ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Exit Poll Results 2025: ರಾಜಕೀಯದಲ್ಲಿ ಸೋತ ಕೇಜ್ರಿವಾಲ್‌ಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ; ಬಿಜೆಪಿ ಲೇವಡಿ

ದಿಲ್ಲಿ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದ ಆಪ್‌ ಕನಸು ನುಚ್ಚು ನೂರಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ ಮತ್ತೆ ನಿರಾಸೆ ಎದುರಾಗಲಿದೆ. ಇದೀಗ ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್‌ ಅವರು ಕೇಜ್ರಿವಾಲ್‌ ಕಾಲೆಳೆದಿದ್ದು, ಇನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಎಂದಿದ್ದಾರೆ.

ದಿಲ್ಲಿ ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಕೇಜ್ರಿವಾಲ್‌ ಕಾಲೆಳೆದ ಬಿಜೆಪಿ

ಅರವಿಂದ್‌ ಕೇಜ್ರಿವಾಲ್‌.

Profile Ramesh B Feb 5, 2025 11:29 PM

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ಬುಧವಾರ (ಫೆ. 5) ಮುಕ್ತಾಯವಾಗಿದ್ದು, ಸಂಜೆ 5 ಗಂಟೆ ವೇಳೆಗೆ ಶೇ. 57.7 ಮತದಾನವಾಗಿದೆ. ಸದ್ಯ ಚುನಾವಣೋತ್ತರ ಸಮೀಕ್ಷೆಯೂ ಹೊರ ಬಿದ್ದಿದೆ (Delhi Exit Poll Results 2025). ಬಿಜೆಪಿ (BJP) ಸರ್ಕಾರ ರಚಿಸಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳೂ ತಿಳಿಸಿದ್ದು, ಆಮ್‌ ಆದ್ಮಿ ಪಕ್ಷ (Aam Admi Party)ದ ಹ್ಯಾಟ್ರಿಕ್‌ ಕನಸು ನುಚ್ಚು ನೂರಾಗುವ ಸಾಧ್ಯತೆ ಇದೆ. ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ ಆಪ್‌ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರನ್ನು ಬಿಜೆಪಿ ಸಂಸದ ಗಿರಿರಾಜ್‌ ಸಿಂಗ್‌ (Giriraj Singh) ಲೇವಡಿ ಮಾಡಿದ್ದಾರೆ. ದಿಲ್ಲಿ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸುಳ್ಳು, ಮೋಸ ಮತ್ತು ಭ್ರಷ್ಟಾಚಾರ ಸೋತಿದೆ. ಕೇಜ್ರಿವಾಲ್‌ ಚಿತ್ರರಂಗಕ್ಕೆ ಸೇರಿದರೆ ನುರಿತ ಕಲಾವಿದರನ್ನೂ ಸೋಲಿಸುವಷ್ಟು ಅಭಿನಯದಲ್ಲಿ ಪರಿಣಿತಿ ಹೊಂದಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

ʼʼಕೇಜ್ರಿವಾಲ್‌ ಈಗಾಗಲೇ ಚುನಾವಣೆಯಲ್ಲಿ ಸೋತಿದ್ದಾರೆ. ಇದು ಅವರೊಬ್ಬರ ಸೋಲಲ್ಲ. ಇದುವರೆಗೆ ಹೇಳಿಕೊಂಡು ಬಂದ ಸುಳ್ಳು, ಅವರು ನಡೆಸಿದ ಭ್ರಷ್ಟಾಚಾರದ ಸೋಲು ಕೂಡ ಹೌದು. ಕೇಜ್ರಿವಾಲ್‌, ನಿಮ್ಮ ರಾಜಕೀಯ ಜೀವನ ಅಂತ್ಯವಾಗಿದೆ. ನೀವು ಚಿತ್ರರಂಗಕ್ಕೆ ಹೋದರೆ ಟಾಪ್‌ ನಟರನ್ನು ಸೋಲಿಸಬಲ್ಲಿರಿ. ಮುಗ್ಧತೆಯ ಮುಖವಾಡ ತೊಟ್ಟು ಜನರನ್ನು ದಿಲ್ಲಿಯ ಬಡ ಜನರನ್ನು ಕೇಜ್ರಿವಾಲ್‌ ವಂಚಿಸಿದ್ದಾರೆʼʼ ಎಂದು ಆರೋಪಿಸಿದ್ದಾರೆ.



ಮತ್ತೊಮ್ಮೆ ಎಡವಿದ ಕಾಂಗ್ರೆಸ್‌

ಇತ್ತ ಕಾಂಗ್ರೆಸ್‌ ಒಂದು ಕಾಲದಲ್ಲಿ ತನ್ನ ಭದ್ರ ಕೋಟೆಯಾಗಿದ್ದ ದಿಲ್ಲಿಯಲ್ಲಿ ಮತ್ತೊಮ್ಮೆ ಹೀನಾಯ ಪ್ರದರ್ಶನ ಮುಂದುವರಿಸುವ ಎಲ್ಲ ಲಕ್ಷಣಗಳಿವೆ ಎಂದು ಎಕ್ಸಿಟ್‌ ಪೋಲ್‌ಗಳು ತಿಳಿಸಿವೆ. 1998ರಿಂದ 2013ರವರೆಗೆ ದಿಲ್ಲಿಯ ಗದ್ದುಗೆ ಏರಿದ್ದ ಕೈ ಪಡೆ ಬಳಿಕ ಅವನತಿಯತ್ತ ಮುಖ ಮಾಡಿತ್ತು. 2015 ಮತ್ತು 2020ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈ ಬಾರಿಯೂ ಪಕ್ಷ ಮೇಲೇಳುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ. ಹೆಚ್ಚೆಂದರೆ 3 ಸ್ಥಾನಗಳಲ್ಲಿ ಜಯ ದಾಖಲಿಸಬಹುದು ಎಂದಿದೆ.

ಈ ಸುದ್ದಿಯನ್ನೂ ಓದಿ: Delhi Exit Poll Results 2025: ಬಿಜೆಪಿಗೆ ಮತ್ತೆ ಅಧಿಕಾರ; ದಿಲ್ಲಿ ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?

ದಿಲ್ಲಿಯಲ್ಲಿ ಒಟ್ಟು 70 ವಿಧಾನಸಭಾ ಸೀಟುಗಳಿದ್ದು, ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 36. ಬಿಜೆಪಿಗೆ 35-60 ಸೀಟು ದೊರೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಊಹಿಸಿವೆ. ಇನ್ನು ಆಡಳಿತರೂಢ ಆಪ್‌ (AAP) 32-37 ಕಡೆಗಳಲ್ಲಿ ಜಯ ಸಾಧಿಸಲಿದೆ ಎಂದು ತಿಳಿಸಿವೆ. ಈ ಮೂಲಕ ಸುಮಾರು 27 ವರ್ಷಗಳ ಬಳಿಕ ಕಮಲ ಪಡೆ ದಿಲ್ಲಿಯ ಗದ್ದುಗೆಗೆ ಏರಲಿದೆ. 2020ರ ಚುನಾವಣೆಯಲ್ಲಿ ಆಪ್‌ 62 ಮತ್ತು ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2015ರಲ್ಲಿ ಆಪ್‌ 67 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು.

ಫೆ. 8ರಂದು ಫಲಿತಾಂಶ ಪ್ರಕಟವಾಗಲಿದೆ.