Exam Anxiety: ನಾಳೆಯಿಂದ SSLC ಎಕ್ಸಾಂ; ಪರೀಕ್ಷೆ ಬಗ್ಗೆ ಭಯ, ಆತಂಕವೇ? ಈ ಟಿಪ್ಸ್ ಫಾಲೋ ಮಾಡಿ
ಪರೀಕ್ಷೆಯ ಭಯ ಕಾಡಿದಾಗ ಮಕ್ಕಳಲ್ಲಿ ಏಕಾಗ್ರತೆ ಕೊರತೆ, ನಿದ್ರಾಹೀನತೆ, ಉಸಿರಾಟದ ತೊಂದರೆ ಇತ್ಯಾದಿ ಹಲವು ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಭಯ ಪಡದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹಾಗಾಗಿ ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳು ಶಾಂತತೆ ಕಾಪಾಡಿಕೊಳ್ಳಲು ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವೊಂದು ಟಿಪ್ಸ್ ಪಾಲಿಸಬೇಕು.


ನವದೆಹಲಿ: ನಾಳೆಯಿಂದ ಆರಂಭವಾಗಲಿರುವ SSLC ಪರೀಕ್ಷೆ ಬರೆಯಲು ಲಕ್ಷಾಂತರ ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಭಯ, ಆತಂಕ ಶುರುವಾಗೋದು ಸಾಮಾನ್ಯ.ಕೆಲವರು ಪರೀಕ್ಷೆಗಾಗಿ ಎಷ್ಟೇ ಓದಿದರೂ ಸಹಜವಾಗಿ ಸ್ವಲ್ಪ ಆತಂಕ, ಭಯ ಹಾಗೂ ಒತ್ತಡಕ್ಕೆ ಒಳಗಾಗುತ್ತಾರೆ. ಪರೀಕ್ಷೆಯ ಭಯ ಕಾಡಿದಾಗ ಮಕ್ಕಳಲ್ಲಿ ಏಕಾಗ್ರತೆಯ ತೊಂದರೆ, ನಿದ್ರಾ ಹೀನತೆ ಉಸಿರಾಟದ ತೊಂದರೆ ಇತ್ಯಾದಿ ಹಲವು ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಭಯ ಪಡದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹಾಗಾಗಿ ಪರೀಕ್ಷೆಗೂ ಮೊದಲು ವಿದ್ಯಾರ್ಥಿ ಗಳು ಶಾಂತತೆ ಕಾಪಾಡಿಕೊಳ್ಳಲು ಮತ್ತು ಭಾವನೆಗಳನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಪರೀಕ್ಷೆ ಓದುವಿನ ಸಮಯ ನಿರ್ವಹಣೆ ಯಿಂದ ಹಿಡಿದು ಸ್ವಯಂ ಆರೈಕೆ ವರೆಗೆ ತಜ್ಞರ ಈ ಟಿಪ್ಸ್ ಅನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಬಹಳ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬಹುದು.
ತಡರಾತ್ರಿ ಓದುವ ಅಭ್ಯಾಸ ಮಾಡಬೇಡಿ:
ಪರೀಕ್ಷೆಯ ಭಯದಿಂದ ಕೆಲವರು ತಡರಾತ್ರಿಯವರೆಗೆ ಓದುತ್ತಾರೆ. ಸರಿಯಾದ ನಿದ್ದೆ ಇಲ್ಲದ ಸಂದರ್ಭದಲ್ಲಿ ಮಾನಸಿಕ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ದಿನದಲ್ಲಿ 8ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ಹಾಗಾಗಿ ತಡರಾತ್ರಿ ಓದುವುದಕ್ಕಿಂತ ಬೆಳಗ್ಗೆ ಬೇಗನೆ ಎದ್ದು ಅಧ್ಯಯನ ಮಾಡುವುದು ಉತ್ತಮ. ಹಾಗಾಗಿ ನೀವು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು, ನಿಮ್ಮ ದೇಹಕ್ಕೆ ಸಾಕಷ್ಟು ನಿದ್ರೆಯನ್ನು ನೀಡಿ.
