ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆ; ಬೌರಿಂಗ್‌ ಆಸ್ಪತ್ರೆಯಲ್ಲಿ ಗೋಡೆ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಸಾವು

ಬೆಂಗಳೂರು ನಗರದ ಮೆಜೆಸ್ಟಿಕ್, ಕೆಆರ್‌ ಮಾರುಕಟ್ಟೆ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಗುಟ್ಟಹಳ್ಳಿ, ವಸಂತನಗರ, ಶಾಂತಿನಗರ, ಆರ್.ಟಿ.ನಗರ, ಜಯನಗರ, ಜೆ.ಪಿ‌ ನಗರ, ಹೆಬ್ಬಾಳ, ಶಿವಾಜಿ ನಗರ, ಬನಶಂಕರಿ ಸೇರಿ ಹಲವೆಡೆ ಭಾರಿ ಮಳೆಯಾಗಿದೆ.

ಭಾರಿ ಮಳೆ; ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು

-

Prabhakara R
Prabhakara R Apr 29, 2026 6:39 PM

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಬುಧವಾರ ಸಂಜೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು (Bengaluru Rains), ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಕಾಂಪೌಂಡ್‌ ಗೋಡೆ ಕುಸಿದು (Bowring Hospital wall collapse) ಮೂವರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಕಾಂಪೌಂಡ್‌ ಗೋಡೆ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಘಟನೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದುರಂತದಲ್ಲಿ ಮೃತರಾದವರ ಗುರುತು ಪತ್ತೆಯಾಗಿದೆ. ಮಾಯಾ (51), ಮುಬಿನ್‌ ತಾಜ್‌ (49), ತಬೀನ್‌ ತಾಜ್‌ (47), ಸಿಜಿ (47), ಅಜು (35), ಸಾಜಿದ್‌ (20), ಪ್ರೀತಿ(5) ಮೃತರಾಗಿದ್ದಾರೆ.

ಬೌರಿಂಗ್‌ ಆಸ್ಪತ್ರೆ ಗೋಡೆಗೆ ಹೊಂದಿಕೊಂಡಂತೆ ಟಾರ್ಪಲ್ ಹಾಕಿ ಬೀದಿ ವ್ಯಾಪಾರಸ್ಥರು ಅಂಗಡಿ ನಡೆಸುತ್ತಿದ್ದರು. ಮಳೆ ಜೋರಾದಾಗ ಫುಟ್‌ಪಾತ್ ಮೇಲಿದ್ದ ವ್ಯಾಪಾರಸ್ಥರು ಮತ್ತು ದಾರಿಹೋಕರು ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲ್‌ ಅಡಿ ನಿಂತುಕೊಂಡಿದ್ದರು. ಈ ವೇಳೆ ಶಿಥಿಲ ಗೋಡೆ ಕುಸಿದು ದುರಂತ ಸಂಭವಿಸಿದೆ.

ನಗರದ ಹಲವೆಡೆ ಆಲಿಕಲ್ಲಿ ಮಳೆ ಅಬ್ಬರ



ನಗರದ ಮೆಜೆಸ್ಟಿಕ್, ಕೆಆರ್‌ ಮಾರುಕಟ್ಟೆ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಗುಟ್ಟಹಳ್ಳಿ, ವಸಂತನಗರ, ಶಾಂತಿನಗರ, ಆರ್.ಟಿ.ನಗರ, ಜಯನಗರ, ಜೆ.ಪಿ‌ ನಗರ, ಹೆಬ್ಬಾಳ, ಶಿವಾಜಿ ನಗರ, ಬನಶಂಕರಿ, ಸದಾಶಿವನಗರ, ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಡಬಲ್ ರೋಡ್, ರಿಚ್ಮಂಡ್ ಸರ್ಕಲ್ ಮತ್ತು ವಿಧಾನಸೌಧದ ಸುತ್ತಮುತ್ತ ಮಳೆ ಆರ್ಭಟಿಸಿದೆ.

ದಿಢೀರ್ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅಕಾಲಿಕ ಮಳೆ ಅಬ್ಬರಕ್ಕೆ ಕೆಲವೆಡೆ ಬೃಹತ್​ ಮರಗಳು ಧರೆಗುರುಳಿವೆ. ಮರ ಬಿದ್ದು ಶೇಷಾದ್ರಿಪುರಂ-ಮಲ್ಲೇಶ್ವರಂ ರಸ್ತೆ ಬಂದ್ ಆಗಿದೆ. ಗೊರಗುಂಟೆಪಾಳ್ಯದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಮರ ಬಿದ್ದ ಹಿನ್ನೆಲೆ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ.



ವಿಧಾನಸೌಧಕ್ಕೂ ನುಗ್ಗಿದ ನೀರು!

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ವಿಧಾನಸೌಧಕ್ಕೂ ನೀರು ನುಗ್ಗಿದೆ. ವಿಧಾನ ಸೌಧದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರ ಕೊಠಡಿಗೆ ನೀರು ನುಗ್ಗಿದೆ. ದ್ವಾರದ ಮೂಲಕವೇ ನೀರು ನುಗ್ಗಿದ್ದು, ಕಚೇರಿಯಲ್ಲಿ ಹಲವು ವಸ್ತುಗಳು ಹಾನಿಯಾಗಿವೆ ಎಂದು ತಿಳಿದುಬಂದಿದೆ.