ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಿಗೆ ರಜೆ - ಪಠ್ಯೇತರ ಕೌಶಲ್ಯ ಅಭಿವೃದ್ಧಿ

ಮಗುವೊಂದರ ಚಿಗುರು ಮನಸ್ಸಿಗೆ ಶಾಲೆಯ ವಾತಾವರಣ, ಸ್ನೇಹದ ಅನುಭಾವ, ಕಲಿಕೆಯ ಆಸಕ್ತಿ ಹಾಗೂ ಶಿಸ್ತಿನ ದಿನಚರಿ ಎಷ್ಟು ಮಹತ್ವವೋ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿನ ತೊಡಗಿಕೊಳ್ಳುವಿಕೆಯೂ ಹೊಸತನದ ಭಾವವನ್ನು ನೀಡು ವಂತದ್ದು. ಪ್ರಸಕ್ತ ಜಗತ್ತಿನಲ್ಲಿ ಅವಕಾಶಗಳು ಹೇರಳ. ಕುಳಿತು ಮಾಡುವ ಕೆಲಸಗಳಿಂದ ಹಿಡಿದು, ಜಗದುದ್ದಗಲ ಪರ್ಯ ಟಿಸುವ ಯಾವುದೇ ಕಾಯಕ ಅಸಾಧ್ಯವೆನಿಸುವಂಥದ್ದಲ್ಲ.

ಬೇಸಿಗೆ ರಜೆ - ಪಠ್ಯೇತರ ಕೌಶಲ್ಯ ಅಭಿವೃದ್ಧಿ

-

Profile
Ashok Nayak May 13, 2026 5:18 PM

ಯಾವುದೇ ವಿಷಯವನ್ನು ಸತತವಾಗಿ ಅಭ್ಯಸಿಸುವಾಗ ಏಕಾಗ್ರತೆಯ ಕೊರತೆಯಾಗುವುದು ಸರ್ವೇ ಸಾಮಾನ್ಯ. ಹಾಗಾಗಿ, ಶಾಲೆಯಲ್ಲಿನ ರೂಪಿತ ಪಠ್ಯಕ್ರಮಕ್ಕೆ ಒಗ್ಗಿರುವ ಶಿಸ್ತಿನ ದಿನಚರಿಗೆ ಎಲ್ಲಾ ತೆರನಾದ ಪಠ್ಯೇತರ ಚಟುವಟಿಕೆಗಳು ಮಾನಸಿಕವಾಗಿ ಬದಲಾವಣೆ ಯನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಎಪ್ರಿಲ್ - ಮೇ ಬಂತೆಂದರೆ ಸಾಕು, ಮನೆಯಿಂದ ಹೊರಗೆ ದುಡಿಯುವ ಪೋಷಕರೂ, ಮನೆಯಲ್ಲಿ ಮಕ್ಕಳ ಹಾವಳಿ ಸಹಿಸಲಸಾಧ್ಯ ಎಂದೆಣಿ ಸುವ ತಂದೆ - ತಾಯಿಯರದ್ದೂ ಒಂದೇ ಆಲೋಚನೆ, ಈ ಬಾರಿ ಮಕ್ಕಳಿಗೆ ಬೇಸರವೂ ಆಗದಂತೆ, ಸಮಯವೂ ಉತ್ಸಾದಲ್ಲಿ ಕಳೆಯುವಂತೆ, ಕೌಶಲ್ಯಾಭಿವೃದ್ಧಿಯೂ ಆಗುವಂತೆ ಯಾವ ನಿರ್ಧಾರವನ್ನು ಮಾಡೋಣ ಎಂದು... ನೀವೂ ಯೋಚಿಸುತ್ತಿದ್ದೀರಾ?

