ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raksha Bandhan 2026: ಊಹೆಗೂ ಮೀರಿದ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಖಿಗಳು

ಈ ವರ್ಷದ ರಾಖಿ ಹಬ್ಬಕ್ಕೆ ದಿನ ಗಣನೆ ಆರಂಭವಾಗಿದೆ. ಕಾಟನ್, ಸಿಲ್ವರ್-ಗೋಲ್ಡನ್ ಪೇಪರ್, ಜರಿ-ದಾರದಂತಹ ಹಳೆ ವಿನ್ಯಾಸದ ರಾಖಿಗಳು ಸೈಡಿಗೆ ಸರಿದಿದ್ದು, ಕುಸುರಿ-ಕಲಾಂಕಾರಿ ಬಣ್ಣ ಬಣ್ಣದ ವಿನ್ಯಾಸದ ಡಿಸೈನರ್ ರಾಖಿಗಳು ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಊಹೆಗೂ ಮೀರಿದ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಖಿಗಳು

ಚಿತ್ರಕೃಪೆ: ಪಿಕ್ಸೆಲ್ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾರುಕಟ್ಟೆಯಲ್ಲಿ ಹಳೆ ವಿನ್ಯಾಸದ ರಾಖಿಗಳು (Raksha Bandhan 2026) ಸೈಡಿಗೆ ಸರಿದಿದ್ದು, ಹೊಸ ಲುಕ್‌ನಲ್ಲಿ ಡಿಸೈನರ್ ರಾಖಿಗಳಾಗಿ ಮರಳಿವೆ. ವೈಬ್ರೆಂಟ್ ಕಲರ್‌ಫುಲ್ ಬಣ್ಣಗಳಲ್ಲಿ, ನಾನಾ ಬಗೆಯ ವಿನ್ಯಾಸಗಳಲ್ಲಿ ಎಲ್ಲೆಡೆ ರಾರಾಜಿಸುತ್ತಿವೆ. ಅಷ್ಟೇಕೆ! ಪೆಂಡೆಂಟ್, ಸಿಲ್ವರ್, ಗೋಲ್ಡ್, ಪರ್ಲ್ಸ್, ಡೈಮಂಡ್‌ನಲ್ಲೂ ನಾನಾ ರೂಪದಲ್ಲಿ ಜ್ಯುವೆಲರಿ ಲೋಕದಲ್ಲೂ ಟ್ರೆಂಡಿಯಾಗಿವೆ.

ಗಣೇಶ, ಶಿವ, ಲಕ್ಷ್ಮೀ, ಓಂ, ನವಿಲು, ಅಷ್ಟು ಮಾತ್ರವಲ್ಲ, ಕನ್ನಡ ಮತ್ತು ಇಂಗ್ಲಿಷ್‌ ಅಕ್ಷರಗಳ ರೂಪದಲ್ಲೂಇವು ದೊರೆಯುತ್ತಿವೆ. ಸಾಮಾನ್ಯ ರಾಖಿಗಳು ಐದು ರೂ.ಗಳಿಗೆ ದೊರಕಿದರೆ ಅತ್ಯಮೂಲ್ಯವಾದ ರಾಖಿಗಳು ಲಕ್ಷ ರೂ.ಗಳಷ್ಟು ಬೆಲೆ ಹೊಂದಿವೆ ಎನ್ನುತ್ತಾರೆ ರಾಖಿ ಮಾರಾಟಗಾರರು.

Rakhi

ಚಿಣ್ಣರನ್ನು ಸೆಳೆಯುತ್ತಿರುವ ಕಾರ್ಟೂನ್ ರಾಖಿ

ಮಕ್ಕಳು ಹೆಚ್ಚಾಗಿ ಬಯಸುವ ಕಾರ್ಟೂನ್‌ಗಳ ಮಾದರಿಯಲ್ಲಿ ಲಭ್ಯವಿರುವ ಚೋಟಾ ಭೀಮ್, ಬಾಲ ಕೃಷ್ಣ, ಬಾಲ ಗಣೇಶ್, ಬ್ಯಾಟ್ಸ್ ಮನ್, ಸಂತ ಕ್ಲಾಸ್, ಸ್ಪೈಡರ್‌ಮನ್, ಮಿಕ್ಕಿ ಅಂಡ್ ಮೌಸ್, ರೋಬೊ, ಸಿಂಡ್ರೆಲಾ, ಚೈನಿ ಡಾಲ್, ಫಿಶ್, ಡೀರ್, ಪೋಕಿ ಬ್ಲಂಟ್, ಜೋಕರ್, ಡೆವಿಲ್, ಚೆರ್ರಿ, ಮಾಶಾ ಬೇರ್, ಅವೆಂಜರ್ ಸೇರಿದಂತೆ ನಾನಾ ಬಗೆಯ ಕಾರ್ಟೂನ್ ರಾಖಿಗಳು ಇಂದಿನ ಮಕ್ಕಳನ್ನು ಸೆಳೆದಿವೆ.

