ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆಗೆ ನುಗ್ಗಲು ಯತ್ನಿಸಿದ ಶಸ್ತ್ರ ಸಜ್ಜಿತ ವ್ಯಕ್ತಿ
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ಸುಂಕ ಸಮರ ಸಾರಿರುವ ಮಧ್ಯೆ ಫ್ಲೋರಿಡಾದಲ್ಲಿರುವ ಅವರ ಮನೆ ಬಳಿ ಶೂಟೌಟ್ ಆಗಿದೆ. ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ರಹಸ್ಯ ಏಜೆಂಟ್ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ). -
ವಾಷಿಂಗ್ಟನ್, ಫೆ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಜಾಗತಿಕವಾಗಿ ಸುಂಕ ಸಮರ ಸಾರಿರುವ ಮಧ್ಯೆ ಫ್ಲೋರಿಡಾದಲ್ಲಿರುವ ಅವರ ಮನೆ ಬಳಿ ಶೂಟೌಟ್ ಆಗಿದೆ. ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ (Mar-a-Lago estate) ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ರಹಸ್ಯ ಏಜೆಂಟ್ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ನಡೆದಾಗ ಟ್ರಂಪ್ ಸ್ಥಳದಲ್ಲಿರಲಿಲ್ಲ. ಅಮೆರಿಕ ಸೀಕ್ರೆಟ್ ಸರ್ವೀಸ್ ವಕ್ತಾರ ಆಂಟೋನಿ ಗುಗ್ಲಿಯೆಲ್ಮಿ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
"ಇಂದು ಮುಂಜಾನೆ ಮಾರ್-ಎ-ಲಾಗೊದಲ್ಲಿರುವ ಎಸ್ಟೇಟ್ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿದ ಶಸ್ತ್ರ ಸಜ್ಜಿತ ವ್ಯಕ್ತಿಯನ್ನು ಅಮೆರಿಕ ಸೀಕ್ರೆಟ್ ಸರ್ವೀಸ್ ಏಜೆಂಟ್ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ" ಎಂದು ಗುಗ್ಲಿಯೆಲ್ಮಿ ಬರೆದುಕೊಂಡಿದ್ದಾರೆ.
20 ವರ್ಷದ ಯುವಕ ಮಾರ್-ಎ-ಲಾಗೊ ಎಸ್ಟೇಟ್ ಪ್ರವೇಶಿಸಲು ಯತ್ನಿಸಿ ಹತನಾಗಿದ್ದಾನೆ ಎಂದು ಮೂಲಗಳು ದೃಢಪಡಿಸಿವೆ. ಆತ ವೆಸ್ಟ್ ಪಾಮ್ ಬೀಚ್ ಎಸ್ಟೇಟ್‌ನ ಉತ್ತರ ದ್ವಾರವನ್ನು ಸಮೀಪಿಸಿದ ವೇಳೆ ಆತನ ಬಳಿ ಶಾಟ್‌ಗನ್ ಮತ್ತು ಫ್ಯೂಲ್ ಕ್ಯಾನ್‌ನಂತೆ ಕಾಣುವ ವಸ್ತು ಇತ್ತು ಎನ್ನಲಾಗಿದೆ. ಆತ ಎಸ್ಟೇಟ್‌ನ ಸುತ್ತಲಿನ ಸುರಕ್ಷಿತ ಪರೀಧಿ ದಾಟಿದ್ದ ಎನ್ನಲಾಗಿದೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಗಾಯವಾಗಿಲ್ಲ. ಎಫ್‌ಬಿಐ, ಸೀಕ್ರೆಟ್ ಸರ್ವೀಸ್ ಮತ್ತು ಪಾಮ್ ಬೀಚ್ ಕೌಂಟಿ ಶೆರಿಫ್ ಕಚೇರಿ ದಾಳಿಯ ತನಿಖೆ ಕೈಗೆತ್ತಿಕೊಂಡಿದೆ.
ಆಂಟೋನಿ ಗುಗ್ಲಿಯೆಲ್ಮಿ ಅವರ ಎಕ್ಸ್ ಪೋಸ್ಟ್:
An armed man was shot & killed by U.S. Secret Service agents & @PBCountySheriff after unlawfully entering the secure perimeter at Mar-a-Lago early this morning. A press briefing with additional details will be held at 9:00 a.m with @FBI and Palm Beach County. pic.twitter.com/jAXhdb1xEL
— Anthony Guglielmi (@AJGuglielmi) February 22, 2026
ವ್ಯಕ್ತಿಯ ಹಿನ್ನೆಲೆ, ದಾಳಿಯ ಉದ್ದೇಶ ಸೇರಿದಂತೆ ಈ ಘಟನೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ದಾಲಿ ನಡೆಸಿದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ.
ಸುಪ್ರೀಂ ತಡೆಯ ಬಳಿಕವೂ ಮೊಂಡಾಟ ಬಿಡದ ಡೊನಾಲ್ಡ್ ಟ್ರಂಪ್; ಸುಂಕ ಶೇಕಡಾ 10ರಿಂದ ಶೇಕಡಾ 15ಕ್ಕೆ ಏರಿಕೆ
ಟ್ರಂಪ್ ಮೇಲೆ ನಿರಂತರ ದಾಳಿ
ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಹಲವು ಹತ್ಯೆ ಸಂಚುಗಳು ಮತ್ತು ಪ್ರಯತ್ನಗಳನ್ನು ಅವರು ಎದುರಿಸಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಫ್ಲೋರಿಡಾದ ಪಾಮ್ ಬೀಚ್‌ನ ಗಾಲ್ಫ್ ಕ್ಲಬ್‌ನಿಂದ ಹೊರ ಬರುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿತ್ತು.
ಟ್ರಂಪ್ ಆಡುತ್ತಿದ್ದ ವೇಳೆ ಗಾಲ್ಫ್ ಕೋರ್ಟ್ ಆವರಣದ ಬಳಿ ಗುಂಡು ಹಾರಿದ್ದನ್ನು ಭದ್ರತಾ ಪಡೆ ಗಮನಿಸಿ ಶಂಕಿತನತ್ತ ಪ್ರತಿದಾಳಿ ನಡೆಸಿತು. ಆದರೆ ಅಷ್ಟರಲ್ಲಿ ಶಂಕಿತ ಓಡಿಹೋಗಿದ್ದ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಶಂಕಿತನ ಕಾರು, ಲೈಸೆನ್ಸ್ ಪ್ಲೇಟ್‌ಗಳ ಫೋಟೊ ತನಿಖಾಧಿಕಾರಿಗಳಿಗೆ ಒಪ್ಪಿಸಿದ್ದರು. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುವುದಕ್ಕೆ ಮುನ್ನ ಈ ದಾಳಿ ಸಂಭವಿಸಿತ್ತು. ಅದಕ್ಕೂ ಮುನ್ನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಟ್ರಂಪ್ ಮೇಲೆ 20 ವರ್ಷದ ಯುವ ಗುಂಡಿನ ದಾಳಿ ನಡೆಸಿದ್ದ. ಗುಂಡು ಟ್ರಂಪ್ ಅವರ ಕಿವಿ ಪಕ್ಕದಲ್ಲೇ ಹಾದು ಹೋಗಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಸೀಕ್ರೆಟ್ ಸರ್ವೀಸ್ ಏಜೆಂಟರು ಟ್ರಂಪ್ ಅವರನ್ನು ರಕ್ಷಿಸಿದ್ದರು.