SSLC Exam 2 Results 2026: ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಶೇ.62 ವಿದ್ಯಾರ್ಥಿಗಳು ಪಾಸ್
ರಾಜ್ಯದಾದ್ಯಂತ ಎಸ್‌ಎಸ್ಎಲ್‌ಸಿ ಪರೀಕ್ಷೆ- 2ನ್ನು ಮೇ 18ರಿಂದ 25ರವರೆಗೆ ಒಟ್ಟು 358 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದ್ದು, ರಿಸಲ್ಟ್ ವೀಕ್ಷಿಸುವುದು ಹೇಗೆ?, ವೆಬ್‌ಸೈಟ್ ಲಿಂಕ್ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶವನ್ನು (SSLC Exam 2 Results 2026) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶನಿವಾರ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದಿದ್ದ 49,351 ವಿದ್ಯಾರ್ಥಿಗಳ ಪೈಕಿ 31,080 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.62 ಫಲಿತಾಂಶ ದಾಖಲಾಗಿದೆ.
ರಾಜ್ಯದಾದ್ಯಂತ ಎಸ್‌ಎಸ್ಎಲ್‌ಸಿ ಪರೀಕ್ಷೆ- 2ನ್ನು ಮೇ 18ರಿಂದ 25ರವರೆಗೆ ಒಟ್ಟು 358 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 49,351 ಶಾಲಾ ವಿದ್ಯಾರ್ಥಿಗಳು, 18,471 ಖಾಸಗಿ ವಿದ್ಯಾರ್ಥಿಗಳು, 32,740 ಪುನರಾವರ್ತಿತ ವಿದ್ಯಾರ್ಥಿಗಳು 2,557 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಫಲಿತಾಂಶ ವೀಕ್ಷಣೆ ಹೇಗೆ?
ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು https://karresults.nic.in ನಲ್ಲಿ ಪಡೆಯಬಹುದಾಗಿದೆ.
ಪರೀಕ್ಷೆ-2ರಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ವಿಷಯಗಳ ನೈಜ ಅಂಕಗಳು ಮತ್ತು ಪರೀಕ್ಷೆ-1 ಹಾಗೂ 2ರ ತುಲನಾತ್ಮಕ ಅಂಕಗಳನ್ನು ಮಂಡಳಿಯ https://kseab.karnataka.gov.in ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-3 ಇಲ್ಲ
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ-3 ಇರುವುದಿಲ್ಲ. ಈ ಬಗ್ಗೆ ಏಪ್ರಿಲ್ 23ರಂದು ನಡೆದ ಸುದ್ದಿಗೋಷ್ಠಿಯಲ್ಲಿಯೇ ಅಂದಿನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಒಂದರಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ತಿಳಿಸಿದ್ದರು.
ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಜೂನ್ 6 ಕೊನೆಯ ದಿನ
ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ಪ್ರತಿ, ಮರು ಎಣಿಕೆ ಹಾಗೂ ಮರುಮೌಲ್ಯಮಾಪನ ಈ ಸೇವೆಗಳನ್ನು ಆನ್‌ಲೈನ್ ಮೂಲಕ ಈಗಾಗಲೇ ನೀಡಲಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಈ ಸೇವೆಗಳನ್ನು ರಾಜ್ಯ ಸರ್ಕಾರದ Karnataka One ಮೊಬೈಲ್ ಆ್ಯಪ್ ಮೂಲಕವೂ ಸಹ ಸೇವೆಯನ್ನು ಒದಗಿಸಲಾಗುತ್ತಿದೆ.
ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಜೂನ್ 6 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ತಮ್ಮ Android ಮೊಬೈಲ್ Playstore ಮೂಲಕ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಸದರಿ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಸದರಿ ಸೇವೆಯ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-2ರ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.