ್ನ ಚಿಕ್ಕ ಮಗನ ಸಾವಿನಿಂದ ಎದೆಗುಂದಿರುವ ತಾಯಿ ರೇಣು ದೇವಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಗನ ದೇಹದ ತುಂಡುಗಳು ಹೇಗೆ ಪತ್ತೆಯಾದವು ಎಂಬುದನ್ನು ಹೇಳಿದ್ದಾರೆ.
"ಅವರು (ಮುಸ್ಕನ್ ಮತ್ತು ಸಾಹಿಲ್) ಮಾರ್ಚ್ 4 ರಂದು ನನ್ನ ಮಗನನ್ನು ಕೊಂದು ಪ್ರವಾಸಕ್ಕೆ ಹೋಗಿದ್ದರು. ಮನೆ ಮಾಲೀಕರು ಕೊಠಡಿ ಖಾಲಿ ಮಾಡುವಂತೆ ಮೊದಲೇ ಹೇಳಿದ್ದರು. ಅವರು ಹಿಂತಿರುಗಿದಾಗ, ಕೊಠಡಿಯನ್ನು ಖಾಲಿ ಮಾಡಲು ಕಾರ್ಮಿಕರನ್ನು ಕಳುಹಿಸಿದ್ದರು. ಅವರಿಗೆ ಡ್ರಮ್ ಎತ್ತಲು ಸಾಧ್ಯವಾಗಲಿಲ್ಲ. ಅದರಲ್ಲಿ ಏನಿದೆ ಎಂದು ಅವರು ಕೇಳಿದಾಗ, ಅದು ಕಸದಿಂದ ತುಂಬಿದೆ ಎಂದು ಮುಸ್ಕನ್ ಉತ್ತರಿಸಿದಳು" ಎಂದು ರೇಣು ದೇವಿ ಹೇಳಿದ್ದಾರೆ.
ಕಾರ್ಮಿಕರು ಡ್ರಮ್‌ನ ಮುಚ್ಚಳವನ್ನು ತೆರೆದಾಗ ಕೆಟ್ಟ ವಾಸನೆ ಹೊಡೆಯಲು ಆರಂಭಿಸಿದೆ. ಸ್ಥಳಕ್ಕೆ ಪೊಲೀಸರು ಬರುವ ಹೊತ್ತಿಗೆ ಮುಸ್ಕಾನ್ ತವರು ಮನೆಗೆ ಸೇರಿದ್ದಳು ಎಂದು ರೇಣು ದೇವಿ ಹೇಳಿದರು. ಪತಿಯನ್ನು ಕೊಂದಿರುವುದಾಗಿ ಮುಸ್ಕಾನ್ ತನ್ನ ತಾಯಿಯ ಬಳಿ ತಪ್ಪೊಪ್ಪಿಕೊಂಡಿದ್ದು, ಕೂಡಲೇ ಆಕೆ ಮುಸ್ಕಾನ್‌ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾಳೆ. ಆದರೆ, ಮುಸ್ಕಾನ್ ಪೋಷಕರು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ತಾಯಿಗೆ ಈ ಕೃತ್ಯದ ಬಗ್ಗೆ ಮೊದಲೇ ತಿಳಿದಿತ್ತು ಎಂದು ರೇಣು ದೇವಿ ಆರೋಪಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ನಡುರಸ್ತೆಯಲ್ಲಿ ಕುಳಿತು ಮಹಿಳೆಯ ಹೈಡ್ರಾಮಾ; ಮುಂದೇನಾಯ್ತು? ವಿಡಿಯೊ ನೋಡಿ
ಸೌರಭ್ ಕುಟುಂಬದೊಂದಿಗಿನ ಮುಸ್ಕಾನ್ ಸಂಬಂಧ ಆರಂಭದಿಂದಲೂ ಹದಗೆಟ್ಟಿತ್ತು. ಅವರಿಬ್ಬರೂ 2016ರಲ್ಲಿ ಪ್ರೇಮ ವಿವಾಹವಾಗಿದ್ದರು. ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯುವ ಆಸೆಯಿಂದ ಸೌರಭ್ ತನ್ನ ಮರ್ಚೆಂಟ್ ನೇವಿ ಕೆಲಸವನ್ನು ತೊರೆದರು. ಈ ಮದುವೆ ಮತ್ತು ಕೆಲಸ ಬಿಡುವ ಅವನ ಹಠಾತ್ ನಿರ್ಧಾರ ಸೌರಭ್ ಕುಟುಂಬಕ್ಕೆ ಇಷ್ಟವಾಗಲಿಲ್ಲ. ಇದು ಮನೆಯಲ್ಲಿ ಘರ್ಷಣೆಗೆ ಕಾರಣವಾಯಿತು. ಇದರಿಂದಾಗಿ, ಸೌರಭ್ ಮತ್ತು ಮುಸ್ಕಾನ್ ಬಾಡಿಗೆ ಮನೆಗೆ ಸ್ಥಳಾಂತರಗೊಂಡರು. ಮುಸ್ಕಾನ್ ಹಣಕ್ಕಾಗಿ ಸೌರಭ್‌ನನ್ನು ಮದುವೆಯಾಗಿದ್ದಳು ಎಂದು ಸೌರಭ್ ಕುಟುಂಬ ಆರೋಪಿಸಿದೆ.
2019ರಲ್ಲಿ, ಮುಸ್ಕಾನ್ ಮತ್ತು ಸೌರಭ್ ದಂಪತಿಗೆ ಹೆಣ್ಣು ಮಗು ಜನಿಸಿತು. ಆದರೆ ಆ ಸಂತೋಷ ತುಂಬಾ ಸಮಯ ಉಳಿಯಲಿಲ್ಲ. ಮುಸ್ಕಾನ್ ತನ್ನ ಸ್ನೇಹಿತ ಸಾಹಿಲ್ ಜೊತೆ ಸಂಬಂಧ ಹೊಂದಿದ್ದಾಳೆಂದು ಸೌರಭ್‌ಗೆ ತಿಳಿಯಿತು. ಇದು ದಂಪತಿಗಳ ನಡುವೆ ಬಿರುಕುಂಟಾಗಲು ಕಾರಣವಾಯಿತು. ವಿಚ್ಛೇದನ ನೀಡುವ ಕುರಿತಾಗಿಯೂ ಇಬ್ಬರು ಚರ್ಚಿಸಿದ್ದರು.
ಸೌರಭ್ ತನ್ನ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದರು. ಅವರು ಮರ್ಚೆಂಟ್ ನೇವಿಗೆ ಮತ್ತೆ ಸೇರಲು ನಿರ್ಧರಿಸಿದರು. 2023ರಲ್ಲಿ, ಅವರು ಕೆಲಸಕ್ಕಾಗಿ ದೇಶವನ್ನು ತೊರೆದಾಗ, ಮುಸ್ಕಾನ್ ಮತ್ತು ಸಾಹಿಲ್ ಮತ್ತೆ ಹತ್ತಿರವಾದರು. ಇವರಿಬ್ಬರ ನಡುವೆ ಬೆಳೆದ ಅನ್ಯೋನ್ಯತೆಯು ಸೌರಭ್‌ನ ಸಾವಿಗೆ ಕಾರಣವಾಯಿತು.