Saudi Arabia Bus Accident: ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ; ಹೈದರಾಬಾದ್‌ನ ಒಂದೇ ಕುಟುಂಬದ 18 ಮಂದಿ ಸಾವು
ಸೌದಿ ಅರೇಬಿಯಾದಲ್ಲಿ ನವೆಂಬರ್ 17ರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 42 ಮಂದಿ ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿದ್ದಾರೆ. ಮೃತರ ಪೈಕಿ ಹೈದರಾಬಾದ್‌ನ ಒಂದೇ ಕುಟುಂಬದ 18 ಮಂದಿ ಸೇರಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 42 ಭಾರತೀಯರು ಮೃತಪಟ್ಟಿದ್ದಾರೆ. -
ದೆಹಲಿ, ನ. 17: ಸೌದಿ ಅರೇಬಿಯಾದಲ್ಲಿ ನವೆಂಬರ್ 17ರ ಮುಂಜಾನೆ ಭೀಕರ ರಸ್ತೆ ಅಪಘಾತ ನಡೆದಿದ್ದು, ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಬಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸುಮಾರು 42 ಮಂದಿ ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿದ್ದಾರೆ (Saudi Arabia Bus Accident). ಮೃತರ ಪೈಕಿ ಹೈದರಾಬಾದ್‌ನ ಒಂದೇ ಕುಟುಂಬದ 18 ಮಂದಿ ಸೇರಿದ್ದಾರೆ. ಮೆಕ್ಕಾದಲ್ಲಿ ಉಮ್ರಾ ವಿಧಿಗಳು ಮುಗಿಸಿಕೊಂಡು ಮದೀನಾಕ್ಕೆ ಹೊರಟಿದ್ದ ಯಾತ್ರಿಕರಲ್ಲಿ ಹಲವರು ಡಿಕ್ಕಿ ಸಂಭವಿಸಿದ ಸಂದರ್ಭ ನಿದ್ರೆಯಲ್ಲಿದ್ದರು ಎಂದು ವರದಿಯಾಗಿದೆ. ಭೀಕರ ಡಿಕ್ಕಿಯ ಬಳಿಕ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಭಸ್ಮವಾಗಿದೆ.
ʼʼನನ್ನ ಸಂಬಂಧಿಕರು, ಅವರ ಮಗ, ಮೂವರು ಹೆಣ್ಣು ಮಕ್ಕಳು 8 ದಿನಗಳ ಹಿಂದ ಉಮ್ರಾ ಯಾತ್ರೆಗಾಗಿ ಮದೀನಾಕ್ಕೆ ತೆರಳಿದ್ದರು. ಉಮ್ರಾ ಯಾತ್ರೆ ಮುಗಿಸಿಕೊಂಡು ಅವರು ಮದೀನಾಕ್ಕೆ ಹಿಂದಿರುಗುತ್ತಿದ್ದ ವೇಳೆ ಮುಂಜಾನೆ ಸುಮಾರು 1.30ರ ವೇಳೆಗೆ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದಿದೆʼʼ ಎಂದು ಮೃತರ ಸಂಬಂಧಿಕ ಮೊಹಮ್ಮದ್ ಆಸಿಫ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮದೀನಾ ಸಮೀಪ ನಡೆದ ಬಸ್ ಅಪಘಾತದ ದೃಶ್ಯ:
A tragic bus accident on the Makkah–Madinah route claimed the lives of three family members from Mehraj Colony (a mother and her two sons and two relatives from Murad Nagar) and five members from Mughal Nagar, Karwan (a mother, her son, daughter-in-law, and two grandsons).
— Kausar Mohiuddin (@kausarmohiuddin) November 17, 2025
I am… pic.twitter.com/zJAfEZjd2m
ದುರಂತಕ್ಕೂ ಮುನ್ನ ಅವರು ತಮ್ಮ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಆಸಿಫ್ ಹೇಳಿದ್ದಾರೆ. "9 ವಯಸ್ಕರು ಮತ್ತು 9 ಮಕ್ಕಳು ಸೇರಿ ಒಂದೇ ಕುಟುಂಬದ 18 ಮಂದಿ ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದ್ದಾರೆ. ಮೃತರ ಪೈಕಿ ಹೈದರಾಬಾದ್‌ನ ರಾಮನಗರದ ನಾಸಿರುದ್ದೀನ್ (70), ಅವರ ಪತ್ನಿ ಅಖ್ತರ್ ಬೇಗಂ (62), ಮಕ್ಕಳಾದ ಸಲಾವುದ್ದೀನ್ (42), ಆಮೀನಾ (38), ಶಬ್ನಾ (40) ಮತ್ತು ಅವರ ಮಕ್ಕಳು ಸೇರಿದ್ದಾರೆ.
ಘಟನೆ ವಿವರ
ಮೃತರ ಪೈಕಿ ಬಹುತೇಕರು ಹೈದರಾಬಾದ್ ಮೂಲದವರು. ಮದೀನಾದಿಂದ ಸುಮಾರು 30 ಕಿ.ಮೀ. ದೂರದಲ್ಲಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವ, ಬಸ್ ಧಗ ದಹಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ವೇಳೆ ಬಹುತೇಕರು ಮಲಗಿದ್ದರಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜಿದ್ದಾದ ಕಾನ್ಸುಲೇಟ್ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ" ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಘಟನೆಯ ನಂತರ ಭಾರತೀಯ ರಾಯಭಾರ ಕಚೇರಿಯು ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿಯನ್ನು ಸ್ಥಾಪಿಸಿದೆ. ಸಹಾಯವಾಣಿಯ ಟೋಲ್ ಫ್ರೀ ಸಂಖ್ಯೆ - 8002440003 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.