ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಕರ್ನಾಟಕದ ಅಳಿಯ ! ಟ್ರಂಪ್‌ ಪಕ್ಷ ಸೋಲಿಸಿದ ಅಬ್ದುಲ್ ಎಲ್-ಸಯೀದ್‌ಗಿದೆ ಭಟ್ಕಳದ ನಂಟು

ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ನಾಯಕರೊಬ್ಬರು ಅಮೆರಿಕದ ಸೆನೆಟ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2026ರ ಯುಎಸ್ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ ಕ್ಷೇತ್ರದಿಂದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಅಬ್ದುಲ್ ಎಲ್-ಸಯೀದ್ ಭರ್ಜರಿ ಜಯ ದಾಖಲಿಸಿದ್ದಾರೆ.

ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಕರ್ನಾಟಕದ ಅಳಿಯ!

ಡಾ. ಅಬ್ದುಲ್ ಎಲ್-ಸಯೀದ್ -

Vishakha Bhat Heggar
Vishakha Bhat Heggar Nov 4, 2026 8:35 PM

ವಾಷಿಂಗ್ಟನ್‌: ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ನಾಯಕರೊಬ್ಬರು ಅಮೆರಿಕದ ಸೆನೆಟ್ (America Senator) ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2026ರ ಯುಎಸ್ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ ಕ್ಷೇತ್ರದಿಂದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಅಬ್ದುಲ್ ಎಲ್-ಸಯೀದ್ (Abdul El-Sayed) ಭರ್ಜರಿ ಜಯ ದಾಖಲಿಸಿದ್ದಾರೆ. ಈ ಐತಿಹಾಸಿಕ ವಿಜಯದ ಬೆನ್ನಲ್ಲೇ, ನೂತನ ಸೆನೆಟರ್‌ಗೆ ಕರ್ನಾಟಕದ ಕರಾವಳಿ ಭಾಗದೊಂದಿಗೆ ಇರುವ ನಂಟು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿಯಾಗಿದೆ.

ಡಾ. ಅಬ್ದುಲ್ ಎಲ್-ಸಯೀದ್ ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಳಿಯ ಎಂಬುದು ಭಾರತೀಯರಿಗೆ, ವಿಶೇಷವಾಗಿ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಡಾ. ಅಬ್ದುಲ್ ಎಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಮೂಲತಃ ಭಟ್ಕಳದ ಪ್ರತಿಷ್ಠಿತ ಜುಕಾಕು ಕುಟುಂಬದವರಾಗಿದ್ದಾರೆ. ಸಾರಾ ಅವರ ತಂದೆ ಡಾ. ತಯ್ಯಬ್ ಜುಕಾಕು ಅವರು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿ ಪ್ರಸಿದ್ಧ ಕಿಡ್ನಿ ತಜ್ಞರಾಗಿ ನೆಲೆಸಿದ್ದಾರೆ.

ಸಾರಾ ಅವರ ತಾತ, ದಿವಂಗತ ಶಂಸುದ್ದೀನ್ ಜುಕಾಕು ಅವರು ಭಟ್ಕಳದ ಹಿರಿಯ ರಾಜಕೀಯ ಮತ್ತು ಸಾಮಾಜಿಕ ಮುಖಂಡರಾಗಿದ್ದರು. ವಿಶೇಷವೆಂದರೆ, ಅವರು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಬಿ. ಡಿ. ಜತ್ತಿ ಅವರ ಸಚಿವ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ ಮಹತ್ವದ ಸೇವೆ ಸಲ್ಲಿಸಿದ್ದರು. ಈಜಿಪ್ಟ್ ಮೂಲದ ವಲಸಿಗ ದಂಪತಿಯ ಮಗನಾಗಿ ಅಮೆರಿಕದಲ್ಲಿ ಜನಿಸಿದ ಅಬ್ದುಲ್ ಎಲ್-ಸಯೀದ್ ಹಾಗೂ ಡಾ. ಸಾರಾ ಅವರ ಪರಿಚಯ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆಗಿತ್ತು. ನಂತರ ಈ ಪರಿಚಯ ಪ್ರೀತಿಗೆ ತಿರುಗಿ, 2006 ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಸದ್ಯ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಬ್ರೆಜಿಲ್‌ನಲ್ಲಿ ಲುಲಾ ಡ ಸಿಲ್ವಾ ಐತಿಹಾಸಿಕ ಗೆಲುವು: ಡೊನಾಲ್ಡ್‌ ಟ್ರಂಪ್‌ ವಿರೋಧಿಗೆ 4ನೇ ಬಾರಿ ಅಧ್ಯಕ್ಷ ಪಟ್ಟ

ಮಿಚಿಗನ್ ಸೆನೆಟ್ ಕಣದಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಪ್ರಚಾರದ ವೇಳೆ ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಬ್ದುಲ್ ಎಲ್-ಸಯೀದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ, ಟ್ರಂಪ್ ಅವರ ತೀವ್ರ ವಿರೋಧ ಹಾಗೂ ರಿಪಬ್ಲಿಕನ್ ಪಕ್ಷದ ಪ್ರಬಲ ಅಭ್ಯರ್ಥಿ ಮೈಕ್ ರೋಜರ್ಸ್ ಅವರ ಸವಾಲನ್ನು ಧೀರವಾಗಿ ಎದುರಿಸಿದ ಅಬ್ದುಲ್, ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕದ ಉನ್ನತ ಸದನವಾದ ಸೆನೆಟ್‌ಗೆ ಆಯ್ಕೆಯಾದ ದೇಶದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಅಬ್ದುಲ್ ಎಲ್-ಸಯೀದ್ ಅವರ ಈ ಸಾಧನೆಗೆ ಭಟ್ಕಳ ಸೇರಿದಂತೆ ಕರ್ನಾಟಕದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.