ಮಗುವೊಂದರ ಚಿಗುರು ಮನಸ್ಸಿಗೆ ಶಾಲೆಯ ವಾತಾವರಣ, ಸ್ನೇಹದ ಅನುಭಾವ, ಕಲಿಕೆಯ ಆಸಕ್ತಿ ಹಾಗೂ ಶಿಸ್ತಿನ ದಿನಚರಿ ಎಷ್ಟು ಮಹತ್ವವೋ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿನ ತೊಡಗಿಕೊಳ್ಳುವಿಕೆಯೂ ಹೊಸತನದ ಭಾವವನ್ನು ನೀಡು ವಂತದ್ದು. ಪ್ರಸಕ್ತ ಜಗತ್ತಿನಲ್ಲಿ ಅವಕಾಶಗಳು ಹೇರಳ. ಕುಳಿತು ಮಾಡುವ ಕೆಲಸಗಳಿಂದ ಹಿಡಿದು, ಜಗದುದ್ದಗಲ ಪರ್ಯಟಿಸುವ ಯಾವುದೇ ಕಾಯಕ ಅಸಾಧ್ಯವೆನಿಸುವಂಥದ್ದಲ್ಲ. ಹಾಗಾಗಿ, ರಂಗೋಲಿ ಬಿಡಿಸುವಿಕೆ, ಸಂಗೀತ ಕಲಿಯುವುದು, ನೃತ್ಯಾಭ್ಯಾಸ, ಚಿತ್ರಕಲೆ, ವೇದಗಣಿತ, ಅಧ್ಯಾತ್ಮ ತತ್ವಗಳ ಕಲಿಕೆ, ಈಜುವಿಕೆ, ಚಾರಣದಂತಹ ಹಲವಾರು ಪಠ್ಯೇತರ ವಿಷಯಗಳಲ್ಲಿನ ಪಾಲ್ಗೊಳ್ಳುವಿಕೆ ಮನಸ್ಸಿಗೆ ಮುದ ಕೊಡುವುದು ಮಾತ್ರವಲ್ಲ, ಅನಗತ್ಯ ವಿಚಾರಗಳಲ್ಲಿ ಮಕ್ಕಳ ಸಮಯ ಹಾಗೂ ಜೀವನ ದಾರಿತಪ್ಪುವ ಅವಕಾಶಗಳು ಕಡಿಮೆ ಯಾಗುತ್ತವೆ.

ಇದನ್ನೂ ಓದಿ: Basil Seeds Health Benefits: ಕಾಮಕಸ್ತೂರಿ ಬೀಜ ಚಿಕ್ಕದಾದರೂ ಔಷಧ ಗುಣ ದೊಡ್ಡದು

ಮಗುವೊಂದು ಸ್ವಾಭಾವಿಕವಾಗಿಯೇ ಕಾಲಾನುಸಾರವಾಗಿ ವಿಷಯವೊಂದರಲ್ಲಿ ತನ್ನ ಕೌಶಲ್ಯವನ್ನು, ಆಸಕ್ತಿಯನ್ನೂ ತೋರ್ಪಡಿಸುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಅನ್ನ ಪ್ರಾಶನ ಸಂಸ್ಕಾರದ ಕಾಲದಲ್ಲಿಯೇ ಇದರ ಉಲ್ಲೇಖವನ್ನು ಮಾಡಲಾಗಿದೆ. ಪ್ರತಿ ಬಾರಿಯೂ ಹಲವಾರು ಅವಕಾಶಗಳ ಮಧ್ಯೆ ತನ್ನಾಸಕ್ತಿಯ ಕ್ಷೇತ್ರವನ್ನು ಮಗು ಬಯಸುತ್ತದೆಂದಾದರೆ ಆ ಚಟುವಟಿಕೆಯಲ್ಲಿ ಭಾಗವಹಿಸುವ ಸಮಯೋಚಿತ ಅವಕಾಶ ಒದಗಿಸಬೇಕು. ಅಂಗೈಯಲ್ಲಿ ಜಗತ್ತು ಕಾಣುವ ಈ ಯುಗವು ಕಾಣದ ಜಗತ್ತಿಗೆ ಮಕ್ಕಳನ್ನು ಕೊಂಡೊಯ್ಯುವ ಅಪಾಯಕಾರಿ ಕೈಗಳಲ್ಲಿ ಬಂಧಿ. ಅದನ್ನುಗುರುತಿಸುವ ಕ್ಲಿಷ್ಟ ಜವಾಬ್ದಾರಿಯೂ , ಹಾಗೆಯೇ ಸಮಯೋಚಿತವಾಗಿ ಅಂತಹ ಜಾಲತಾಣಗಳ ಬಿಗಿ ಮುಷ್ಟಿಯಿಂದ ಮಕ್ಕಳನ್ನು ಕಾಲಾನುಸಾರ ರಕ್ಷಿಸುವ ಹೊಣೆಯೂ ಪೋಷಕರದ್ದು. ಉದಾಹರಣೆಗೆ, ಚಿತ್ರಕಲೆಯಲ್ಲಿ ಆಸಕ್ತಿಯಿರುವ ಮಗುವೊಂದಕ್ಕೆ ಜಾಲತಾಣದ ಆಪ್ ಒಂದನ್ನು ಡೌನ್ ಲೋಡ್ ಮಾಡಿ ಕೊಟ್ಟು ತಮ್ಮ ಜಂಜಾಟದಲ್ಲಿ ಮುಳುಗಿರುವ ಪೋಷಕರು ಗೊತ್ತೋ ಗೊತ್ತಿಲ್ಲದೆಯೋ ಮಗುವಿನ ಮೇಲ್ವಿಚಾರಣೆಯಿಂದ ವಿಮುಖ ರಾದಂತಾಗುತ್ತದೆ. ಕೆಲಸವು ಕೌಶಲ್ಯವೆಂದೆನಿಸಿಕೊಳ್ಳುವುದು ಸತತ ಅಭ್ಯಾಸದಿಂದ. ಮಗುವೊಂದು ಬಿದ್ದು ಬಿದ್ದು ನಡೆಯಲು ಕಲಿಯುವಂತೆ, ವಿವಿಧ ರೀತಿಯ ತಪ್ಪುಗಳನ್ನು ಮಾಡದೇ ಅನುಭವದ- ಕೌಶಲ್ಯತೆಯ ಮೇರೆ ಮೀರಲು ಸಾಧ್ಯವಿಲ್ಲ. ಹಾಗಾಗಿ, ಕೌಶಲ್ಯಾ ಭಿವೃದ್ಧಿಗೆ ಸಹಸ್ರಾರು ಮಾರ್ಗಗಳಿದ್ದರೂ ಗುರುಮುಖೇನ ಕಲಿಯುವ ಪಾಠಕ್ಕೊಂದು ಅನುಗ್ರಹದ ಶ್ರೀರಕ್ಷೆಯಿರುತ್ತದೆ.

