Delhi Election Result 2025: ದೆಹಲಿ ಚುಕ್ಕಾಣಿ ಬಿಜೆಪಿಗೆ ಫಿಕ್ಸ್; ಯಾರಾಗ್ತಾರೆ ಮುಂದಿನ ಸಿಎಂ?
ದೆಹಲಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಸದ್ಯ ಬಿಜೆಪಿ 45 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 25 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಇದರ ನಡುವೆ ಈ ಬಾರಿ ಮುಖ್ಯಮಂತ್ರಿ ಯಾರಾಗಬಹುದು ಎಂಬ ಕುತೂಹಲ ಗರಿಗೆದರಿದ್ದು, ಇಲ್ಲಿದೆ ಅದರ ಮಾಹಿತಿ
![ದೆಹಲಿ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ? ಇಲ್ಲಿದೆ ಡೀಟೇಲ್ಸ್](https://cdn-vishwavani-prod.hindverse.com/media/original_images/Delhi_Election_2025_1_Xn6RHMz.jpg)
Delhi Election
![Profile](https://vishwavani.news/static/img/user.png)
ನವದೆಹಲಿ: ದೆಹಲಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, (Delhi Election Result 2025) ಸದ್ಯ ಬಿಜೆಪಿ 42 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ (Aam Admi Party) ಭಾರೀ ಹಿನ್ನಡೆಯನ್ನು ಕಂಡಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ (BJP) ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಇದರ ನಡುವೆ ಈ ಬಾರಿ ಮುಖ್ಯಮಂತ್ರಿ ಯಾರಾಗಬಹುದು ಎಂಬ ಕುತೂಹಲ ಗರಿಗೆದರಿದ್ದು, ಹಲವರು ಸಿಎಂ ರೇಸ್‌ನಲ್ಲಿದ್ದಾರೆ. ಕಳೆದ ಬಾರಿ ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಇದೀಗ ದೆಹಲಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಪರ್ವೇಶ್ ವರ್ಮಾ: ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ , ನವದೆಹಲಿ ಕ್ಷೇತ್ರದಿಂದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದಾರೆ. ಸದ್ಯ ಮುನ್ನಡೆಯನ್ನು ಕಾಯ್ದುಕೊಂಡಿರುವ ಅವರು ಬಿಜೆಪಿ ಗೆದ್ದರೆ ಸಿಎಂ ರೇಸ್‌ನಲ್ಲಿ ಇದ್ದಾರೆ. ರಾಜಕೀಯ ಅನುಭವ ಮತ್ತು ಕುಟುಂಬದ ಪರಂಪರೆ ಅವರನ್ನು ಪ್ರಮುಖ ಅಭ್ಯರ್ಥಿಯನ್ನಾಗಿಸಿದೆ.
ದುಷ್ಯಂತ್ ಗೌತಮ್ : ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಮುಖ ದಲಿತ ನಾಯಕರಾಗಿರುವ ದುಷ್ಯಂತ್ ಗೌತಮ್ ಈ ಬಾರಿ ಕರೋಲ್ ಬಾಗ್‌ನಿಂದ ಎಎಪಿಯ ವಿಶೇಷ್ ರವಿ ವಿರುದ್ಧ ಸ್ಪರ್ಧಿಸಿದ್ದಾರೆ. ಅವರಿಗೆ ದೆಹಲಿ ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಇವರೂ ಕೂಡ ಸಿಎಂ ರೇಸ್‌ನಲ್ಲಿದ್ದಾರೆ. ಈ ಹಿಂದೆ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿರುವ ಅವರು ವಿದ್ಯಾರ್ಥಿ ಜೀವನದಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ರಮೇಶ್ ಬಿಧುರಿ: ಮಾಜಿ ಸಂಸದ ಮತ್ತು ಗುರ್ಜರ್ ಸಮುದಾಯದ ಪ್ರಮುಖ ನಾಯಕ ರಮೇಶ್ ಬಿಧುರಿ ಅವರು ದೆಹಲಿ ಮುಖ್ಯಮಂತ್ರಿ ಅತಿಶಿ ಸಿಂಗ್ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ನೇರ ಮಾತಿನ ಸ್ವಭಾವಕ್ಕೆ ಹೆಸರುವಾಸಿಯಾದ ಅವರು ದೆಹಲಿಯಲ್ಲಿ ಬಿಜೆಪಿಯನ್ನು ಕಟ್ಟಲು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಒಂದು ವೇಳೆ ಈ ಬಾರಿ ಬಿಜೆಪಿ ಗೆದ್ದರೆ ಇವರೂ ಕೂಡ ಒಂದು ಪ್ರಮುಖ ಕಾರಣರಾಗಲಿದ್ದಾರೆ.
ಬನ್ಸುರಿ ಸ್ವರಾಜ್: ದಿವಂಗತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ, ಬನ್ಸುರಿ ಸ್ವರಾಜ್ ನವದೆಹಲಿಯಿಂದ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಹಿನ್ನಲೆಯಿಂದ ಬಂದಿರುವ ಇವರು ಕೂಡ ಸಿಎಂ ರೇಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಹರೀಶ್ ಖುರಾನಾ: ರಾಜಕೀಯ ಪರಂಪರೆಯನ್ನು ಹೊಂದಿರುವ ಮತ್ತೊಬ್ಬ ಅಭ್ಯರ್ಥಿ, ಖುರಾನಾ ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರ. ಅವರು ಮೋತಿ ನಗರದಿಂದ ಸ್ಪರ್ಧಿಸಿದ್ದು, ಮುನ್ನಡೆಯನ್ನು ಗಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Delhi Election 2025: ದೆಹಲಿ ಚುನಾವಣೆ: ಕಾಂಗ್ರೆಸ್ ʼಶೂನ್ಯʼ ಸಾಧನೆ-ʼಗ್ಯಾರಂಟಿʼ ಫ್ಲಾಪ್!
ಸದ್ಯ ದೆಹಲಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ 45 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಆಮ್ ಆದ್ಮಿಗೆ ಭಾರೀ ಮುಖಭಂಗವಾಗಿದ್ದು, ಆಪ್‌ನ ಘಟಾನುಘಟಿ ನಾಯಕರಾದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಹಾಗೂ ಅತಿಶಿ ಅವರು ಹಿನ್ನಡೆಯಲ್ಲಿದ್ದಾರೆ.