ಬ್ರೆಜಿಲ್ನಲ್ಲಿ ಲುಲಾ ಡ ಸಿಲ್ವಾ ಐತಿಹಾಸಿಕ ಗೆಲುವು: ಡೊನಾಲ್ಡ್ ಟ್ರಂಪ್ ವಿರೋಧಿಗೆ 4ನೇ ಬಾರಿ ಅಧ್ಯಕ್ಷ ಪಟ್ಟ
Lula da Silva: ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ ಶೇ. 51.8ರಷ್ಟು ಮತಗಳನ್ನು ಪಡೆದು ಫ್ಲಾವಿಯೊ ಬೊಲ್ಸೊನಾರೊ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಾಲ್ಕನೇ ಬಾರಿ ಅಧ್ಯಕ್ಷರಾಗುವ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿರುವ ಬೊಲ್ಸೊನಾರೊ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಹೊಸ ಅವಧಿಯಲ್ಲಿ ಆರ್ಥಿಕ ಸವಾಲುಗಳು, ಅಪರಾಧ ನಿಯಂತ್ರಣ ಮತ್ತು ವಿರೋಧ ಪಕ್ಷಗಳ ಪ್ರಾಬಲ್ಯ ಹೊಂದಿರುವ ಸಂಸತ್ತನ್ನು ಎದುರಿಸುವುದು ಲುಲಾ ಅವರಿಗೆ ಪ್ರಮುಖ ಸವಾಲಾಗಲಿದೆ.
ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ -
ಬ್ರಸಿಲಿಯಾ, ಅ. 26: ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ (Lula da Silva) ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ದೇಶದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಬಲಪಂಥೀಯ ಸೆನೆಟರ್ ಫ್ಲಾವಿಯೊ ಬೊಲ್ಸೊನಾರೊ ವಿರುದ್ಧದ ಅಂತಿಮ ಸುತ್ತಿನ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿ ಲುಲಾ ಶೇ. 51.8ರಷ್ಟು ಮತಗಳನ್ನು ಪಡೆದರೆ, ಫ್ಲಾವಿಯೊ ಶೇ. 48.2ರಷ್ಟು ಮತ ಗಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಫಲಿತಾಂಶವನ್ನು ಬ್ರೆಜಿಲ್ನ ಸುಪೀರಿಯರ್ ಎಲೆಕ್ಟೋರಲ್ ಕೋರ್ಟ್ ದೃಢಪಡಿಸಿದೆ. ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಲುಲಾ, ಅಂತಿಮ ಸುತ್ತಿನಲ್ಲಿ ಭರ್ಜರಿ ತಿರುಗೇಟು ನೀಡುವ ಮೂಲಕ ರಾಜಕೀಯ ಪುನರಾಗಮನ ಮಾಡಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾಗೆ ಐತಿಹಾಸಿಕ ಜಯ:
Trump critic Lula wins reelection in Brazil, securing a historic 4th non-consecutive presidential term after one of the tightest runoff counts imaginable. A political comeback with almost no modern parallel. Visuals Lula celebrating with his supporters. https://t.co/lFDbv7MxYX
— Subodh Kumar (@kumarsubodh_) October 26, 2026
ಸೋಲು ಒಪ್ಪಿಕೊಳ್ಳದ ಫ್ಲಾವಿಯೊ ಬೊಲ್ಸೊನಾರೊ
ಚುನಾವಣೆಯಲ್ಲಿ ಸೋಲು ಕಂಡರೂ ಫ್ಲಾವಿಯೊ ಬೊಲ್ಸೊನಾರೊ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಮತದಾನದ ಸಮಯವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿರುವ ಅವರು, ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಮತದಾನದ ಅವಧಿ ವಿಸ್ತರಣೆಯು ಅಭೂತಪೂರ್ವ ಕ್ರಮ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಮತದಾನದ ಸಮಯ ವಿಸ್ತರಿಸುವಂತೆ ಲುಲಾ ಮತ್ತು ಬೊಲ್ಸೊನಾರೊ ಇಬ್ಬರೂ ಮನವಿ ಮಾಡಿದ್ದರು ಎಂದು ವರದಿಯಾಗಿದೆ.