ವಿರಾಮ ನೀಡಿ:
ಒಂದೇ ಸಮನೆ ಓದುತ್ತಲೇ ಇದ್ದರೆ ಅದು ಅಧಿಕ ಒತ್ತಡದ ಸ್ಥಿತಿ ನಿರ್ಮಾಣ ಮಾಡಲಿದೆ. ಹಾಗಾಗಿ ಓದಿನ ನಡು ನಡುವೆ ವಿರಾಮಿಸುವುದು ಉತ್ತಮ. ಇದರಿಂದ ಓದಿದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುವಂತಾಗಲಿದೆ. ಹಾಗೆಯೇ ವಾಕ್ ಹೋಗುವುದು, ಸಂಗೀತ ಕೇಳುವುದು, ಪ್ರೀತಿ ಪಾತ್ರರ ಜೊತೆಗೆ ಸ್ವಲ್ಪ ಸಮಯ ಕಳೆಯುವುದರಿಂದ ಓದಿದ್ದು ನೆನಪಲ್ಲಿ ಉಳಿಯುದರ ಜೊತೆಗೆ ಪರೀಕ್ಷೆ ಭಯ ಸಹ ತೊಲಗಲಿದೆ.
ಸಾಕಷ್ಟು ಸಮಯ ಮೀಸಲಿಡಿ:
ಪರೀಕ್ಷೆಗೆ ಓದುವ ಸಂದರ್ಭದಲ್ಲಿ ಪ್ರತೀ ವಿಷಯಕ್ಕೂ ಕೂಡ ನಿಗದಿತ ಸಮಯ ಮೀಸಲಿಡಬೇಕು. ಪ್ರತಿ ವಿಷಯವನ್ನು ಕೂಡ ಕಲಿಯಲು ಇದಕ್ಕಾಗಿ ಪ್ರತ್ಯೇಕ ಒಂದು ಟೈಂ ಟೇಬಲ್ ಮಾದರಿ ಮಾಡಿಕೊಂಡಿರಬೇಕು. ಆಗ ಓದುವಾಗ ಒತ್ತಡದ ಹೊರೆ ಇರಲಾರದು. ಓದಿದ್ದನ್ನು ಸಣ್ಣ ಟಿಪ್ಪಣಿ ಮಾಡಿಟ್ಟರೆ ಕೊನೆ ಕ್ಷಣದಲ್ಲಿ ಸ್ವಲ್ಪ ಕಣ್ಣಾಡಿಸಿದರೂ ಪೂರ್ತಿ ವಿಷಯ ನೆನಪಿನಲ್ಲಿ ಉಳಿದು ಬಿಡುತ್ತದೆ. ಈ ರೀತಿ ಕೆಲವು ಅಭ್ಯಾಸದ ಸರಿಯಾದ ಕ್ರಮ ಅನುಸರಿಸಬೇಕು.
ಧ್ಯಾನ ಮಾಡಿರಿ:
ಧ್ಯಾನ ,ಯೋಗ ಇತ್ಯಾದಿ ದೈಹಿಕ ಕಾರ್ಯಚಟುವಟಿಕೆಗಳಿಂದ ಓದಿನ ಆಸಕ್ತಿ ಹೆಚ್ಚಾಗಲಿದೆ. ಯೋಗ ಮತ್ತು ಧ್ಯಾನವನ್ನು ಪ್ರತಿದಿನ ಮಾಡುವುದರಿಂದ ಮಕ್ಕಳಿಗೆ ತಾಳ್ಮೆ, ನೆನಪಿನ ಶಕ್ತಿ ವೃದ್ಧಿ ಆಗಲಿದೆ. ಧ್ಯಾನದಿಂದಾಗಿ ಮನಸ್ಸಿನ ಆತಂಕ ದೂರಾಗಿ ಆತ್ಮವಿಶ್ವಾಸ ದಿಂದ ಪರೀಕ್ಷೆ ಎದುರಿಸಬಹುದು.