New Rakhis

ಗ್ರ್ಯಾಂಡ್ ಲುಕ್‌ಗಾಗಿ ಕಲಂಕಾರಿ-ಕುಂದನ್ ರಾಖಿ

ಇವುಗಳೊಂದಿಗೆ ಸೂಕ್ಷ್ಮ ಕುಸುರಿಯ ಕಲಾಂಕಾರಿ ಕುಂದನ್ ರಾಖಿಗಳು ಮಾರುಕಟ್ಟೆಯಲ್ಲಿ ಹಲವಾರು ಡಿಸೈನ್‌ಗಳಲ್ಲಿ ಸಿಗುತ್ತಿವೆ. ಮುತ್ತು, ಕಪ್ಪೆಚಿಪ್ಪು, ಮೆಟಲ್, ವೆಲ್ವೆಟ್, ಸಿಲ್ವರ್‌ ಪೇಪರ್, ಗೋಲ್ಡ್ ಪೇಪರ್ ಸೇರಿದಂತೆ ನಾನಾ ಮೆಟಿರೀಯಲ್‌ನಲ್ಲಿ ಸಿದ್ಧಪಡಿಸಲಾಗುವ ಈ ರಾಖಿಗಳು ಧರಿಸಿದಾಗ ಎಂತಹವರಿಗೂ ರಾಯಲ್ ಲುಕ್ ನೀಡುತ್ತವೆ.

ಚಿನ್ನ-ಬೆಳ್ಳಿ ಲೇಪಿತ ರಾಖಿಗಳು

ಶ್ರೀಮಂತರಿಗೆಂದೇ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ಲೇಪಿತ ಮತ್ತು ಡೈಮಂಡ್ ಹರಳುಗಳುಳ್ಳ ರಾಖಿಗಳು ದೊರೆಯುತ್ತಿವೆ. ಇವುಗಳೊಂದಿಗೆ ರೂಬಿ ಮತ್ತು ಡೈಮಂಡ್ 18k ವೈಟ್ ಗೋಲ್ಡ್ ಮಾದರಿಯವು ಕೂಡ ಇಂದು ಟ್ರೆಂಡ್‌ನಲ್ಲಿವೆ.

Rakhis

ಸಿಂಪಲ್ ಡಿಸೈನ್‌ನಲ್ಲೆ ಬಗೆಬಗೆಯ ರಾಖಿಗಳು

ಚಿಕ್ಕ ಡಿಸೈನ್‌ನಲ್ಲಿ ಸಿಂಪಲ್ ರಾಖಿಗಳು ಸಿದ್ಧಗೊಂಡಿವೆ. ಕಡಿಮೆ ಬೆಲೆಯಲ್ಲಿ ಹೊಸ ಹೊಸ ವಿನ್ಯಾಸದೊಂದಿಗೆ ಮರಳಿವೆ.

ರಾಖಿ ಪ್ರಿಯರಿಗೆ ಇಲ್ಲಿವೆ ಸಲಹೆ

ಸಹೋದರರಿಗೆ ರಾಖಿ ಕಟ್ಟುವುದು ಬೆಲೆ ಕಟ್ಟಲಾಗದ ವಿಷಯ. ಆದರೂ, ನಿಮ್ಮ ಬಜೆಟ್‌ನ ಇತಿಮಿತಿಯಲ್ಲಿಯೇ ಅತ್ಯಂತ ಆಕರ್ಷಕವಾದ ವಿನ್ಯಾಸಗಳಲ್ಲಿ ರಾಖಿಗಳನ್ನು ಕೊಳ್ಳಿ. ಕೊಳ್ಳುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

  • ಉತ್ತಮ ಗುಣಮಟ್ಟದ ರಾಖಿಯ ಆಯ್ಕೆ ನಿಮ್ಮದಾಗಲಿ.
  • ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವಂತಹದ್ದನ್ನು ಕಟ್ಟುವುದು ಸೂಕ್ತ.
  • ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವುದನ್ನು ಆಯ್ಕೆ ಮಾಡಿ.
  • ಅಣ್ಣ-ತಮ್ಮಂದಿರ ವಯಸ್ಸಿಗೆ ಸೂಟ್ ಆಗುವಂತದ್ದನ್ನು ಕಟ್ಟಿ.
  • ಬಣ್ಣ ಬಿಡುವಂತಹ ರಾಖಿ ಕೊಳ್ಳಬೇಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)