ಲುಲಾ ಅವರ ಗೆಲುವಿನ ಹಿನ್ನೆಲೆಯಲ್ಲಿ ಬ್ರೆಜಿಲ್ನಾದ್ಯಂತ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಪತ್ನಿ ರೊಸಾಂಜೆಲಾ ದ ಸಿಲ್ವಾ ಹಾಗೂ ಪಕ್ಷದ ನಾಯಕರೊಂದಿಗೆ ಲುಲಾ ವಿಜಯೋತ್ಸವದಲ್ಲಿ ಭಾಗವಹಿಸಿದ್ದಾರೆ.
ಬಡತನದಿಂದ ಅಧ್ಯಕ್ಷ ಗಾದಿಯವರೆಗೆ
ಬಡ ರೈತ ಕುಟುಂಬದಲ್ಲಿ ಜನಿಸಿದ ಲುಲಾ ದ ಸಿಲ್ವಾ ಅವರ ರಾಜಕೀಯ ಜೀವನ ಹಲವು ಏಳುಬೀಳುಗಳಿಂದ ಕೂಡಿದೆ. ಲೋಹ ಕಾರ್ಮಿಕರಾಗಿ ಮತ್ತು ಕಾರ್ಮಿಕ ಸಂಘದ ನಾಯಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, 2003ರಿಂದ 2011ರವರೆಗೆ ಎರಡು ಅವಧಿಗೆ ಬ್ರೆಜಿಲ್ ಅಧ್ಯಕ್ಷರಾಗಿದ್ದರು.
ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ 2018ರಲ್ಲಿ ಜೈಲು ಸೇರಿದ್ದ ಲುಲಾ, ಬಳಿಕ ನ್ಯಾಯಾಲಯದ ಬೆಳವಣಿಗೆಗಳಿಂದ ರಾಜಕೀಯಕ್ಕೆ ಮರಳುವ ಅವಕಾಶ ಪಡೆದರು. 2022ರ ಚುನಾವಣೆಯಲ್ಲಿ ಜೈರ್ ಬೊಲ್ಸೊನಾರೊ ಅವರನ್ನು ಸೋಲಿಸಿ ಮತ್ತೆ ಅಧ್ಯಕ್ಷರಾಗಿದ್ದರು.
ತಮ್ಮ ಮೂರನೇ ಅವಧಿಯಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಲ್ಲದೆ, ಲಕ್ಷಾಂತರ ಜನರು ಹಸಿವಿನಿಂದ ಹೊರಬರಲು ನೆರವಾದ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಆದರೆ ಜೀವನ ವೆಚ್ಚದ ಏರಿಕೆ ಮತ್ತು ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಅವರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿವೆ.
ಅಮೆರಿಕದ ಪ್ರಭಾವದ ವಿರುದ್ಧ ಸಾರ್ವಭೌಮತ್ವದ ಪ್ರತಿಪಾದನೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಟೀಕಿಸುತ್ತಾ ಬಂದಿರುವ ಲುಲಾ, ಚುನಾವಣಾ ಪ್ರಚಾರದಲ್ಲಿ ಬ್ರೆಜಿಲ್ನ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅಮೆರಿಕದ ವಾಣಿಜ್ಯ ಮತ್ತು ರಾಜತಾಂತ್ರಿಕ ಒತ್ತಡಗಳ ನಡುವೆಯೂ ದೇಶದ ಸ್ವತಂತ್ರ ನಿರ್ಧಾರಗಳಿಗೆ ಆದ್ಯತೆ ನೀಡುವುದಾಗಿ ಪ್ರತಿಪಾದಿಸಿದ್ದರು.
ಬಡವರು ಮತ್ತು ಕಾರ್ಮಿಕರ ಜೀವನಮಟ್ಟ ಸುಧಾರಿಸುವ ಭರವಸೆಗಳೊಂದಿಗೆ ಅವರು ಉಚಿತ ಸಾರ್ವಜನಿಕ ಸಾರಿಗೆ ಹಾಗೂ ಕಲ್ಯಾಣ ಯೋಜನೆಗಳ ವಿಸ್ತರಣೆಯಂತಹ ಪ್ರಸ್ತಾಪಗಳನ್ನು ಮುಂದಿಟ್ಟಿದ್ದರು.