ಆಯುರ್ವೇದ ಶಾಸ್ತ್ರದಲ್ಲಿ ಹಲವಾರು ಸಸ್ಯಗಳ, ವಿವಿಧ ಭಾಗಗಳ, ಅವುಗಳಿಂದ ತಯಾರಿಸ ಲ್ಪಡುವ ಔಷಧಗಳ ವರ್ಣನೆಯಿದೆ. ನಮ್ಮ ಸುತ್ತಲಿನ ವಾತಾವರಣದಲ್ಲಿ ಸಿಗುವ ವಿವಿಧ ಜಂತುಗಳ, ಹಾವುಗಳ, ಅವುಗಳ ಕಡಿತದಿಂದುಂಟಾಗುವ ಅಡ್ಡ ಪರಿಣಾಮಗಳ ಉಲ್ಲೇಖ ಗಳಿದೆ. ನಾವೇ ಬೆಳೆಯುವ ಆಹಾರ ಮತ್ತು ಔಷಧೀಯ ಸಸ್ಯಗಳ ವಿವರಣೆ, ಅವುಗಳಿಂದ ತಯಾರಿಸಲ್ಪಡುವ ರುಚಿ-ಶುಚಿಕರ ಅಡುಗೆಗಳ ಪುಸ್ತಕಗಳಿವೆ. ನಿತ್ಯವೂ ಅಭ್ಯಸಿಸಬೇಕಾದ ಯೋಗ ಹಾಗೂ ಪ್ರಾಣಾಯಾಮಗಳ ವಿಸ್ತೃತ ವರದಿಯಿದೆ. ನಮ್ಮ ಪ್ರಕೃತಿಯನ್ನು ನಾವೇ ಅರಿತು ಆರೋಗ್ಯವಂತರಾಗುವ ಮಾಹಿತಿಗಳಿವೆ. ಇದು ಉದಾಹರಣೆಯಷ್ಟೇ, ಆಸಕ್ತಿಯ ಕ್ಷೇತ್ರದ ಆಳಕ್ಕಿಳಿದರೆ, ಉದ್ದಗಲದ ಸಂಪೂರ್ಣ ಚಿತ್ರಣ ಹಾಗೂ ನಿರಂತರ ಸಾಧನೆಯ ಧುಮ್ಮಿಕ್ಕುವ ಅವಕಾಶಗಳು ಕೈಗೆಟುಕುತ್ತವೆ, ಅಸಾಧ್ಯವಾದುದನ್ನು ಸಾಧ್ಯವಾಗಿಸುವ, ಜೀವನೋತ್ಸಾಹವನ್ನು ಪುಟಿದೆಬ್ಬಿಸುವ ಚಿಲುಮೆಗಳಾಗುತ್ತವೆ.

Dr

ಮಾಹಿತಿಗಾಗಿ ಸಂಪರ್ಕಿಸಿ:

ಡಾ.ಕಾವ್ಯ

ಸಹಾಯಕ ಪ್ರಾಧ್ಯಾಪಕರು

ಕೌಮಾರಭೃತ್ಯ ವಿಭಾಗ

ಎಸ್ ಡಿ ಎಮ್ ಆಯುರ್ವೇದ ಕಾಲೇಜು, ಆಸ್ಪತ್ರೆ‌ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