ಆಹಾರ ಸರಿಯಾಗಿ ಸೇವಿಸಿ:
ಪರೀಕ್ಷೆ ಎಂಬ ಭಯಕ್ಕೆ ಅನೇಕ ವಿದ್ಯಾರ್ಥಿಗಳು ಆಹಾರ ಸೇವಿಸದೆ ಓದಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಸಮಯಕ್ಕೆ ಸರಿಯಾಗಿ ಪೌಷ್ಟಿ ಕಾಂಶಯುಕ್ತ ಆಹಾರ ತಿಂದರೆ ತಲೆಸುತ್ತು, ಒತ್ತಡ, ನಿಶ್ಯಕ್ತಿ, ಅಸ್ವಸ್ಥತೆ ಇತರ ಸಮಸ್ಯೆ ಬಾರದಂತೆ ತಡೆಹಿಡಿಯ ಬಹುದು. ಹಣ್ಣು, ತರಕಾರಿ, ಧಾನ್ಯ,ನೀರನ್ನು ಹೆಚ್ಚು ಸೇವಿಸಿದಷ್ಟು ಆರೋಗ್ಯ ಸ್ಥಿತಿ ಉತ್ತಮವಾಗಲಿದೆ.
ಇದನ್ನು ಓದಿ: SSLC Examination: ಮಾ.21 ರಿಂದ ಏ.4 ನೇ ತಾರೀಖಿನವರೆಗೆ ವಿಷಯವಾರು ವೇಳಾಪಟ್ಟಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ
ಸಕಾರಾತ್ಮಕವಾಗಿರಿ:
ಪರೀಕ್ಷೆ ಸಂದರ್ಭದಲ್ಲಿ ಯಾವುದೇ ನಕಾರಾತ್ಮಕ ಆಲೋಚನೆ ಮಾಡಬೇಡಿ. ಅನಗತ್ಯ ಒತ್ತಡಕ್ಕೆ ಒಳಗಾಗುವುದರ ಬದಲು ಧೈರ್ಯದಿಂದ ಇರಿ. ಈಗಾಗಲೇ ಓದಿರುವ ಅಂಶಗಳತ್ತ ಕೇಂದ್ರೀಕರಿಸಿ. ಪರೀಕ್ಷೆ ಮುಂಚಿತ ವಾಗಿ ಓದಿದ್ದನ್ನು ಒಮ್ಮೆ ರಿಕಾಲ್ ಮಾಡಿಕೊಳ್ಳಿ. ಸಕಾರಾತ್ಮಕ ಮನಸ್ಥಿತಿ ಯೊಂದಿಗೆ ನಾನು ಚೆನ್ನಾಗಿ ಪರೀಕ್ಷೆ ಬರೆಯುತ್ತೇನೆ ಎನ್ನುವ ಆತ್ಮವಿಶ್ವಾಸ ದಲ್ಲೇ ಮುಂದುವರಿಯಿರಿ.
ಒತ್ತಡ ಹೇರದಿರಿ:
ಪೋಷಕರು ಕೂಡ ಮಕ್ಕಳ ಮೇಲೆ ಅಧಿಕ ಅಂಕ ಪಡೆಯಬೇಕು ಎಂಬ ಒತ್ತಡವನ್ನು ಹೇರುವುದು, ಭಯಪಡಿಸುವುದನ್ನು ಮಾಡಬಾರದು. ಮಕ್ಕಳ ಕಲಿಕೆಯ ಸಮಯದಲ್ಲಿ ಸದಾ ಅವರ ಜೊತೆಗಿರಬೇಕು. ಮಕ್ಕಳು ಕೂಡ ಪರೀಕ್ಷೆ ಸಮಯಕ್ಕಾಗಿ ಕಾಯದೆ ನಿತ್ಯ ಅಭ್ಯಾಸ ಕ್ರಮ ಅನುಸರಿಸಿದರೆ ಪರೀಕ್ಷೆಯ ಭಯ ಇರದೆ ಆತ್ಮವಿಶ್ವಾಸದಿಂದ ಇರಬಹುದು.