ನಾಲ್ಕನೇ ಅವಧಿಯಲ್ಲಿ ಎದುರಾಗಲಿರುವ ಸವಾಲುಗಳು
ಲುಲಾ ಅವರಿಗೆ ಗೆಲುವು ದೊರೆತಿದ್ದರೂ ಮುಂದಿನ ಆಡಳಿತ ಸುಲಭವಾಗಿರುವುದಿಲ್ಲ. ಪ್ರಜಾಪ್ರಭುತ್ವಕ್ಕೆ ಮರಳಿದ ಬಳಿಕ ಬ್ರೆಜಿಲ್ ಕಂಡ ಅತ್ಯಂತ ಸಂಪ್ರದಾಯವಾದಿ ಸಂಸತ್ತುಗಳಲ್ಲಿ ಒಂದನ್ನು ದೇಶ ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.
ಬೊಲ್ಸೊನಾರೊ ಅವರ ಲಿಬರಲ್ ಪಾರ್ಟಿ ಮತ್ತು ಅದರ ಮಿತ್ರಪಕ್ಷಗಳು ಸಂಸತ್ತಿನಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದುವ ಸಾಧ್ಯತೆಯಿದೆ. ಇದರಿಂದ ಲುಲಾ ಅವರ ನೀತಿಗಳಿಗೆ ವಿರೋಧ ಎದುರಾಗಬಹುದು. ಸುಪ್ರೀಂ ಕೋರ್ಟ್ ನೇಮಕಾತಿಗಳು, ರಾಜಕೀಯ ಮೈತ್ರಿಗಳು ಮತ್ತು ಸಂಭಾವ್ಯ ಮಹಾಭಿಯೋಗದಂತಹ ವಿಚಾರಗಳು ಅವರ ಆಡಳಿತಕ್ಕೆ ಸವಾಲಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದರ ಜತೆಗೆ, ವಯಸ್ಸು ಮತ್ತು ದೇಶದಲ್ಲಿನ ರಾಜಕೀಯ ವಿಭಜನೆಯೂ ಲುಲಾ ಅವರಿಗೆ ಸವಾಲಾಗಲಿದೆ. ಚುನಾವಣೆಯಲ್ಲಿ ಸುಮಾರು ಅರ್ಧದಷ್ಟು ಮತದಾರರು ಅವರ ವಿರುದ್ಧ ಮತ ಚಲಾಯಿಸಿರುವುದು ದೇಶದಲ್ಲಿ ಬದಲಾವಣೆಯನ್ನು ಬಯಸುವ ಜನರ ಸಂಖ್ಯೆಯೂ ಗಣನೀಯವಾಗಿದೆ ಎಂಬುದರ ಸೂಚೆನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬ್ರೆಜಿಲ್ನಲ್ಲಿ ಅಪರಾಧ ಚಟುವಟಿಕೆಗಳು ಮತ್ತು ಸಂಘಟಿತ ಅಪರಾಧ ಗುಂಪುಗಳ ಹಾವಳಿಯನ್ನು ನಿಯಂತ್ರಿಸುವುದು ಕೂಡ ಲುಲಾ ಅವರ ಮುಂದಿರುವ ಪ್ರಮುಖ ಸವಾಲಾಗಿದೆ. ಒಟ್ಟಿನಲ್ಲಿ, ಐತಿಹಾಸಿಕ ರಾಜಕೀಯ ಪುನರಾಗಮನದೊಂದಿಗೆ ನಾಲ್ಕನೇ ಬಾರಿ ಅಧ್ಯಕ್ಷ ಸ್ಥಾನಕ್ಕೇರಲಿರುವ ಲುಲಾ ದ ಸಿಲ್ವಾ ಅವರಿಗೆ ಜನರ ನಿರೀಕ್ಷೆಗಳನ್ನು ಈಡೇರಿಸುವುದರ ಜೊತೆಗೆ, ಬಲಿಷ್ಠ ವಿರೋಧ ಪಕ್ಷಗಳಿರುವ ಸಂಸತ್ತಿನೊಂದಿಗೆ ಆಡಳಿತ ನಡೆಸುವ ದೊಡ್ಡ ಹೊಣೆಗಾರಿಕೆ ಎದುರಾಗಿದೆ.